ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದಿದೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 112 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 99 ರನ್ಗಳಿಸಿತ್ತು. ಆದರೆ 2ನೇ ದಿನದಾಟದ ಆರಂಭದಲ್ಲೇ ಭಾರತೀಯ ಬ್ಯಾಟ್ಸ್ಮನ್ಗಳಿಗೆ ಶಾಕ್ ನೀಡುವಲ್ಲಿ ಇಂಗ್ಲೆಂಡ್ ಬೌಲರುಗಳು ಯಶಸ್ವಿಯಾದರು.
ಮೊದಲ ದಿನದಾಟದ ಮೊತಕ್ಕೆ 13 ರನ್ ಸೇರ್ಪಡೆಗೊಳ್ಳುವಷ್ಟರಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ (7) ಜ್ಯಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 66 ರನ್ ಬಾರಿಸಿ ಶತಕದತ್ತ ಮುಖ ಮಾಡಿದ್ದ ರೋಹಿತ್ ಶರ್ಮಾರನ್ನು ಲೀಚ್ ಎಲ್ಬಿ ಬಲೆಗೆ ಬೀಳಿಸಿದರು. ಆ ಬಳಿಕ ಬಂದ ರಿಷಭ್ ಪಂತ್ (1) ಜೋ ರೂಟ್ ಓವರ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಬಂದ ವೇಗದಲ್ಲೇ ಮರಳಿದರು. ಇನ್ನು 46ನೇ ಓವರ್ ಎಸೆದ ಇಂಗ್ಲೆಂಡ್ ನಾಯಕ ರೂಟ್ ವಾಷಿಂಗ್ಟನ್ ಸುಂದರ್ (0) ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಲ್ಲದೆ 3 ನೇ ಎಸೆತದಲ್ಲಿ ಅಕ್ಷರ್ ಪಟೇಲ್ರ ವಿಕೆಟ್ ಪಡೆದು ಒಂದೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದರು.
ಅಂದರೆ ನಿನ್ನೆಯ ಮೊತ್ತಕ್ಕೆ ಕೇವಲ 26 ರನ್ ಸೇರ್ಪಡೆಯಾಗುವಷ್ಟರಲ್ಲಿ ಭಾರತ ಇಂದು 5 ವಿಕೆಟ್ಗಳನ್ನು ಕಳೆದುಕೊಂಡಿತು. ಇದರ ಬೆನ್ನಲ್ಲೇ 17 ರನ್ಗಳಿಸಿದ್ದ ಅಶ್ವಿನ್ ರೂಟ್ ಎಸೆತದಲ್ಲಿ ಕ್ರಾಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಬುಮ್ರಾ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತವು ಮೊದಲ ಇನಿಂಗ್ಸ್ನಲ್ಲಿ 145 ರನ್ಗಳಿಗೆ ಆಲೌಟಾಯಿತು. ಅಲ್ಲದೆ ಪ್ರಥಮ ಇನಿಂಗ್ಸ್ನಲ್ಲಿ 33 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ.
ಇನ್ನು ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ನಾಯಕ ಜೋ ರೂಟ್ ಚೊಚ್ಚಲ ಬಾರಿ 5 ವಿಕೆಟ್ ಪಡೆದು ಸಂಭ್ರಮಿಸಿದರು. ಹಾಗೆಯೇ ಜ್ಯಾಕ್ ಲೀಚ್ 4 ವಿಕೆಟ್ ಉರುಳಿಸಿ ಗಮನ ಸೆಳೆದರು. ಇನ್ನು ಜೋಫ್ರಾ ಆರ್ಚರ್ 1 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರುಗಳು ಯಶಸ್ವಿಯಾಗಿದ್ದರು. ಓಪನಿಂಗ್ ಬ್ಯಾಟ್ಸ್ಮನ್ ಸಿಬ್ಲಿಯನ್ನು(0)ಯನ್ನು 3ನೇ ಓವರ್ನಲ್ಲಿ ಔಟ್ ಮಾಡಿ ಇಶಾಂತ್ ಶರ್ಮಾ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜಾನಿ ಬೈರ್ಸ್ಟೋ ಅವರನ್ನೂ ಸಹ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಜೋ ರೂಟ್, ಆರಂಭಿಕ ಝಾಕ್ ಕ್ರಾಲಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು.
ಆದರೆ ತಂಡದ ಮೊತ್ತ 74 ರನ್ಗಳಾಗಿದ್ದ ವೇಳೆ ದಾಳಿಗಿಳಿದ ಅಶ್ವಿನ್ ರೂಟ್ (17) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಅರ್ಧಶತಕ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ರಾಲಿ (53) ವಿಕೆಟ್ ಪಡೆದು ಅಕ್ಷರ್ ಪಟೇಲ್ ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.
ಇದರ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಒಲಿ ಪೋಪ್ (1) ಹಾಗೂ ಬೆನ್ ಸ್ಟೋಕ್ಸ್ (6) ವಿಕೆಟ್ಗಳನ್ನು ಉರುಳಿಸಿದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಇಡೀ ಪಂದ್ಯವನ್ನು ತೆಕ್ಕೆಗೆ ತೆಗೆದುಕೊಂಡರು. ಆ ಬಳಿಕ ಬಂದ ಯಾವುದೇ ಬ್ಯಾಟ್ಸ್ಮನ್ಗಳನ್ನು ನೆಲೆಯೂರಲು ಬಿಡದ ಟೀಮ್ ಇಂಡಿಯಾ ಸ್ಪಿನ್ನರ್ಗಳು ತಂಡದ ಮೊತ್ತ 100ರ ಗಡಿದಾಟುವಷ್ಟರಲ್ಲಿ 8 ವಿಕೆಟ್ ಉರುಳಿಸಿದರು.
ಇನ್ನು ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುವುದರೊಂದಿಗೆ ಅಕ್ಷರ್ ಪಟೇಲ್ 2ನೇ ಟೆಸ್ಟ್ನಲ್ಲೂ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಚೆನ್ನೈ ಟೆಸ್ಟ್ನಲ್ಲಿ ಪಾದರ್ಪಣೆ ಮಾಡಿದ್ದ ಅಕ್ಷರ್ ಇನಿಂಗ್ಸ್ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೊನೆಯ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಒಟ್ಟು 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 112 ರನ್ಗಳಿಗೆ ಸರ್ಪಪತನ ಕಂಡಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 6 ವಿಕೆಟ್ ಕಬಳಿಸಿ ಮಿಂಚಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.
ಇನ್ನು ಮೊದಲ ದಿನದ ಮೂರನೇ ಸೇಷನ್ನಲ್ಲಿ ಪ್ರಥಮ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಮೊದಲ ವಿಕೆಟ್ಗೆ 33 ರನ್ ಕಲೆಹಾಕಿದರು. ಈ ವೇಳೆ ಜೋಫ್ರಾ ಆರ್ಚರ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಗಿಲ್ (11) ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (0) ಅವರನ್ನು ಎಲ್ಬಿಡಬ್ಲ್ಯೂಗೆ ಬೀಳಿಸಿದ ಲೀಚ್ ಟೀಮ್ ಇಂಡಿಯಾಗೆ ಶಾಕ್ ನೀಡಿದರು.
ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ರೋಹಿತ್ ಶರ್ಮಾ ಹಾಫ್ ಸೆಂಚುರಿಸಿ ಸಿಡಿಸಿದರು. ಇನ್ನು ದಿನದಾಟದ ಅಂತಿಮ ಓವರ್ನಲ್ಲಿ ವಿರಾಟ್ ಕೊಹ್ಲಿ (27) ಜ್ಯಾಕ್ ಲೀಚ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಮೊದಲ ದಿನಾಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 99 ರನ್ಗಳಿಸಿತ್ತು. 2ನೇ ದಿನದಾಟದಲ್ಲಿ ಕೇವಲ 44 ರನ್ ಸೇರ್ಪಡೆಯಾಗುವಷ್ಟರಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ