ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಇಶಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಅದರಂತೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಶೂನ್ಯಕ್ಕೆ ಮಾರ್ಕ್ವುಡ್ಗೆ ವಿಕೆಟ್ ಒಪ್ಪಿಸಿದರು. ಅಲ್ಲದೆ ತಂಡದ ಮೊತ್ತ 20 ಆಗಿದ್ದ ವೇಳೆ ರೋಹಿತ್ ಶರ್ಮಾ (15) ಮಾರ್ಕ್ವುಡ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಬಾರಿ ಕೇವಲ 4 ರನ್ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ತಂಡದ ಮೊತ್ತ 24 ಆಗಿದ್ದ ವೇಳೆ 3 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್ಗೆ 40 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಸುಸ್ಥಿತಿಗೆ ತಂದರು. ಆದರೆ ಈ ವೇಳೆ ಮೂರನೇ ರನ್ ಕದಿಯುವ ತವಕದಲ್ಲಿ ರನೌಟ್ ಆಗುವ ಮೂಲಕ ರಿಷಭ್ ಪಂತ್ (20) ವಿಕೆಟ್ ಕೈಚೆಲ್ಲಿದರು.
ಇನ್ನು ಶ್ರೇಯಸ್ ಅಯ್ಯರ್ (9) ಮಾರ್ಕ್ವುಡ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಡೇವಿಡ್ ಮಲಾನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರೊಂದಿಗೆ ಕೇವಲ 86 ರನ್ಗಳಿಗೆ ಭಾರತದ ಪ್ರಮುಖ 5 ವಿಕೆಟ್ಗಳು ಪತನವಾಯಿತು.
ಆದರೆ ಮತ್ತೊಂದೆಡೆ ಆಕರ್ಷಕವಾಗಿ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ರನ್ ಹೆಚ್ಚಿಸುತ್ತಾ ಹೋದರು. ಪರಿಣಾಮ 15 ಓವರ್ ಮುಕ್ತಾಯದ ವೇಳೆ ಟೀಮ್ ಇಂಡಿಯಾ ಮೊತ್ತ 87ಕ್ಕೆ ಬಂದು ನಿಂತಿತು. ಇದರ ಬಳಿಕ ಬ್ಯಾಟಿಂಗ್ ವರಸೆ ಬದಲಿಸಿದ ಕೊಹ್ಲಿ ಜೋಫ್ರಾ ಆರ್ಚರ್ ಎಸೆದ 16ನೇ ಓವರ್ನಲ್ಲಿ 13 ರನ್ ಕಲೆಹಾಕಿದರು.
ಅಲ್ಲದೆ ಕ್ರಿಸ್ ಜೋರ್ಡನ್ ಎಸೆತದಲ್ಲಿ ಮನಮೋಹಕ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ ಟಿ20 ಕ್ರಿಕೆಟ್ನ ತಮ್ಮ 27ನೇ ಅರ್ಧಶತಕವನ್ನು ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಮಾರ್ಕ್ವುಡ್ ಓವರ್ನಲ್ಲಿ ಎರಡು ಸಿಕ್ಸ್, ಒಂದು ಬೌಂಡರಿ ಬಾರಿಸಿ ಕೊಹ್ಲಿ ತಮ್ಮ ವಿರಾಟ ರೂಪ ದರ್ಶನ ಮಾಡಿದರು.
ಇತ್ತ ಕೊಹ್ಲಿ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 19ನೇ ಓವರ್ನ 2ನೇ ಎಸೆತದಲ್ಲಿ ಪಾಂಡ್ಯ ಬ್ಯಾಟ್ನಿಂದ ಸಿಕ್ಸ್ ಸಿಡಿಯಿತು. ಅಲ್ಲದೆ 6ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಕೊಹ್ಲಿ ಸ್ಕೋರ್ ಹೆಚ್ಚಿಸಿದರು.
ಕ್ರಿಸ್ ಜೋರ್ಡನ್ ಎಸೆದ ಅಂತಿಮ ಓವರ್ನ ಮೊದಲ ಎಸೆದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ 2ನೇ ಬಾಲ್ನಲ್ಲಿ 1 ರನ್ ತೆಗೆದರು. ಮೂರನೇ ಎಸೆತವನ್ನು ಎದುರಿಸಿದ ವಿರಾಟ್ ಕೊಹ್ಲಿ ಆಕರ್ಷಕ ಕವರ್ ಡ್ರೈವ್ ಮೂಲಕ ಚೆಂಡನ್ನು ಬೌಂಡರಿಗಟ್ಟಿದ್ದರು. ಇನ್ನು 4ನೇ ಎಸೆತದಲ್ಲಿ 2 ರನ್ ಕದಿಯುವಲ್ಲಿ ಯಶಸ್ವಿಯಾದರು. 5ನೇ ಎಸೆತದಲ್ಲಿ 1 ರನ್ ಮೂಡಿಬಂದರೆ, ಕೊನೆಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (17) ಆರ್ಚರ್ ಹಿಡಿದ ಕ್ಯಾಚ್ಗೆ ಬಲಿಯಾದರು.
ಇದಾಗ್ಯೂ ಅಜೇಯರಾಗುಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 77 ರನ್ ಕಲೆಹಾಕಿದರು. ಅಲ್ಲದೆ ಟೀಮ್ ಇಂಡಿಯಾ ಮೊತ್ತವನ್ನು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ಕ್ಕೆ ತಂದು ನಿಲ್ಲಿಸಿದರು. ಇಂಗ್ಲೆಂಡ್ ಪರ ಮಾರ್ಕ್ವುಡ್ 3 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡನ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು.
ಸ್ಕೋರ್: ಭಾರತ- 156/6
ಓವರ್: 20
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ಗಳ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
India vs England Playing 11: ಭಾರತ-ಇಂಗ್ಲೆಂಡ್ 3ನೇ ಟಿ20: ಟೀಮ್ ಇಂಡಿಯಾದಲ್ಲಿ 1 ಬದಲಾವಣೆ..!
ಇದೀಗ ಸರಣಿ 1-1 ರಿಂದ ಸಮಬಲಗೊಂಡಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಪಣತೊಟ್ಟಿದೆ. ಅಲ್ಲದೆ ಈ ಸರಣಿಯು ಐಸಿಸಿ ಟಿ 20 ವಿಶ್ವಕಪ್ಗಾಗಿ ಪೂರ್ವಾಭ್ಯಾಸದಂತಿದೆ. ಏಕೆಂದರೆ ಐಸಿಸಿ ಟಿ 20 ವಿಶ್ವಕಪ್ ಈ ವರ್ಷಾಂತ್ಯದಲ್ಲಿ ಕೊನೆಯಲ್ಲಿ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಎರಡು ತಂಡಗಳಿಗೂ ಈ ಸರಣಿ ಮಹತ್ವದೆನಿಸಿಕೊಂಡಿದೆ.
ಇನ್ನು ಟಿ20 ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಅಗ್ರಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ದ್ವಿತೀಯ ಸ್ಥಾನದಲ್ಲಿದೆ. ಹೀಗಾಗಿ ಈ ಸರಣಿ ಜಯವು ಶ್ರೇಯಾಂಕ ಪಟ್ಟಿಯಲ್ಲಿ ಕೆಲ ಬದಲಾವಣೆಗೆ ಕಾರಣವಾಗಬಹುದು. ಹೀಗಾಗಿ ಆಂಗ್ಲರು ಅಗ್ರಸ್ಥಾನವನ್ನು ಉಳಿಸುವ ತವಕದಲ್ಲಿದ್ದರೆ, ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೂ ಮುನ್ನ ಅಗ್ರಸ್ಥಾನಕ್ಕೇರಿ ಬಲಿಷ್ಠ ತಂಡವೆಂದು ಸಾರುವ ಇರಾದೆಯಲ್ಲಿದೆ.
ಪಂದ್ಯದ ಸಮಯ: ಸಂಜೆ 7
ಸ್ಥಳ: ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಟಿವಿ, ಏರ್ಟೆಲ್ ಟಿವಿ, ಹಾಟ್ಸ್ಟಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ