India vs England 5th T20: ಕೊಹ್ಲಿ-ರೋಹಿತ್ ಅಬ್ಬರ: ಇಂಗ್ಲೆಂಡ್​ಗೆ ಬೃಹತ್ ಮೊತ್ತದ ಟಾರ್ಗೆಟ್​

India vs England live score: ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಜಯಗಳಿಸಿದ್ದು, ಹೀಗಾಗಿ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.

Virat kohli and Rohit sharma

Virat kohli and Rohit sharma

  • Share this:
    ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ  5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್​ 225 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು.

    ಆರಂಭಿಕರಾಗಿ ಕಣಕ್ಕಿಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಹಿಟ್​ಮ್ಯಾನ್ ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆ ತಂಡದ ಮೊತ್ತ 60ಕ್ಕೆ ಬಂದು ನಿಂತಿತು.

    ಪವರ್​ಪ್ಲೇ ಬಳಿಕ ಅಬ್ಬರ ಮುಂದುವರೆಸಿದ ರೋಹಿತ್ ಶರ್ಮಾ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಬೆನ್​ ಸ್ಟೋಕ್ಸ್ ಎಸೆದ 9ನೇ ಓವರ್​ನಲ್ಲಿ 13 ರನ್ ಕಲೆಹಾಕಿದರು. ಇದೇ ಓವರ್​ನ ಅಂತಿಮ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹಿಟ್​ಮ್ಯಾನ್ ಬ್ಯಾಟ್ ಸವರಿ ಚೆಂಡು ವಿಕೆಟ್​ಗೆ ಬಡಿಯಿತು. ಇದರೊಂದಿಗೆ 94 ರನ್​ಗೆ ಭಾರತದ ಮೊದಲ ವಿಕೆಟ್ ಪತನವಾಯಿತು.

    34 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 64 ರನ್ ಬಾರಿಸಿದರು. ಹಿಟ್​ಮ್ಯಾನ್ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಸೂರ್ಯಕುಮಾರ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಲ್ಲಿಗೆ ಮೊದಲ 10 ಓವರ್​ನಲ್ಲಿ ಟೀಮ್ ಇಂಡಿಯಾ 110 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು.

    ಈ ಹಂತದಲ್ಲಿ ಬಿರುಸಿನ ಆಟದೊಂದಿಗೆ ಉತ್ತಮ ಹೊಂದಾಣಿಕೆ ಪ್ರದರ್ಶಿಸಿದ ಕೊಹ್ಲಿ-ಸೂರ್ಯಕುಮಾರ್ ಜೋಡಿ ಪ್ರತಿ ಓವರ್​ನಲ್ಲೂ 10 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಗಮನ ಸೆಳೆದರು. ಈ ಹಂತದಲ್ಲಿ 17 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 32 ರನ್ ಕಲೆಹಾಕಿದ್ದ ಸೂರ್ಯಕುಮಾರ್ ಬೌಂಡರಿ ಲೈನ್​ನಲ್ಲಿ ಕ್ರಿಸ್ ಜೋರ್ಡನ್ ಹಿಡಿದ ಅದ್ಭುತ ಕ್ಯಾಚ್​ಗೆ ನಿರ್ಗಮಿಸಬೇಕಾಯಿತು.

    ಇದಾಗ್ಯೂ 15ನೇ ಓವರ್​ನಲ್ಲಿ ಟೀಮ್ ಇಂಡಿಯಾ ಮೊತ್ತವು 150ರ ಗಡಿದಾಟಿತು. ಅಲ್ಲದೆ 36 ಎಸೆತಗಳಲ್ಲಿ ವಿರಾಟ್ ಕೊಹ್ಲಿ ತಮ್ಮ 28ನೇ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ಹಿಟ್ಟರ್ ಹಾರ್ದಿಕ್ ಪಾಂಡ್ಯ ಬೌಂಡರಿಗಳ ಮೂಲಕ ತಂಡದ ರನ್​ ವೇಗವನ್ನು ಹೆಚ್ಚಿಸಿದರು. ಅದರಂತೆ 16 ಓವರ್​ ಮುಕ್ತಾಯದ ವೇಳೆ ಭಾರತದ ಸ್ಕೋರ್ 170ಕ್ಕೇರಿತ್ತು.

    17 ಓವರ್​ ವೇಳೆಯಿದ್ದ  181 ರನ್​ಗಳ​ ತಂಡದ ಮೊತ್ತವನ್ನು ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ ಜೋಡಿ 18ನೇ ಓವರ್ ಮುಕ್ತಾಯದ ವೇಳೆಗೆ 193ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ 28 ಎಸೆತಗಳಲ್ಲಿ  ಅರ್ಧಶತಕದ ಜೊತೆಯಾಟವಾಡಿದರು.

    ಇನ್ನು ಕ್ರಿಸ್ ಜೋರ್ಡನ್ ಎಸೆದ 18ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕೊನೆಯ ಓವರ್​ಗೂ ಮುನ್ನ ಟೀಮ್ ಇಂಡಿಯಾ ಸ್ಕೋರ್ 211 ರನ್​ಗಳು.

    ಜೋಫ್ರಾ ಆರ್ಚರ್ ಎಸೆದ ಅಂತಿಮ ಓವರ್​ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿ 1 ರನ್ ಕಲೆಹಾಕಿದರು. 2ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಸಹ ಸಿಂಗಲ್ ತೆಗೆದರು. 3ನೇ ಎಸೆತದಲ್ಲಿ ಟೀಮ್ ಇಂಡಿಯಾ ನಾಯಕ ಲೆಗ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದರು. 4ನೇ ಎಸೆತದಲ್ಲಿ 2 ರನ್​. ಹಾಗೆಯೇ 5ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಬೌಂಡರಿ. ಅಂತಿಮ ಎಸೆತದಲ್ಲಿ 1 ರನ್​ ಕಲೆಹಾಕುವ ಮೂಲಕ ಟೀಮ್ ಇಂಡಿಯಾ 20 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 224 ರನ್​ ಕಲೆಹಾಕಿತು.

    ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 80 ರನ್​ ಕಲೆಹಾಕಿದರೆ, ನಾಯಕನಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 4 ಫೋರ್ ಹಾಗೂ 2 ಸಿಕ್ಸರ್​ನೊಂದಿಗೆ 39 ರನ್ ಬಾರಿಸಿದರು. ಇಂಗ್ಲೆಂಡ್ ಪರ ಆದಿಲ್ ರಶೀದ್ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.



    India vs England 5th T20 Playing 11: ಭಾರತ-ಇಂಗ್ಲೆಂಡ್ 5ನೇ ಟಿ20: ಟೀಮ್ ಇಂಡಿಯಾದಲ್ಲಿ 1 ಬದಲಾವಣೆ..!

    ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಜಯಗಳಿಸಿದ್ದು, ಹೀಗಾಗಿ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳಿಂದ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 8 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಹಾಗೆಯೇ 4ನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ 8 ರನ್​ಗಳಿಂದ ರೋಚಕ ಜಯ ತನ್ನದಾಗಿಸಿಕೊಂಡಿತು. ಇದೀಗ ಅಂತಿಮ ಹಣಾಹಣಿಗೆ ಉಭಯ ತಂಡಗಳು ಸಜ್ಜಾಗಿದ್ದು, ಆಂಗ್ಲರನ್ನು ಮಣಿಸಿ ಸರಣಿ ಜಯಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.

    ಪಂದ್ಯದ ಸಮಯ: ಸಂಜೆ 7
    ಸ್ಥಳ: ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ.
    ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಟಿವಿ, ಏರ್​ಟೆಲ್ ಟಿವಿ, ಹಾಟ್​ಸ್ಟಾರ್
    Published by:zahir
    First published: