India vs England 3rd T20: ಬಟ್ಲರ್ ಭರ್ಜರಿ ಬ್ಯಾಟಿಂಗ್: ಇಂಡಿಯಾ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷೀಸಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಗುಜರಾತ್​ನ ವಿವಿಧೆಡೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಟಿ20 ಸರಣಿಯ ಉಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನಿರ್ಬಂಧಿಸಲಾಗಿದೆ. ಹೀಗಾಗಿ ಇಂದು ಭಾರತ-ಇಂಗ್ಲೆಂಡ್ ಖಾಲಿ ಮೈದಾನದಲ್ಲಿ ಮುಖಾಮುಖಿಯಾಗಲಿದೆ.

jos buttler

jos buttler

 • Share this:
  ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ20 ಪಂದ್ಯದಲ್ಲಿ ಇಯಾನ್ ಮೋರ್ಗನ್ ಪಡೆ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ನೀಡಿದ 157 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಆಟಗಾರ ಜೋಸ್ ಬಟ್ಲರ್​ ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ 18.2 ಓವರ್​ನಲ್ಲಿ ಗುರಿಮುಟ್ಟಿತ್ತು.

  ಇದಕ್ಕೂ ಮುನ್ನ ಭಾರತ ನೀಡಿದ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್​ ತಂಡವು ನಿಧಾನಗತಿಯ ಆರಂಭ ಪಡೆಯಿತು. ಮೊದಲ ಮೂರು ಓವರ್​ಗಳಲ್ಲಿ 16 ರನ್​ ಕಲೆಹಾಕಿದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಜೋಡಿಯನ್ನು ಬೇರ್ಪಡಿಸುವಲ್ಲಿ ಯಜುವೇಂದ್ರ ಚಹಲ್ ಯಶಸ್ವಿಯಾದರು.

  ಚಹಲ್ ಎಸೆದ 4ನೇ ಓವರ್​ನಲ್ಲಿ ಜೇಸನ್​ ರಾಯ್​ (9) ಮಾಡಿದ ರಿವರ್ಸ್​ ಸ್ವೀಪ್ ಶಾಟ್​ನ್ನು ಅತ್ಯುತ್ತಮವಾಗಿ ಹಿಡಿಯುವ ಮೂಲಕ ರೋಹಿತ್ ಶರ್ಮಾ ಇಂಗ್ಲೆಂಡ್ ಆರಂಭಿಕನಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಮತ್ತೊಂದೆಡೆ ಜೋಸ್ ಬಟ್ಲರ್ ಆರ್ಭಟ ಮುಂದುವರೆದಿತ್ತು. ಪವರ್​ಪ್ಲೇನಲ್ಲಿ 3 ಸಿಕ್ಸರ್, 4 ಬೌಂಡರಿ ಬಾರಿಸಿದ ಬಟ್ಲರ್ 6 ಓವರ್​ನಲ್ಲಿ ತಂಡದ ಮೊತ್ತವನ್ನು 57 ಕ್ಕೆ ತಂದು ನಿಲ್ಲಿಸಿದರು. ಅಲ್ಲದೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಿಂಚಿದರು.

  ಇನ್ನು 10ನೇ ಓವರ್​ನಲ್ಲಿ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಎಸೆತಕ್ಕೆ ಮುನ್ನುಗ್ಗಿ ಭರ್ಜರಿ ಉತ್ತರ ನೀಡಲು ಮುಂದಾದ ಡೇವಿಡ್ ಮಲಾನ್ (18) ಸ್ಟಂಪ್ ಆಗುವ ಮೂಲಕ ಹೊರನಡೆದರು. ಇದಾಗ್ಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಟೀಮ್ ಇಂಡಿಯಾ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದರು. ಹಾಗೆಯೇ 15ನೇ ಓವರ್​ನಲ್ಲಿ ಚಹಲ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಿ ಬಟ್ಲರ್​ ನೀಡಿದ ಕ್ಯಾಚ್​ನ್ನು ವಿರಾಟ್ ಕೊಹ್ಲಿ ಕೈಚೆಲ್ಲಿದ್ದು, ದುಬಾರಿಯಾಯಿತು. ಇನ್ನು 17ನೇ ಓವರ್​ನಲ್ಲಿ  ಜಾನಿ ಬೈರ್​​ಸ್ಟೋವ್ ನೀಡಿದ ಕ್ಯಾಚ್​ನ್ನು ಚಹಲ್ ಕೈ ಬಿಟ್ಟರು.

  52 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 83 ರನ್​ಗಳಿಸಿದರು. ಅಲ್ಲದೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾನಿ ಬೈರ್​ಸ್ಟೋವ್ 28 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 40 ರನ್ ಬಾರಿಸಿದರು. ಅಲ್ಲದೆ 3ನೇ ವಿಕೆಟ್​ಗೆ 77 ರನ್​ಗಳ ಜೊತೆಯಾಟದೊಂದಿಗೆ ತಂಡವನ್ನು 18.2 ಓವರ್​ನಲ್ಲಿ 158 ರನ್​ ಬಾರಿಸಿ ಗುರಿ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 5 ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದೆ.

  ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಶೂನ್ಯಕ್ಕೆ ಮಾರ್ಕ್​ವುಡ್​ಗೆ ವಿಕೆಟ್​ ಒಪ್ಪಿಸಿದರು. ಅಲ್ಲದೆ ತಂಡದ ಮೊತ್ತ 20 ಆಗಿದ್ದ ವೇಳೆ ರೋಹಿತ್ ಶರ್ಮಾ (15) ಮಾರ್ಕ್​ವುಡ್​ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

  ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಬಾರಿ ಕೇವಲ 4 ರನ್​ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ತಂಡದ ಮೊತ್ತ 24 ಆಗಿದ್ದ ವೇಳೆ 3 ವಿಕೆಟ್​ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು.

  ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್​ಗೆ 40 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಸುಸ್ಥಿತಿಗೆ ತಂದರು. ಆದರೆ ಈ ವೇಳೆ ಮೂರನೇ ರನ್ ಕದಿಯುವ ತವಕದಲ್ಲಿ ರನೌಟ್ ಆಗುವ ಮೂಲಕ ರಿಷಭ್ ಪಂತ್ (20) ವಿಕೆಟ್ ಕೈಚೆಲ್ಲಿದರು.

  ಇನ್ನು ಶ್ರೇಯಸ್ ಅಯ್ಯರ್ (9) ಮಾರ್ಕ್​ವುಡ್​ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಡೇವಿಡ್ ಮಲಾನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಕೇವಲ 86 ರನ್​ಗಳಿಗೆ ಭಾರತದ ಪ್ರಮುಖ 5 ವಿಕೆಟ್​ಗಳು ಪತನವಾಯಿತು.

  ಆದರೆ ಮತ್ತೊಂದೆಡೆ ಆಕರ್ಷಕವಾಗಿ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ರನ್​ ಹೆಚ್ಚಿಸುತ್ತಾ ಹೋದರು. ಪರಿಣಾಮ 15 ಓವರ್​ ಮುಕ್ತಾಯದ ವೇಳೆ ಟೀಮ್ ಇಂಡಿಯಾ ಮೊತ್ತ 87ಕ್ಕೆ ಬಂದು ನಿಂತಿತು. ಇದರ ಬಳಿಕ ಬ್ಯಾಟಿಂಗ್ ವರಸೆ ಬದಲಿಸಿದ ಕೊಹ್ಲಿ ಜೋಫ್ರಾ ಆರ್ಚರ್​ ಎಸೆದ 16ನೇ ಓವರ್​ನಲ್ಲಿ 13 ರನ್​ ಕಲೆಹಾಕಿದರು.

  ಅಲ್ಲದೆ ಕ್ರಿಸ್ ಜೋರ್ಡನ್ ಎಸೆತದಲ್ಲಿ ಮನಮೋಹಕ ಬೌಂಡರಿ ಬಾರಿಸುವ  ಮೂಲಕ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ  ಟಿ20 ಕ್ರಿಕೆಟ್​ನ ತಮ್ಮ 27ನೇ ಅರ್ಧಶತಕವನ್ನು ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಮಾರ್ಕ್​ವುಡ್​ ಓವರ್​ನಲ್ಲಿ ಎರಡು ಸಿಕ್ಸ್, ಒಂದು ಬೌಂಡರಿ ಬಾರಿಸಿ ಕೊಹ್ಲಿ ತಮ್ಮ ವಿರಾಟ ರೂಪ ದರ್ಶನ ಮಾಡಿದರು.

  ಇತ್ತ ಕೊಹ್ಲಿ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 19ನೇ ಓವರ್​ನ 2ನೇ ಎಸೆತದಲ್ಲಿ ಪಾಂಡ್ಯ ಬ್ಯಾಟ್​ನಿಂದ ಸಿಕ್ಸ್ ಸಿಡಿಯಿತು. ಅಲ್ಲದೆ 6ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕೊಹ್ಲಿ ಸ್ಕೋರ್ ಹೆಚ್ಚಿಸಿದರು.

  ಕ್ರಿಸ್ ಜೋರ್ಡನ್ ಎಸೆದ ಅಂತಿಮ ಓವರ್​ನ ಮೊದಲ ಎಸೆದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ 2ನೇ ಬಾಲ್​ನಲ್ಲಿ 1 ರನ್ ತೆಗೆದರು. ಮೂರನೇ ಎಸೆತವನ್ನು ಎದುರಿಸಿದ ವಿರಾಟ್ ಕೊಹ್ಲಿ ಆಕರ್ಷಕ ಕವರ್​ ಡ್ರೈವ್ ಮೂಲಕ ಚೆಂಡನ್ನು ಬೌಂಡರಿಗಟ್ಟಿದ್ದರು. ಇನ್ನು 4ನೇ ಎಸೆತದಲ್ಲಿ 2 ರನ್​ ಕದಿಯುವಲ್ಲಿ ಯಶಸ್ವಿಯಾದರು. 5ನೇ ಎಸೆತದಲ್ಲಿ 1 ರನ್ ಮೂಡಿಬಂದರೆ, ಕೊನೆಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (17) ಆರ್ಚರ್ ಹಿಡಿದ ಕ್ಯಾಚ್​ಗೆ ಬಲಿಯಾದರು.

  ಇದಾಗ್ಯೂ ಅಜೇಯರಾಗುಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  46 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 77 ರನ್​ ಕಲೆಹಾಕಿದರು. ಅಲ್ಲದೆ ಟೀಮ್ ಇಂಡಿಯಾ ಮೊತ್ತವನ್ನು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ಕ್ಕೆ ತಂದು ನಿಲ್ಲಿಸಿದರು. ಇಂಗ್ಲೆಂಡ್ ಪರ ಮಾರ್ಕ್​ವುಡ್ 3 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡನ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

  ಉಭಯ ತಂಡಗಳು ಹೀಗಿವೆ:-

  ಭಾರತ: ರೋಹಿತ್ ಶರ್ಮಾ , ಇಶಾನ್ ಕಿಶನ್ , ವಿರಾಟ್ ಕೊಹ್ಲಿ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ , ಹಾರ್ದಿಕ್ ಪಾಂಡ್ಯ , ವಾಷಿಂಗ್ಟನ್ ಸುಂದರ್ , ಶಾರ್ದುಲ್ ಠಾಕೂರ್ , ಭುವನೇಶ್ವರ್ ಕುಮಾರ್ , ಯಜ್ವೇಂದ್ರ ಚಹಲ್

  ಇಂಗ್ಲೆಂಡ್: ಜೇಸನ್ ರಾಯ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಡೇವಿಡ್ ಮಲಾನ್ , ಜಾನಿ ಬೈರ್‌ಸ್ಟೋವ್ , ಇಯೊನ್ ಮೋರ್ಗನ್ (ನಾಯಕ) , ಬೆನ್ ಸ್ಟೋಕ್ಸ್ , ಸ್ಯಾಮ್ ಕರ್ರನ್ , ಕ್ರಿಸ್ ಜೋರ್ಡಾನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಮಾರ್ಕ್ ವುಡ್
  Published by:zahir
  First published: