news18-kannada Updated:February 25, 2021, 6:52 PM IST
axar-ashwin
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಕುತೂಹಲಘಟ್ಟದತ್ತ ಸಾಗಿದೆ. ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 112 ರನ್ಗಳಿಗೆ ಆಲೌಟ್ ಆದರೆ, ಭಾರತ ಪ್ರಥಮ ಇನಿಂಗ್ಸ್ನ್ನು ಕೇವಲ 145 ರನ್ಗಳಿಗೆ ಅಂತ್ಯಗೊಳಿಸಿತ್ತು. ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 81 ರನ್ಗಳಿಗೆ ಸರ್ಪಪತನ ಕಂಡಿದೆ.
33 ರನ್ಗಳ ಹಿನ್ನಡೆದೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡುವಲ್ಲಿ ಕೊಹ್ಲಿಯ ಯೋಜನೆ ಫಲ ನೀಡಿತು. ಟೀಮ್ ಇಂಡಿಯಾ ನಾಯಕ ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನ್ನು ಅಕ್ಷರ್ ಪಟೇಲ್ಗೆ ನೀಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಅಕ್ಷರ್ ಪಟೇಲ್ ಮೊದಲ ಓವರ್ನ ಮೊದಲ ಎಸೆತದಲ್ಲೇ ಇಂಗ್ಲೆಂಡ್ ಆರಂಭಿಕ ಜಾಕ್ ಕ್ರಾಲಿ (0) ಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಲ್ಲದೆ ಮೂರನೇ ಎಸೆತದಲ್ಲಿ ಜಾನಿ ಬೈರ್ಸ್ಟೋರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು.
ಇನ್ನು ತಂಡದ ಮೊತ್ತ 19 ಆಗುವಷ್ಟರಲ್ಲಿ ಮತ್ತೋರ್ವ ಆರಂಭಿಕ ಡೊಮಿನಿಕ್ ಸಿಬ್ಲಿ (7) ಅಕ್ಷರ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಈ ವೇಳೆ ದಾಳಿಗಿಳಿದ ಅಶ್ವಿನ್ ಸ್ಟೋಕ್ಸ್ (25) ರನ್ನು ಔಟ್ ಮಾಡಿದ ನಾಲ್ಕನೇ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಅಪಾಯಕಾರಿ ಜೋ ರೂಟ್ (19) ರನ್ನು ಎಲ್ಬಿ ಬಲೆಗೆ ಬೀಳಿಸಿ ಅಕ್ಷರ್ ಪಟೇಲ್ ಇಂಗ್ಲೆಂಡ್ನ ಐದನೇ ವಿಕೆಟ್ ಉರುಳಿಸಿದರು. ಅಷ್ಟರಲ್ಲಾಗಲೇ ಕೇವಲ 56 ರನ್ಗೆ ಇಂಗ್ಲೆಂಡ್ ಪ್ರಮುಖ ಐವರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಾಗಿತ್ತು. ತಂಡದ ಮೊತ್ತಕ್ಕೆ 10 ರನ್ ಸೇರ್ಪಡೆಯಾಗುವಷ್ಟರಲ್ಲಿ ಒಲಿ ಪೋಪ್ (12) ಗೂ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು.
ತಂಡದ ಮೊತ್ತ 68 ರನ್ ಆಗಿದ್ದ ವೇಳೆ ಜೋಫ್ರಾ ಆರ್ಚರ್ (0) ಪಡೆಯುವುದರೊಂದಿಗೆ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬೆನ್ ಫೋಕ್ಸ್ (12) ವಿಕೆಟ್ ಉರುಳಿಸಿದ ಅಕ್ಷರ್ ಪಟೇಲ್ ದ್ವಿತೀಯ ಇನಿಂಗ್ಸ್ನಲ್ಲಿ ಐದು ವಿಕೆಟ್ಗಳ ಸಾಧನೆ ಮಾಡಿದರು. ಇನ್ನು 29ನೇ ಓವರ್ನಲ್ಲಿ ಅಶ್ವಿನ್ ಜ್ಯಾಕ್ ಲೀಚ್ (9) ವಿಕೆಟ್ ಪಡೆದರು. ಅಂತಿಮವಾಗಿ ಜೇಮ್ಸ್ ಅಂಡರ್ಸನ್ ವಿಕೆಟ್ ಒಪ್ಪಿಸುವುದರೊಂದಿಗೆ ಇಂಗ್ಲೆಂಡ್ ತಂಡ 81 ರನ್ಗಳಿಗೆ ದ್ವಿತೀಯ ಇನಿಂಗ್ಸ್ ಅಂತ್ಯಗೊಳಿಸಿತು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 5 ವಿಕೆಟ್ ಪಡೆದರೆ, ಅಶ್ವಿನ್ 4 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿ ಮಿಂಚಿದರು.
ಮೊದಲ ಇನಿಂಗ್ಸ್ನಲ್ಲಿ 33 ರನ್ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾಗೆ ದ್ವಿತೀಯ ಇನಿಂಗ್ಸ್ನಲ್ಲಿ ಗೆಲ್ಲಲು ಕೇವಲ 49 ರನ್ಗಳ ಅವಶ್ಯಕತೆಯಿದೆ.
Published by:
zahir
First published:
February 25, 2021, 6:45 PM IST