ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 5ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 36 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಭಾರತ ನೀಡಿದ 225 ರನ್ಗಳನ್ನು ಬೆನ್ನತ್ತಿದ ಇಂಗ್ಲೆಂಡ್ಗೆ ಮೊದಲ ಓವರ್ನಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದ್ದರು. ಆರಂಭಿಕ ಆಟಗಾರ ಜೇಸನ್ ರಾಯ್ (0) ಅನ್ನು ಇನ್ ಸ್ವಿಂಗ್ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿ20 ಕ್ರಿಕೆಟ್ನ ನಂಬರ್ ಒನ್ ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಪರಿಣಾಮ ಹಾರ್ದಿಕ್ ಪಾಂಡ್ಯ ಎಸೆದ 2ನೇ ಓವರ್ನಲ್ಲಿ 18 ರನ್ಗಳು ಮೂಡಿಬಂತು. ಮತ್ತೊಂದೆಡೆ ಜೋಸ್ ಬಟ್ಲರ್ ಕೂಡ ಸಾಥ್ ನೀಡಿದರು. ಪರಿಣಾಮ ಪವರ್ಪ್ಲೇಯ 6 ಓವರ್ನಲ್ಲಿ ಇಂಗ್ಲೆಂಡ್ 62 ರನ್ ಕಲೆಹಾಕಿತು.
ಪವರ್ಪ್ಲೇ ಬಳಿಕ ಕೂಡ ಉತ್ತಮ ಹೊಂದಾಣಿಕೆಯಾಟ ಪ್ರದರ್ಶಿಸಿದ ಮಲಾನ್-ಬಟ್ಲರ್ ಜೋಡಿ ಟೀಮ್ ಇಂಡಿಯಾ ಬೌಲರುಗಳ ಬೆಂಡೆತ್ತಿದರು. ಅಲ್ಲದೆ 9.2 ಓವರ್ನಲ್ಲಿ ತಂಡದ ಮೊತ್ತವನ್ನು 100ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ 33 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 8 ಬೌಂಡರಿಯೊಂದಿಗೆ ಮಲಾನ್ ತಮ್ಮ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ ಬಾರಿಸಿ ಜೋಸ್ ಬಟ್ಲರ್ ಕೂಡ ಅರ್ಧಶತಕ ಬಾರಿಸಿದರು.
ಹಾಫ್ ಸೆಂಚುರಿ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬಟ್ಲರ್ (52) ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು 15ನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್ (7) ಶಾರ್ದುಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 44 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 68 ರನ್ ಬಾರಿಸಿದ್ದ ಡೇವಿಡ್ ಮಲಾನ್ರನ್ನು ಶಾರ್ದುಲ್ ಠಾಕೂರ್ ಕ್ಲೀನ್ ಬೌಲ್ಡ್ ಮಾಡಿದರು.
16ನೇ ಓವರ್ನ ಮೂರನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ (1) ವಿಕೆಟ್ ಪಡೆದರು. ಈ ಬಳಿಕ ಸಂಪೂರ್ಣ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರುಗಳು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಿದರು. ಅಲ್ಲದೆ ಅಂತಿಮ ಓವರ್ಗಳಲ್ಲಿ ರನ್ಗೆ ಪರದಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಪರಿಣಾಮ ಕೊನೆಯ 2 ಓವರ್ಗಳಲ್ಲಿ ಇಂಗ್ಲೆಂಡ್ಗೆ ಗೆಲ್ಲಲು 62 ರನ್ಗಳು ಬೇಕಿತ್ತು. 19ನೇ ಓವರ್ನಲ್ಲಿ ಕೇವಲ 5 ರನ್ ನೀಡಿದ ನಟರಾಜನ್ ಬೆನ್ ಸ್ಟೋಕ್ಸ್ (14) ವಿಕೆಟ್ ಪಡೆದರು. ಅಂತಿಮ ಓವರ್ನಲ್ಲಿ ಶಾರ್ದುಲ್ ಠಾಕೂರ್ 20 ರನ್ ನೀಡಿದರೂ, ಇಂಗ್ಲೆಂಡ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ 36 ರನ್ಗಳ ಭರ್ಜರಿ ಜಯ ಸಾಧಿಸಿತು.
ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದರೆ, 4 ಓವರ್ನಲ್ಲಿ 45 ರನ್ ನೀಡಿ ಶಾರ್ದುಲ್ ಠಾಕೂರ್ 3 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಹಿಟ್ಮ್ಯಾನ್ ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆ ತಂಡದ ಮೊತ್ತ 60ಕ್ಕೆ ಬಂದು ನಿಂತಿತು.
ಪವರ್ಪ್ಲೇ ಬಳಿಕ ಅಬ್ಬರ ಮುಂದುವರೆಸಿದ ರೋಹಿತ್ ಶರ್ಮಾ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಬೆನ್ ಸ್ಟೋಕ್ಸ್ ಎಸೆದ 9ನೇ ಓವರ್ನಲ್ಲಿ 13 ರನ್ ಕಲೆಹಾಕಿದರು. ಇದೇ ಓವರ್ನ ಅಂತಿಮ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹಿಟ್ಮ್ಯಾನ್ ಬ್ಯಾಟ್ ಸವರಿ ಚೆಂಡು ವಿಕೆಟ್ಗೆ ಬಡಿಯಿತು. ಇದರೊಂದಿಗೆ 94 ರನ್ಗೆ ಭಾರತದ ಮೊದಲ ವಿಕೆಟ್ ಪತನವಾಯಿತು.
34 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದರು. ಹಿಟ್ಮ್ಯಾನ್ ನಿರ್ಗಮನದ ಬಳಿಕ ಕ್ರೀಸ್ಗಿಳಿದ ಸೂರ್ಯಕುಮಾರ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲಿಗೆ ಮೊದಲ 10 ಓವರ್ನಲ್ಲಿ ಟೀಮ್ ಇಂಡಿಯಾ 110 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಈ ಹಂತದಲ್ಲಿ ಬಿರುಸಿನ ಆಟದೊಂದಿಗೆ ಉತ್ತಮ ಹೊಂದಾಣಿಕೆ ಪ್ರದರ್ಶಿಸಿದ ಕೊಹ್ಲಿ-ಸೂರ್ಯಕುಮಾರ್ ಜೋಡಿ ಪ್ರತಿ ಓವರ್ನಲ್ಲೂ 10 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಗಮನ ಸೆಳೆದರು. ಈ ಹಂತದಲ್ಲಿ 17 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 32 ರನ್ ಕಲೆಹಾಕಿದ್ದ ಸೂರ್ಯಕುಮಾರ್ ಬೌಂಡರಿ ಲೈನ್ನಲ್ಲಿ ಕ್ರಿಸ್ ಜೋರ್ಡನ್ ಹಿಡಿದ ಅದ್ಭುತ ಕ್ಯಾಚ್ಗೆ ನಿರ್ಗಮಿಸಬೇಕಾಯಿತು.
ಇದಾಗ್ಯೂ 15ನೇ ಓವರ್ನಲ್ಲಿ ಟೀಮ್ ಇಂಡಿಯಾ ಮೊತ್ತವು 150ರ ಗಡಿದಾಟಿತು. ಅಲ್ಲದೆ 36 ಎಸೆತಗಳಲ್ಲಿ ವಿರಾಟ್ ಕೊಹ್ಲಿ ತಮ್ಮ 28ನೇ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ಹಿಟ್ಟರ್ ಹಾರ್ದಿಕ್ ಪಾಂಡ್ಯ ಬೌಂಡರಿಗಳ ಮೂಲಕ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಅದರಂತೆ 16 ಓವರ್ ಮುಕ್ತಾಯದ ವೇಳೆ ಭಾರತದ ಸ್ಕೋರ್ 170ಕ್ಕೇರಿತ್ತು.
17 ಓವರ್ ವೇಳೆಯಿದ್ದ 181 ರನ್ಗಳ ತಂಡದ ಮೊತ್ತವನ್ನು ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ ಜೋಡಿ 18ನೇ ಓವರ್ ಮುಕ್ತಾಯದ ವೇಳೆಗೆ 193ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ 28 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು.
ಇನ್ನು ಕ್ರಿಸ್ ಜೋರ್ಡನ್ ಎಸೆದ 18ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕೊನೆಯ ಓವರ್ಗೂ ಮುನ್ನ ಟೀಮ್ ಇಂಡಿಯಾ ಸ್ಕೋರ್ 211 ರನ್ಗಳು.
ಜೋಫ್ರಾ ಆರ್ಚರ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ 1 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸಹ ಸಿಂಗಲ್ ತೆಗೆದರು. 3ನೇ ಎಸೆತದಲ್ಲಿ ಟೀಮ್ ಇಂಡಿಯಾ ನಾಯಕ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದರು. 4ನೇ ಎಸೆತದಲ್ಲಿ 2 ರನ್. ಹಾಗೆಯೇ 5ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್ನಿಂದ ಮತ್ತೊಂದು ಬೌಂಡರಿ. ಅಂತಿಮ ಎಸೆತದಲ್ಲಿ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ 20 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 224 ರನ್ ಕಲೆಹಾಕಿತು.
ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 80 ರನ್ ಕಲೆಹಾಕಿದರೆ, ನಾಯಕನಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 4 ಫೋರ್ ಹಾಗೂ 2 ಸಿಕ್ಸರ್ನೊಂದಿಗೆ 39 ರನ್ ಬಾರಿಸಿದರು. ಇಂಗ್ಲೆಂಡ್ ಪರ ಆದಿಲ್ ರಶೀದ್ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.
India vs England 5th T20 Playing 11: ಭಾರತ-ಇಂಗ್ಲೆಂಡ್ 5ನೇ ಟಿ20: ಟೀಮ್ ಇಂಡಿಯಾದಲ್ಲಿ 1 ಬದಲಾವಣೆ..!
ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಜಯಗಳಿಸಿದ್ದು, ಹೀಗಾಗಿ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 8 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಹಾಗೆಯೇ 4ನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ 8 ರನ್ಗಳಿಂದ ರೋಚಕ ಜಯ ತನ್ನದಾಗಿಸಿಕೊಂಡಿತು. ಇದೀಗ ಅಂತಿಮ ಹಣಾಹಣಿಗೆ ಉಭಯ ತಂಡಗಳು ಸಜ್ಜಾಗಿದ್ದು, ಆಂಗ್ಲರನ್ನು ಮಣಿಸಿ ಸರಣಿ ಜಯಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.
ಪಂದ್ಯದ ಸಮಯ: ಸಂಜೆ 7
ಸ್ಥಳ: ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಟಿವಿ, ಏರ್ಟೆಲ್ ಟಿವಿ, ಹಾಟ್ಸ್ಟಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ