Eng vs Ind- ರದ್ದಾದ ಐದನೇ ಪಂದ್ಯ ಬೇರೆ ದಿನ ಆಡಿಸುವ ಸಾಧ್ಯತೆ; ಭಾರತಕ್ಕೆ ಸಿಕ್ಕಿತು ಬೆಂಬಲ
India’s right to cancel- ಐದನೇ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸದೇ ಭಾರತ ದ್ರೋಹ ಎಸಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಒಂದ ವರ್ಗ ಸೋಷಿಯಲ್ ಮೀಡಿಯಾದಲ್ಲಿ ಅವಲತ್ತುಕೊಂಡಿದೆ. ಆದರೆ, ಕೋವಿಡ್ ಕಾರಣಕ್ಕೆ ಭಾರತದ ನಿರ್ಧಾರ ಸರಿಯಾಗಿಯೇ ಇದೆ ಎಂದು ಹಲವು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಂಚೆಸ್ಟರ್ ನಗರದ ಓಲ್ಡ್ ಟ್ರಫಾರ್ಡ್ ಮೈದಾನದಲ್ಲಿನ ಒಂದು ದೃಶ್ಯ
ಲಂಡನ್, ಸೆ. 10: ರವಿಶಾಸ್ತ್ರಿ ಸೇರಿದಂತೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಭಾರತ ಐದನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸಿಲ್ಲ. ಹೀಗಾಗಿ, ಇವತ್ತು ಆರಂಭವಾಗಬೇಕಿದ್ದ ಸರಣಿಯ ಕೊನೆಯ ಟೆಸ್ಟ್ ರದ್ದಾಗಿದೆ. ಭಾರತದಿಂದ ತಂಡ ಕಣಕ್ಕಿಳಿಯದ ಕಾರಣ ಪಂದ್ಯ ರದ್ದು ಮಾಡಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಘೋಷಿಸಿದ್ಧಾರೆ. ರೋಚಕವಾಗಿ ನಡೆಯುತ್ತಿದ್ದ ಇಡೀ ಸರಣಿಗೆ ಕೋವಿಡ್ ಒಂದು ರೀತಿಯಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್ ರೀತಿ ವಕ್ಕರಿಸಿ ಕ್ರಿಕೆಟ್ ರಸಿಕರ ಉತ್ಸಾಹವನ್ನು ಇಳಿಸಿದೆ. ಇದರ ಮಧ್ಯೆ ಐದನೇ ಟೆಸ್ಟ್ ಪಂದ್ಯವನ್ನ ಸಂಪೂರ್ಣವಾಗಿ ಕೈಬಿಡದೇ ಮುಂದಿನ ಯಾವುದಾದರೂ ದಿನಗಳಲ್ಲಿ ಆಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ಯೋಜಿಸಿದೆ. ಇಸಿಬಿ ಜೊತೆ ಈ ವಿಚಾರವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ಆದರೆ, ಭಾರತ ಮತ್ತು ಇಂಗ್ಲೆಂಡ್ ತಂಡಗಳ ಅಂತರರಾಷ್ಟ್ರೀಯ ಪಂದ್ಯಗಳೆಲ್ಲವೂ ಇಡೀ ವರ್ಷಕ್ಕೆ ಫಿಕ್ಸ್ ಆಗಿ ಹೋಗಿವೆ. ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಈ ವರ್ಷ ಆಡಿಸುವುದು ಕಷ್ಟವಾಗಬಹುದು. ಮುಂದಿನ ವರ್ಷ ಆಡಿಸುವ ಪ್ರಯತ್ನ ಮಾಡಬಹುದು.
ಬಿಸಿಸಿಐ ಹೇಳಿದ್ದಿದು:“ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ಬಿಸಿಸಿಐ ಮತ್ತು ಇಸಿಬಿ ಜಂಟಿಯಾಗಿ ನಿರ್ಧಾರ ಮಾಡಿವೆ… ಟೆಸ್ಟ್ ಪಂದ್ಯವನ್ನು ಹೇಗಾದರೂ ನಡೆಸಲು ಮಾರ್ಗೋಪಾಯಗಳಿಗೆ ಬಿಸಿಸಿಐ ಮತ್ತು ಇಸಿಬಿ ಹಲವು ಸುತ್ತುಗಳ ಚರ್ಚೆ ನಡೆಸಿದವು. ಆದರೆ, ಭಾರತ ತಂಡದಲ್ಲಿ ಕೋವಿಡ್ ಸೋಂಕು ಹರಡಿದ್ದರಿಂದ ಪಂದ್ಯವನ್ನ ರದ್ದುಗೊಳಿಸುವುದು ಅನಿವಾರ್ಯವಾಯಿತು…. ಬಿಸಿಸಿಐ ಮತ್ತು ಇಸಿಬಿ ಮಧ್ಯೆ ಗಾಢ ಸಂಬಂಧ ಇರುವ ಹಿನ್ನೆಲೆಯಲ್ಲಿ ರದ್ದಾಗಿರುವ ಟೆಸ್ಟ್ ಪಂದ್ಯವನ್ನ ರೀಸ್ಕೆಡ್ಯೂಲ್ ಮಾಡಲು ಬಿಸಿಸಿಐ ಸಲಹೆ ನೀಡಿದೆ. ಈ ಪಂದ್ಯವನ್ನ ಬೇರೆ ದಿನಗಳಲ್ಲಿ ಆಡಿಸಲು ಇರುವ ಸಾಧ್ಯಾಸಾಧ್ಯತೆಯನ್ನ ಎರಡೂ ಕ್ರಿಕೆಟ್ ಮಂಡಳಿಗಳು ಅವಲೋಕಿಸುತ್ತಿವೆ…. ನಮ್ಮ ಆಟಗಾರರ ಸುರಕ್ಷತೆ ನಮಗೆ ಅತಿ ಮುಖ್ಯವಾಗಿದ್ದು ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ…. ಈ ಕಷ್ಟಕರ ಸಂದರ್ಭದಲ್ಲಿ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಸಹಕರಿಸಿದ ಇಸಿಬಿಗೆ ಬಿಸಿಸಿಐ ಧನ್ಯವಾದ ಹೇಳುತ್ತದೆ. ರೋಚಕ ಸರಣಿಯನ್ನ ಪೂರ್ಣಗೊಳಿಸದೇ ಹೋಗಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ನಾವು ಕ್ಷಮೆ ಕೋರುತ್ತೇವೆ” ಎಂದು ಹೇಳಿಕೆ ನೀಡಿದೆ.
ಶಾಕ್ ಕೊಟ್ಟಿದ್ದ ಇಸಿಬಿ ಹೇಳಿಕೆ:
ಕುತೂಹಲವೆಂದರೆ ಇದಕ್ಕೆ ಮುನ್ನ ಇಸಿಬಿ ವಿಚಿತ್ರ ಹೇಳಿಕೆ ನೀಡಿತ್ತು. ಕೋವಿಡ್ ಕಾರಣ ಭಾರತ ಈ ಪಂದ್ಯವನ್ನ ಬಿಟ್ಟುಕೊಟ್ಟಿದೆ ಎಂದು ಹೇಳಿತ್ತು. ಈ ಹೇಳಿಕೆಯನ್ನ ಯಥಾವತ್ತಾಗಿ ಅರ್ಥೈಸಿದರೆ ಭಾರತ ಸೋಲೊಪ್ಪಿತು. ಇಂಗ್ಲೆಂಡ್ ಗೆದ್ದಿತು ಎಂದಾಗುತ್ತದೆ. ಸರಣಿ 2-2ರಿಂದ ಸಮಗೊಂಡಂತಾಗುತ್ತಿತ್ತು. ನಂತರ ಹೇಳಿಕೆ ಬದಲಿಸಿದ ಇಸಿಬಿ, “ಕೋವಿಡ್ ಕಾರಣಕ್ಕೆ ಭಾರತ ತಂಡವನ್ನ ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಎಮಿರೇಟ್ಸ್ ಓಲ್ಡ್ ಟ್ರಫಾರ್ಡ್ನಲ್ಲಿ ಶುರುವಾಗಬೇಕಿದ್ದ ಐದನೇ ಪಂದ್ಯ ರದ್ದಾಗಿದೆ” ಎಂದು ಮರುಹೇಳಿಕೆ ನೀಡಿತು.
ಭಾರತದಿಂದ ತಂಡ ಕಣಕ್ಕಿಳಿಯದೇ ಪಂದ್ಯ ರದ್ದಾಗಿದ್ದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರತ ತಂಡದ ಮೇಲೆ ಹರಿಹಾಯ್ದಿದ್ದರು. ಆದರೆ, ಇಂಗ್ಲೆಂಡ್ ತಂಡದ ಕೆವಿನ್ ಪೀಟರ್ಸನ್ ಮೊದಲಾದ ಹಲವು ಕ್ರಿಕೆಟಿಗರು ಭಾರತದ ಬೆಂಬಲ ನಿಂತರು. ಹಿಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸದಲ್ಲಿದ್ದ ಇಂಗ್ಲೆಂಡ್ ತಂಡ ಕೋವಿಡ್ ಕಾರಣಕ್ಕೆ ಸರಣಿಯಿಂದ ಆಚೆ ಬಂದಿತ್ತು. ಆಗ ದಕ್ಷಿಣ ಆಫ್ರಿಕಾ ಕ್ರಿಕೆಟ್ಗೆ ಭಾರೀ ನಷ್ಟವಾಗಿತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್ ಕೈಗೊಂಡಿದ್ದ ನಿರ್ಧಾರ ಸಂದರ್ಭೋಚಿತವಾಗಿತ್ತು. ಈಗ ಭಾರತ ತೆಗೆದುಕೊಂಡ ನಿರ್ಧಾರವೂ ಸಂದರ್ಭೋಚಿತವಾಗಿದೆ. ಆಗ ಇಂಗ್ಲೆಂಡ್ ನಿರ್ಧಾರ ತಪ್ಪಿಲ್ಲವೆನ್ನುವುದಾದರೆ ಈಗ ಭಾರತದ ನಿರ್ಧಾರದಲ್ಲೂ ತಪ್ಪಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ, ಐದನೇ ಟೆಸ್ಟ್ ಪಂದ್ಯವನ್ನ ಆಡಿಸಲು ಸಾಧ್ಯವಾಗದೇ ಖಾಯಂ ಆಗಿ ರದ್ದುಗೊಳಿಸಿದ್ದೇ ಆದಲ್ಲಿ ಭಾರತವು 2-1ರಿಂದ ಈ ಸರಣಿಯನ್ನು ಗೆದ್ದಂತಾಗುತ್ತದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ