ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕು ಪಂದ್ಯಗಳ ಸರಣಿಯ ಅಂತಿಮ ಟೆಸ್ಟ್ ಮಾರ್ಚ್ 4 ರಿಂದ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ಸರಣಿಯ ಎರಡು ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಾಗಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದ್ವಿತೀಯ ಟೆಸ್ಟ್ನಲ್ಲಿ ಭಾರತ ಜಯ ಸಾಧಿಸಿದೆ. ಹಾಗೆಯೇ ಇದೇ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಟೆಸ್ಟ್ನಲ್ಲಿ ಭಾರತ ಭರ್ಜರಿ ಜಯ ಸಾಧಿಸುವುದರೊಂದಿಗೆ 2-1 ಮುನ್ನಡೆ ಸಾಧಿಸಿದೆ. ಅಂದಹಾಗೆ ಈ ಮೂರು ಪಂದ್ಯಗಳಲ್ಲೂ ಸ್ಪಿನ್ನರ್ಗಳು ಮಿಂಚಿರುವುದು ವಿಶೇಷ. ಅದರಲ್ಲೂ ಮೂರನೇ ಟೆಸ್ಟ್ ಪಂದ್ಯವು ಕೇವಲ 2 ದಿನದೊಳಗೆ ಅಂತ್ಯವಾಗಿತ್ತು. ಹೀಗಾಗಿ ನಾಳೆ ನಡೆಯಲಿರುವ ಪಂದ್ಯದ ಪಿಚ್ ಕೂಡ ಸ್ಪಿನ್ನರ್ಗಳಿಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣದಲ್ಲಿ ಈ ಬಾರಿ ಕೋವಿಡ್ -19 ಪ್ರೋಟೋಕಾಲ್ ಕಾರಣ, ಪ್ರತಿದಿನ 50,000 ಅಭಿಮಾನಿಗಳು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ನಾಳಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪಟ್ಟಿ ಹೀಗಿರಲಿದೆ.
ಆರಂಭಿಕರು: ಟೀಮ್ ಇಂಡಿಯಾದ ಆರಂಭಿಕ ಜೋಡಿಯ ಬಗ್ಗೆ ಯಾವುದೇ ಸಂದೇಹವಿಲ್ಲ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರೋಹಿತ್ ಶರ್ಮಾ 3ನೇ ಟೆಸ್ಟ್ ಪಂದ್ಯದಲ್ಲೂ ಫಾರ್ಮ್ ಮುಂದುವರೆಸಿದ್ದಾರೆ. ಹಾಗೆಯೇ ಎರಡನೇ ಟೆಸ್ಟ್ನಲ್ಲಿ 231 ಎಸೆತಗಳಲ್ಲಿ 161 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇನ್ನು ಯುವ ದಾಂಡಿಗ ಶುಭ್ಮನ್ ಗಿಲ್ ಸಹ 3ನೇ ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಅವರೇ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ: ಮೂರನೇ ಟೆಸ್ಟ್ನಲ್ಲೂ 3ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡಲಿದ್ದಾರೆ. ಇದರ ನಂತರ ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.
ಆಲ್ ರೌಂಡರ್: ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ ವಿಭಾಗವನ್ನು ಮುನ್ನಡೆಸುವ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಕೊಡುಗೆ ನೀಡಿದ್ದಾರೆ. ಅಶ್ವಿನ್ ಎರಡನೇ ಟೆಸ್ಟ್ನಲ್ಲಿ 8 ವಿಕೆಟ್ ಉರುಳಿಸಿದರು. ಹಾಗೆಯೇ ಬ್ಯಾಟಿಂಗ್ನಲ್ಲಿ ಅದ್ಭುತ ಶತಕವನ್ನು ಸಿಡಿಸಿದ್ದರು. ಅದೇ ರೀತಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ 7 ವಿಕೆಟ್ ಪಡೆದ ಅಕ್ಷರ್ ಪಟೇಲ್ ಮೂರನೇ ಟೆಸ್ಟ್ನಲ್ಲಿ 11 ವಿಕೆಟ್ ಉರುಳಿಸಿದ್ದರು. ಹೀಗಾಗಿ ನಾಳಿನ ಪಂದ್ಯದಲ್ಲೂ ಸ್ಪಿನ್ ವಿಭಾಗವನ್ನು ಇವರಿಬ್ಬರೇ ಮುನ್ನಡೆಸಲಿದ್ದಾರೆ.
ಬೌಲರ್ಸ್: ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ನಾಲ್ಕನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅಥವಾ ಉಮೇಶ್ ಯಾದವ್ ಕಣಕ್ಕಿಳಿಯಬಹುದು. ಹಾಗೆಯೇ ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲೂ ಅವಕಾಶ ಪಡೆಯಬಹುದು. ಇನ್ನು 100 ಟೆಸ್ಟ್ ಪಂದ್ಯಗಳನ್ನಾಡಿರುವ ಇಶಾಂತ್ ಶರ್ಮಾ ಅವರು ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಭಾರತ ಸಂಭವನೀಯ ಇಲೆವೆನ್:
ವಿರಾಟ್ ಕೊಹ್ಲಿ (ನಾಯಕ) ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ