HOME » NEWS » Sports » CRICKET INDIA VS ENGLAND 3RD TEST LIVE CRICKET SCORE INDIA WON BY 10 WICKETS ZP

India vs England 3rd Test: ಎರಡೇ ದಿನಕ್ಕೆ 3ನೇ ಟೆಸ್ಟ್ ಅಂತ್ಯ: ಭಾರತಕ್ಕೆ ಭರ್ಜರಿ ಜಯ

ಅಪಾಯಕಾರಿ ಜೋ ರೂಟ್ (19) ರನ್ನು ಎಲ್​ಬಿ ಬಲೆಗೆ ಬೀಳಿಸಿ ಅಕ್ಷರ್ ಪಟೇಲ್ ಇಂಗ್ಲೆಂಡ್​ನ ಐದನೇ ವಿಕೆಟ್ ಉರುಳಿಸಿದರು. ಅಷ್ಟರಲ್ಲಾಗಲೇ ಕೇವಲ 56 ರನ್​ಗೆ ಇಂಗ್ಲೆಂಡ್ ಪ್ರಮುಖ ಐವರು ಬ್ಯಾಟ್ಸ್​ಮನ್​ಗಳನ್ನು ಕಳೆದುಕೊಂಡಾಗಿತ್ತು.

news18-kannada
Updated:February 25, 2021, 7:56 PM IST
India vs England 3rd Test: ಎರಡೇ ದಿನಕ್ಕೆ 3ನೇ ಟೆಸ್ಟ್ ಅಂತ್ಯ: ಭಾರತಕ್ಕೆ ಭರ್ಜರಿ ಜಯ
Team India
  • Share this:
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್​ 2ನೇ ದಿನಕ್ಕೆ ಅಂತ್ಯವಾಗಿದ್ದು, ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡವು 112 ರನ್​ಗಳಿಗೆ ಆಲೌಟ್ ಆದರೆ, ಭಾರತ ಪ್ರಥಮ ಇನಿಂಗ್ಸ್​ನ್ನು ಕೇವಲ 145 ರನ್​ಗಳಿಗೆ ಅಂತ್ಯಗೊಳಿಸಿತ್ತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 81 ರನ್​ಗಳಿಗೆ ಸರ್ಪಪತನ ಕಂಡಿತು.

33 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 48 ರನ್​ಗಳ ಗುರಿ ಪಡೆದ ಭಾರತಕ್ಕೆ ಆರಂಭಿಕಾರದ ರೋಹಿತ್ ಶರ್ಮಾ ಹಾಗೂ ಶುಭ್​ಮನ್​ ಗಿಲ್ ಉತ್ತಮ ಶುಭಾರಂಭ ಒದಗಿಸಿದರು. ಅಲ್ಲದೆ 7.4 ಓವರ್​ನಲ್ಲಿ 49 ರನ್ ಬಾರಿಸುವ ಮೂಲಕ ಗಿಲ್ (15) ಹಾಗೂ ರೋಹಿತ್ ಶರ್ಮಾ (25) 10 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಇದಕ್ಕೂ ಮುನ್ನ 33 ರನ್​ಗಳ ಹಿನ್ನಡೆದೊಂದಿಗೆ 2ನೇ ಇನಿಂಗ್ಸ್​ ಆರಂಭಿಸಿದ್ದ ಇಂಗ್ಲೆಂಡ್​ಗೆ ಆರಂಭಿಕ ಆಘಾತ ನೀಡುವಲ್ಲಿ ಕೊಹ್ಲಿಯ ಯೋಜನೆ ಫಲ ನೀಡಿತು. ಟೀಮ್ ಇಂಡಿಯಾ ನಾಯಕ ದ್ವಿತೀಯ ಇನಿಂಗ್ಸ್​ನ ಮೊದಲ ಓವರ್​ನ್ನು ಅಕ್ಷರ್ ಪಟೇಲ್​ಗೆ ನೀಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಅಕ್ಷರ್ ಪಟೇಲ್ ಮೊದಲ ಓವರ್​ನ ಮೊದಲ ಎಸೆತದಲ್ಲೇ ಇಂಗ್ಲೆಂಡ್ ಆರಂಭಿಕ ಜಾಕ್ ಕ್ರಾಲಿ (0) ಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಲ್ಲದೆ ಮೂರನೇ ಎಸೆತದಲ್ಲಿ ಜಾನಿ ಬೈರ್‌ಸ್ಟೋರನ್ನು ಶೂನ್ಯಕ್ಕೆ ಪೆವಿಲಿಯನ್​ಗೆ ಕಳುಹಿಸಿದರು.

ಇನ್ನು ತಂಡದ ಮೊತ್ತ 19 ಆಗುವಷ್ಟರಲ್ಲಿ ಮತ್ತೋರ್ವ ಆರಂಭಿಕ ಡೊಮಿನಿಕ್ ಸಿಬ್ಲಿ (7) ಅಕ್ಷರ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಈ ವೇಳೆ ದಾಳಿಗಿಳಿದ ಅಶ್ವಿನ್ ಸ್ಟೋಕ್ಸ್​ (25) ರನ್ನು ಔಟ್ ಮಾಡಿದ ನಾಲ್ಕನೇ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ಅಪಾಯಕಾರಿ ಜೋ ರೂಟ್ (19) ರನ್ನು ಎಲ್​ಬಿ ಬಲೆಗೆ ಬೀಳಿಸಿ ಅಕ್ಷರ್ ಪಟೇಲ್ ಇಂಗ್ಲೆಂಡ್​ನ ಐದನೇ ವಿಕೆಟ್ ಉರುಳಿಸಿದರು. ಅಷ್ಟರಲ್ಲಾಗಲೇ ಕೇವಲ 56 ರನ್​ಗೆ ಇಂಗ್ಲೆಂಡ್ ಪ್ರಮುಖ ಐವರು ಬ್ಯಾಟ್ಸ್​ಮನ್​ಗಳನ್ನು ಕಳೆದುಕೊಂಡಾಗಿತ್ತು. ತಂಡದ ಮೊತ್ತಕ್ಕೆ 10 ರನ್​ ಸೇರ್ಪಡೆಯಾಗುವಷ್ಟರಲ್ಲಿ ಒಲಿ ಪೋಪ್​ (12) ಗೂ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು.

ತಂಡದ ಮೊತ್ತ 68 ರನ್ ಆಗಿದ್ದ ವೇಳೆ ಜೋಫ್ರಾ ಆರ್ಚರ್ (0) ಪಡೆಯುವುದರೊಂದಿಗೆ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಬೆನ್ ಫೋಕ್ಸ್ (12) ವಿಕೆಟ್ ಉರುಳಿಸಿದ ಅಕ್ಷರ್ ಪಟೇಲ್ ದ್ವಿತೀಯ ಇನಿಂಗ್ಸ್​ನಲ್ಲಿ ಐದು ವಿಕೆಟ್​ಗಳ ಸಾಧನೆ ಮಾಡಿದರು. ಇನ್ನು 29ನೇ ಓವರ್​ನಲ್ಲಿ ಅಶ್ವಿನ್ ಜ್ಯಾಕ್ ಲೀಚ್ (9) ವಿಕೆಟ್ ಪಡೆದರು. ಅಂತಿಮವಾಗಿ ಜೇಮ್ಸ್ ಅಂಡರ್ಸನ್ ವಿಕೆಟ್ ಒಪ್ಪಿಸುವುದರೊಂದಿಗೆ ಇಂಗ್ಲೆಂಡ್ ತಂಡ 81 ರನ್​ಗಳಿಗೆ ದ್ವಿತೀಯ ಇನಿಂಗ್ಸ್ ಅಂತ್ಯಗೊಳಿಸಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 5 ವಿಕೆಟ್ ಪಡೆದರೆ, ಅಶ್ವಿನ್ 4 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿ ಮಿಂಚಿದರು.

ಭಾರತ-ಇಂಗ್ಲೆಂಡ್ ಮೊದಲ ಇನಿಂಗ್ಸ್ ವಿವರ​:ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ ನೀಡಿದ 112 ರನ್​ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 99 ರನ್​ಗಳಿಸಿತ್ತು. ಆದರೆ 2ನೇ ದಿನದಾಟದ ಆರಂಭದಲ್ಲೇ ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಶಾಕ್ ನೀಡುವಲ್ಲಿ ಇಂಗ್ಲೆಂಡ್ ಬೌಲರುಗಳು ಯಶಸ್ವಿಯಾದರು.

ಮೊದಲ ದಿನದಾಟದ ಮೊತಕ್ಕೆ 13 ರನ್​ ಸೇರ್ಪಡೆಗೊಳ್ಳುವಷ್ಟರಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ (7) ಜ್ಯಾಕ್ ಲೀಚ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 66 ರನ್ ಬಾರಿಸಿ ಶತಕದತ್ತ ಮುಖ ಮಾಡಿದ್ದ ರೋಹಿತ್ ಶರ್ಮಾರನ್ನು ಲೀಚ್ ಎಲ್​ಬಿ ಬಲೆಗೆ ಬೀಳಿಸಿದರು. ಆ ಬಳಿಕ ಬಂದ ರಿಷಭ್ ಪಂತ್ (1) ಜೋ ರೂಟ್​ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ಬಂದ ವೇಗದಲ್ಲೇ ಮರಳಿದರು. ಇನ್ನು 46ನೇ ಓವರ್​ ಎಸೆದ ಇಂಗ್ಲೆಂಡ್ ನಾಯಕ ರೂಟ್ ವಾಷಿಂಗ್ಟನ್ ಸುಂದರ್ (0) ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಲ್ಲದೆ 3 ನೇ ಎಸೆತದಲ್ಲಿ ಅಕ್ಷರ್ ಪಟೇಲ್​ರ ವಿಕೆಟ್ ಪಡೆದು ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದರು.

ಅಂದರೆ ನಿನ್ನೆಯ ಮೊತ್ತಕ್ಕೆ ಕೇವಲ 26 ರನ್ ಸೇರ್ಪಡೆಯಾಗುವಷ್ಟರಲ್ಲಿ ಭಾರತ ಇಂದು 5 ವಿಕೆಟ್​ಗಳನ್ನು ಕಳೆದುಕೊಂಡಿತು. ಇದರ ಬೆನ್ನಲ್ಲೇ 17 ರನ್​ಗಳಿಸಿದ್ದ ಅಶ್ವಿನ್ ರೂಟ್ ಎಸೆತದಲ್ಲಿ ಕ್ರಾಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಬುಮ್ರಾ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಭಾರತವು ಮೊದಲ ಇನಿಂಗ್ಸ್​ನಲ್ಲಿ 145 ರನ್​ಗಳಿಗೆ ಆಲೌಟಾಯಿತು. ಅಲ್ಲದೆ ಪ್ರಥಮ ಇನಿಂಗ್ಸ್​ನಲ್ಲಿ 33 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಇನ್ನು ಇಂಗ್ಲೆಂಡ್ ಪರ ಬೌಲಿಂಗ್​ನಲ್ಲಿ ಮಿಂಚಿದ ನಾಯಕ ಜೋ ರೂಟ್ ಚೊಚ್ಚಲ ಬಾರಿ 5 ವಿಕೆಟ್ ಪಡೆದು ಸಂಭ್ರಮಿಸಿದರು. ಹಾಗೆಯೇ ಜ್ಯಾಕ್ ಲೀಚ್ 4 ವಿಕೆಟ್ ಉರುಳಿಸಿ ಗಮನ ಸೆಳೆದರು. ಇನ್ನು ಜೋಫ್ರಾ ಆರ್ಚರ್ 1 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್​​ಗೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರುಗಳು ಯಶಸ್ವಿಯಾಗಿದ್ದರು. ಓಪನಿಂಗ್ ಬ್ಯಾಟ್ಸ್​ಮನ್ ಸಿಬ್ಲಿಯನ್ನು(0)ಯನ್ನು 3ನೇ ಓವರ್​ನಲ್ಲಿ ಔಟ್ ಮಾಡಿ ಇಶಾಂತ್ ಶರ್ಮಾ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜಾನಿ ಬೈರ್​ಸ್ಟೋ ಅವರನ್ನೂ ಸಹ ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಜೋ ರೂಟ್, ಆರಂಭಿಕ ಝಾಕ್ ಕ್ರಾಲಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು.

ಆದರೆ ತಂಡದ ಮೊತ್ತ 74 ರನ್​ಗಳಾಗಿದ್ದ ವೇಳೆ ದಾಳಿಗಿಳಿದ ಅಶ್ವಿನ್ ರೂಟ್ (17) ಅವರ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಅರ್ಧಶತಕ ಸಿಡಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ರಾಲಿ (53) ವಿಕೆಟ್ ಪಡೆದು ಅಕ್ಷರ್ ಪಟೇಲ್ ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.

ಇದರ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಒಲಿ ಪೋಪ್ (1) ಹಾಗೂ ಬೆನ್ ಸ್ಟೋಕ್ಸ್​ (6) ವಿಕೆಟ್​ಗಳನ್ನು ಉರುಳಿಸಿದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಇಡೀ ಪಂದ್ಯವನ್ನು ತೆಕ್ಕೆಗೆ ತೆಗೆದುಕೊಂಡರು. ಆ ಬಳಿಕ ಬಂದ ಯಾವುದೇ ಬ್ಯಾಟ್ಸ್​ಮನ್​ಗಳನ್ನು ನೆಲೆಯೂರಲು ಬಿಡದ ಟೀಮ್ ಇಂಡಿಯಾ ಸ್ಪಿನ್ನರ್​ಗಳು ತಂಡದ ಮೊತ್ತ 100ರ ಗಡಿದಾಟುವಷ್ಟರಲ್ಲಿ 8 ವಿಕೆಟ್ ಉರುಳಿಸಿದರು.

ಇನ್ನು ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುವುದರೊಂದಿಗೆ ಅಕ್ಷರ್ ಪಟೇಲ್ 2ನೇ ಟೆಸ್ಟ್​​ನಲ್ಲೂ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಚೆನ್ನೈ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡಿದ್ದ ಅಕ್ಷರ್ ಇನಿಂಗ್ಸ್​ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೊನೆಯ ವಿಕೆಟ್ ಪಡೆಯುವ ಮೂಲಕ ಅಕ್ಷರ್ ಪಟೇಲ್ ಒಟ್ಟು 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 112 ರನ್​ಗಳಿಗೆ ಸರ್ಪಪತನ ಕಂಡಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 6 ವಿಕೆಟ್ ಕಬಳಿಸಿ ಮಿಂಚಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಇನ್ನು ಮೊದಲ ದಿನದ ಮೂರನೇ ಸೇಷನ್​ನಲ್ಲಿ ಪ್ರಥಮ ಇನಿಂಗ್ಸ್​ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ-ಶುಭ್​ಮನ್ ಗಿಲ್ ಮೊದಲ ವಿಕೆಟ್​ಗೆ 33 ರನ್​ ಕಲೆಹಾಕಿದರು. ಈ ವೇಳೆ ಜೋಫ್ರಾ ಆರ್ಚರ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ ಗಿಲ್ (11) ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (0) ಅವರನ್ನು ಎಲ್​ಬಿಡಬ್ಲ್ಯೂಗೆ ಬೀಳಿಸಿದ ಲೀಚ್ ಟೀಮ್ ಇಂಡಿಯಾಗೆ ಶಾಕ್ ನೀಡಿದರು.

ಈ ಹಂತದಲ್ಲಿ ಜೊತೆಗೂಡಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ರೋಹಿತ್ ಶರ್ಮಾ ಹಾಫ್​ ಸೆಂಚುರಿಸಿ ಸಿಡಿಸಿದರು. ಇನ್ನು ದಿನದಾಟದ ಅಂತಿಮ ಓವರ್​ನಲ್ಲಿ ವಿರಾಟ್ ಕೊಹ್ಲಿ (27) ಜ್ಯಾಕ್ ಲೀಚ್​ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಮೊದಲ ದಿನಾಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 99 ರನ್​ಗಳಿಸಿತ್ತು. 2ನೇ ದಿನದಾಟದಲ್ಲಿ ಕೇವಲ 44 ರನ್​ ಸೇರ್ಪಡೆಯಾಗುವಷ್ಟರಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಮೊದಲ ಇನಿಂಗ್ಸ್​ ಅಂತ್ಯಗೊಳಿಸಿತು.

ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 81 ರನ್​ಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್​ಗಳು ಯಶಸ್ವಿಯಾದರು. ಮೊದಲ ಇನಿಂಗ್ಸ್​ನ 33 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 10 ವಿಕೆಟ್ ಭರ್ಜರಿ ಜಯ ಸಾಧಿಸಿದೆ.
Published by: zahir
First published: February 25, 2021, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories