ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ಗೆ ಟೀಮ್ ಇಂಡಿಯಾ 318 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು.
ಮೊದಲ ವಿಕೆಟ್ 64 ರನ್ಗಳ ಕಲೆಹಾಕಿದ ಈ ಜೋಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಹಂತದಲ್ಲಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ರೋಹಿತ್ ಶರ್ಮಾ( 28) ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಕ್ರೀಸ್ಗೆ ಆಗಮಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧವನ್ಗೆ ಉತ್ತಮ ಸಾಥ್ ನೀಡಿದರು.
ಅಲ್ಲದೆ 3ನೇ ವಿಕೆಟ್ಗೆಬ 105 ರನ್ಗಳ ಜೊತೆಯಾಟವಾಡಿದರು. ಈ ನಡುವೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕಗಳನ್ನು ಪೂರೈಸಿದರು. ಹಾಫ್ ಸೆಂಚುರಿ ಪೂರೈಸಿದ ಬೆನ್ನಲ್ಲೇ 60 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 56 ರನ್ ಬಾರಿಸಿದ್ದ ಕೊಹ್ಲಿ ಮಾರ್ಕ್ವುಡ್ ಎಸೆದಲ್ಲಿ ಕ್ಯಾಚ್ ನೀಡಿ ಹೊರನಡೆದರು. ನಾಯಕನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (6) ಕೂಡ ಮಾರ್ಕ್ವುಡ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಉತ್ತಮ ಆಟ ಪ್ರದರ್ಶಿಸಿದರು. ಅಲ್ಲದೆ ಶಿಖರ್ ಧವನ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸುವ ಜವಾಬ್ದಾರಿ ಹೊತ್ತುಕೊಂಡರು. ಈ ಹಂತದಲ್ಲಿ ಶತಕದತ್ತ ಮುಖ ಮಾಡಿದ್ದ ಶಿಖರ್ ಧವನ್ 100ರ ಅಂಚಿನಲ್ಲಿ ಎಡವಿದರು. ಬೆನ್ ಸ್ಟೋಕ್ಸ್ ಎಸೆತದಲ್ಲಿ ಪುಲ್ ಮಾಡಲೋಗಿ ಇಯಾನ್ ಮೋರ್ಗನ್ಗೆ ಕ್ಯಾಚ್ ನೀಡಿ ಶಿಖರ್ ಧವನ್ ಶತಕ ತಪ್ಪಿಸಿಕೊಂಡರು. 106 ಎಸೆತಗಳನ್ನು ಎದುರಿಸಿದ್ದ ಧವನ್ 2 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 98ಕ್ಕೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿ ನಿರಾಸೆ ಮೂಡಿಸಿದರು.
ಇದರ ಬಳಿಕ ಕ್ರೀಸ್ಗೆ ಬಂದ ಬಿಗ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 1 ರನ್ಗಳಿಸಿ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಆದರೆ 7ನೇ ವಿಕೆಟ್ಗೆ ಜೊತೆಯಾದ ರಾಹುಲ್-ಕೃನಾಲ್ ಪಾಂಡ್ಯ ಜೋಡಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಕೇವಲ 31 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು.
ಅದರಲ್ಲೂ ಚೊಚ್ಚಲ ಪಂದ್ಯವಾಡುತ್ತಿರುವ ಕೃನಾಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲೇ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಹಾಗೆಯೇ ಸತತ ವೈಫಲ್ಯದಿಂದ ಬಳಲುತ್ತಿದ್ದ ಕೆಎಲ್ ರಾಹುಲ್ 39 ಎಸೆತಗಳಲ್ಲಿ ತಮ್ಮ ಹಾಫ್ ಸೆಂಚುರಿ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಲ್ಲದೆ ಈ ಜೋಡಿ ಕೇವಲ 56 ಎಸೆತಗಳಲ್ಲಿ 7ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ