ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಮೊದಲ ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು 205 ರನ್ಗೆ ಕಟ್ಟಿಹಾಕಿದ ಭಾರತ, ಪ್ರಥಮ ಇನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 24 ರನ್ಗಳಿಸಿದೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮೊದಲ ಓವರ್ನಲ್ಲೇ ಶೂನ್ಯಕ್ಕೆ ಜೇಮ್ಸ್ ಅ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಸದ್ಯ ಕ್ರೀಸ್ನಲ್ಲಿ ರೋಹಿತ್ ಶರ್ಮಾ (8) ಹಾಗೂ ಚೇತೇಶ್ವರ ಪೂಜಾರ (15) ಇದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 205 ರನ್ಗಳಿಗೆ ಸರ್ವಪತನ ಕಂಡಿತು. ಅಕ್ಷರ್ ಪಟೇಲ್ ಪಟೇಲ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ತಡಕಾಡಿದ ಆಂಗ್ಲರು ಮೂರನೇ ಸೆಷನ್ ವೇಳೆಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು. ಮೊದಲು ಬ್ಯಾಟಿಂಗ್ ಅವಕಾಶ ಪಡೆದರೂ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಕ್ಕರಲಿಲ್ಲ. ಕೇವಲ 30 ರನ್ ಪೇರಿಸುವಷ್ಟರಲ್ಲಿ ಪ್ರಮುಖ ಮೂರು ದೊಡ್ಡ ವಿಕೆಟ್ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಜ್ಯಾಕ್ ಕ್ರಾಲೆ (02). ಡೊಮಿನಿಕ್ ಸಿಬ್ಲಿ (09) ಮತ್ತು ನಾಯಕ ಜೋ ರೂಟ್ (05) ಅವರನ್ನು ಟೀಮ್ ಇಂಡಿಯಾ ಬೌಲರುಗಳು ಬೇಗನೆ ಪೆವಿಲಿಯನ್ ಕಡೆ ಕಳುಹಿಸಿ ಆರಂಭಿಕ ಯಶಸ್ಸು ಪಡೆಯಿತು.
6ನೇ ಓವರ್ನಲ್ಲಿ ಅಕ್ಷರ್ ಪಟೇಲ್ ಮೊದಲ ಯಶಸ್ಸು ತಂದುಕೊಟ್ಟರು. ಅದರ ಬೆನ್ನಲ್ಲೇ ಸಿಬ್ಲಿಯನ್ನು 8ನೇ ಓವರ್ನಲ್ಲಿ ಔಟ್ ಮಾಡಿ ಅಕ್ಷರ್ ಮತ್ತೊಂದು ವಿಕೆಟ್ ಪಡೆದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಅಪಾಯಕಾರಿ ಜೋ ರೂಟ್ ಅವರನ್ನು ಎಲ್ಬಿಡಬ್ಲ್ಯೂ ಮಾಡಿ ಮಿಂಚಿದರು. ಅಲ್ಲದೆ ತಂಡದ ಮೊತ್ತ 78 ಆಗಿದ್ದ ವೇಳೆ ಕ್ರೀಸ್ ಕಚ್ಚಿ ಆಡುತ್ತಿದ್ದ ಜಾನಿ ಬೈರ್ಸ್ಟೋ (28) ಅವರನ್ನು ಸಹ ಎಲ್ಬಿ ಬಲೆಗೆ ಕೆಡವಿ ಸಿರಾಜ್ ಟೀಮ್ ಇಂಡಿಯಾಗೆ ನಾಲ್ಕನೇ ಯಶಸ್ಸು ತಂದಿಟ್ಟರು.
ಈ ಹಂತದಲ್ಲಿ ಜೊತೆಗೂಡಿದ ಬೆನ್ ಸ್ಟೋಕ್ಸ್ ಹಾಗೂ ಒಲಿ ಪೋಪ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ ವಾಷಿಂಗ್ಟನ್ ಸುಂದರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸ್ಟೋಕ್ಸ್ (55) ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಸ್ಟೋಕ್ಸ್ ನಿರ್ಗಮನದ ಬೆನ್ನಲ್ಲೇ ಅಶ್ವಿನ್, ಪೋಪ್ (29) ವಿಕೆಟ್ ಪಡೆದರು. ಈ ವೇಳೆ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಡೇನಿಯಲ್ ಲಾರೆನ್ಸ್ 46 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸುವ ಕಾಯಕಕ್ಕೆ ಕೈಹಾಕಿದರು.
ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಲಾರೆನ್ಸ್ರನ್ನು ಅಕ್ಷರ್ ಪಟೇಲ್ ಎಸೆತದಲ್ಲಿ ರಿಷಭ್ ಪಂತ್ ಸ್ಟಂಪ್ ಮಾಡುವ ಮೂಲಕ ಪೆವಿಲಿಯನ್ಗೆ ಕಳುಹಿಸಿದರು. ಅಲ್ಲಗೆ 188 ರನ್ಗಳಿಗೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡಾಂತಾಗಿತ್ತು. ಇನ್ನೂರರ ಗಡಿದಾಟುವುದು ಕಷ್ಟಕರ ಎನ್ನಲಾಗಿದ್ದರೂ, ಜ್ಯಾಕ್ ಲೀಚ್ (7) ಹಾಗೂ ಜೇಮ್ಸ್ ಅ್ಯಂಡರ್ಸನ್ (10) ರನ್ಗಳಿಸುವ ಮೂಲಕ ತಂಡದ ಮೊತ್ತವನ್ನು 205ಕ್ಕೆ ತಂದು ನಿಲ್ಲಿಸಿದರು. ಈ ವೇಳೆ ಲೀಚ್ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಸರ್ವಪತನಕ್ಕೆ ಅಶ್ವಿನ್ ಕಾರಣರಾದರು.
ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, 3 ವಿಕೆಟ್ ಉರುಳಿಸಿ ಅಶ್ವಿನ್ ಗಮನ ಸೆಳೆದರು. ಇನ್ನು ಸಿರಾಜ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ