ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಸಮಸ್ಯೆ ಎದುರಾಗಿದೆ. ತಂಡದ ನಾಯಕ ಇಯಾನ್ ಮೋರ್ಗನ್ ಹಾಗೂ ಯುವ ಬ್ಯಾಟ್ಸ್ಮನ್ ಸ್ಯಾಮ್ ಬಿಲ್ಲಿಂಗ್ಸ್ 2ನೇ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಮೊದಲ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಮೋರ್ಗನ್ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಪಡೆದು ಬ್ಯಾಟಿಂಗ್ಗೆ ಇಳಿದರೂ ಉತ್ತಮ ಪ್ರದರ್ಶನ ನೀಡಲಾಗಿರಲಿಲ್ಲ.
ಹಾಗೆಯೇ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಫೀಲ್ಡಿಂಗ್ ವೇಳೆ ಬೌಂಡರಿ ತಡೆಯುವ ಯತ್ನದಲ್ಲಿ ಗಾಯಗೊಂಡಿದ್ದರು. ಭುಜದ ಭಾಗ ಊದಿಕೊಂಡಿದ್ದರೂ ಬಿಲ್ಲಿಂಗ್ಸ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಇದೇ ವೇಳೆ ಇಂಗ್ಲೆಂಡ್ ತಂಡದ ಇಬ್ಬರು ಆಟಗಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ರಿಪೋರ್ಟ್ ಸಿಗಲು 48 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಈ ವರದಿ ಬಳಿಕವಷ್ಟೇ ಇಬ್ಬರ ಫಿಟ್ನೆಸ್ ನಿರ್ಧಾರವಾಗಲಿದೆ.
ಅಲ್ಲದೆ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಮುಂದಿನ ಪಂದ್ಯದ ವೇಳೆ ತಂಡದಲ್ಲಿ ಕೆಲ ಬದಲಾವಣೆಯಾಗುವ ಸುಳಿವು ನೀಡಿದ್ದಾರೆ. ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಮುಂದಿನ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಪಡೆಯಬಹುದು. ಇದಲ್ಲದೆ, 24 ವರ್ಷದ ಲೆಗ್ ಸ್ಪಿನ್ನರ್ ಮ್ಯಾಟ್ ಪಾರ್ಕಿನ್ಸನ್ ಸಹ ಒಂದು ವರ್ಷದಿಂದ ಒಂದು ದಿನದ ಪಂದ್ಯಗಳನ್ನು ಆಡಿಲ್ಲ. ಅವರು ತಂಡದಲ್ಲಿ ಸ್ಥಾನ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ