India vs England 5th T20: ಇಂಡಿಯಾ-ಇಂಗ್ಲೆಂಡ್ ಫೈನಲ್ ಕದನ: ಸಂಭಾವ್ಯ ಇಲೆವೆನ್ ಹೀಗಿದೆ

ಭಾರತದ ಆರಂಭಿಕರು ವಿಫಲರಾಗುತ್ತಿರುವುದು ಕೊಹ್ಲಿಯ ಚಿಂತನೆಗೆ ಕಾರಣವಾಗಿದೆ. ಕಳೆದ 4 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಸತತ ವೈಫಲ್ಯ ಹೊಂದಿದ್ದಾರೆ.

India vs England

India vs England

 • Share this:
  ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಫೈನಲ್​ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಸರಣಿಯಲ್ಲಿ ಉಭಯ ತಂಡಗಳು 2–2ರ ಸಮಬಲ ಸಾಧಿಸಿದ್ದು, ಹೀಗಾಗಿ ಇಂದಿನ ಪಂದ್ಯವು ಫೈನಲ್ ಕದನದ ಕುತೂಹಲವನ್ನು ಹುಟ್ಟುಹಾಕಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಹಾಗೆಯೇ ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಭರ್ಜರಿಯಾಗಿ ಜಯಿಸಿತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತೊಮ್ಮೆ 8 ವಿಕೆಟ್‌ಗಳಿಂದ ಜಯಗಳಿಸಿತು. ಇನ್ನು ನಾಲ್ಕನೇ ಟಿ20ಯಲ್ಲಿ ಟೀಮ್ ಇಂಡಿಯಾ 8 ರನ್​ಗಳ ರೋಚಕ ಜಯ ಸಾಧಿಸಿದೆ. ಇದೀಗ ಸರಣಿ ವಶ ಪಡಿಸಿಕೊಳ್ಳಲು ಉಭಯ ತಂಡಗಳು ರೋಚಕ ಹಣಾಹಣಿಗೆ ಸಜ್ಜಾಗಿ ನಿಂತಿದೆ.

  ಇನ್ನು ಪ್ರಸ್ತುತ ಸರಣಿಯಲ್ಲಿ ಟಾಸ್ ಬಹುಮುಖ್ಯ ಪಾತ್ರವಹಿಸುತ್ತಿದೆ. ಮೊದಲ 3 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳೇ ವಿಜಯ ಸಾಧಿಸಿರುವುದು ವಿಶೇಷ. ಅಂದರೆ ಟಾಸ್ ಗೆದ್ದ ನಾಯಕರುಗಳು ಮೊದಲ ಬೌಲಿಂಗ್ ಆಯ್ದುಕೊಂಡಿದ್ದು, 3 ಪಂದ್ಯಗಳಲ್ಲೂ ಚೇಸಿಂಗ್​ ಮಾಡಿದ ತಂಡ ಗೆಲುವು ದಾಖಲಿಸಿದೆ. ಇದಾಗ್ಯೂ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ ಬೌಲಿಂಗ್ ಮೂಲಕ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇಲ್ಲಿ ಒಟ್ಟಾರೆ ಪ್ರದರ್ಶನ ಕೂಡ ಫಲಿತಾಂಶವನ್ನು ನಿರ್ಣಯಿಸಲಿರುವುದು ಕೂಡ ಖಚಿತವಾಗಿದೆ.

  ಭಾರತದ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೂ ಮುನ್ನ ಮೊದಲು ಬ್ಯಾಟಿಂಗ್ ಮತ್ತು ಚೇಸಿಂಗ್​ನಲ್ಲಿ ತಂಡವು ಬಲಿಷ್ಠವಾಗಬೇಕು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಈಗಲೇ ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

  ಇದಾಗ್ಯೂ ಭಾರತದ ಆರಂಭಿಕರು ವಿಫಲರಾಗುತ್ತಿರುವುದು ಕೊಹ್ಲಿಯ ಚಿಂತನೆಗೆ ಕಾರಣವಾಗಿದೆ. ಕಳೆದ 4 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಸತತ ವೈಫಲ್ಯ ಹೊಂದಿದ್ದಾರೆ. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಶಿಖರ್ ಧವನ್ ಸಹ ವಿಫಲರಾದರು. ಹಾಗೆಯೇ 2 ಪಂದ್ಯಗಳ ವಿಶ್ರಾಂತಿ ಬಳಿಕ 3ನೇ ಮತ್ತು 4ನೇ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸುವಲ್ಲಿ ಎಡವಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟಿಂಗ್ ದೊಡ್ಡ ಚಿಂತೆಗೆ ಕಾರಣವಾಗಿದೆ ಎಂದು ಹೇಳಬಹುದು.

  ಇನ್ನು ಕಳೆದ ಪಂದ್ಯದಲ್ಲೂ ವಿಫಲರಾಗಿದ್ದ ಕೆಎಲ್ ರಾಹುಲ್​ ಬದಲು ಇಂದು ಯುವ ದಾಂಡಿಗ ಇಶಾನ್ ಕಿಶನ್ ಸ್ಥಾನ ಪಡೆಯುವ ಚಾನ್ಸ್ ಇದೆ. ಹಾಗೆಯೇ ಕಳೆದ ಪಂದ್ಯದಲ್ಲಿ ಮಿಂಚಿದ್ದ ಸೂರ್ಯಕುಮಾರ್ ಅವರನ್ನು ಇಂದಿನ ಪಂದ್ಯದಲ್ಲೂ ತಂಡದಲ್ಲಿ ಉಳಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಏಕೆಂದರೆ ಕಳೆದ ಪಂದ್ಯದಲ್ಲಿ ಭಾರತದ ಬೌಲರುಗಳು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಇದೇ ಬಳಗವನ್ನೇ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ.

  ಭಾರತದ ಸಂಭಾವ್ಯ ಇಲೆವೆನ್:
  ರೋಹಿತ್ ಶರ್ಮಾ, ಇಶಾನ್ ಕಿಶನ್/ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ಚಹರ್.

  ಇಂಗ್ಲೆಂಡ್‌ನ ಸಂಭಾವ್ಯ ಇಲೆವೆನ್: ಜೇಸನ್ ರಾಯ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಇಯಾನ್ ಮೋರ್ಗಾನ್ (ನಾಯಕ), ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್.

  ಪಂದ್ಯದ ಸಮಯ: ಸಂಜೆ 7
  ಸ್ಥಳ: ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ.
  ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಟಿವಿ, ಏರ್​ಟೆಲ್ ಟಿವಿ, ಹಾಟ್​ಸ್ಟಾರ್
  Published by:zahir
  First published: