ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್ಗಳ ರೋಚಕ ಜಯ ದಾಖಲಿಸಿದೆ. ಟೀಮ್ ಇಂಡಿಯಾ ನೀಡಿದ 330 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ 322 ರನ್ಗಳಿಸಲಷ್ಟೇ ಶಕ್ತರಾದರು. ಈ ಜಯದೊಂದಿಗೆ ಭಾರತ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಕ್ರೀಸ್ಗಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ತಂಡದ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ನಡುವೆ ಶಿಖರ್ ಧವನ್ ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ಶತಕದ ಜೊತೆಯಾಟದ ಬೆನ್ನಲ್ಲೇ ಆದಿಲ್ ರಶೀದ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರೋಹಿತ್ ಶರ್ಮಾ (37) ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ 56 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 67 ರನ್ ಬಾರಿಸಿದ್ದ ಶಿಖರ್ ಧವನ್ ವಿಕೆಟ್ ಪಡೆಯುವಲ್ಲಿ ಆದಿಲ್ ರಶೀದ್ ಯಶಸ್ವಿಯಾದರು.
ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಮೇಲೆ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ 7 ರನ್ಗಳಿಸಿದ್ದ ವೇಳೆ ಮೊಯೀನ್ ಅಲಿ ಎಸೆದ ಮ್ಯಾಜಿಕ್ ಎಸೆತಕ್ಕೆ ಕೊಹ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕನ ಬೆನ್ನಲ್ಲೇ ಕೆಎಲ್ ರಾಹುಲ್ (7) ಸಹ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಇಂಗ್ಲೆಂಡ್ ಬೌಲರುಗಳು ಮೇಲುಗೈ ಸಾಧಿಸಿದರು.
ಆದರೆ ಈ ವೇಳೆ ಜೊತೆಯಾದ ಪಂತ್-ಹಾರ್ದಿಕ್ ಪಾಂಡ್ಯ ಜೋಡಿ ಉತ್ತಮ ಜೊತೆಯಾಟದ ಮೂಲಕ ಮತ್ತೆ ಪಂದ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ 6ನೇ ವಿಕೆಟ್ಗೆ 99 ರನ್ಗಳನ್ನು ಪೇರಿಸಿದರು. ಇತ್ತ ರಿಷಭ್ ಪಂತ್ ಬಿರುಸಿನ ಅರ್ಧಶತಕ ಪೂರೈಸಿದರು. ತಂಡದ ಮೊತ್ತ 36 ಓವರ್ನಲ್ಲಿ 256 ಆಗಿದ್ದ ವೇಳೆ 62 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 78 ರನ್ಗಳಿಸಿದ್ದ ಪಂತ್, ಸ್ಯಾಮ್ ಕರ್ರನ್ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಮುಖ ಮಾಡಿದರು.
ಮತ್ತೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಇದಾಗಿ ಕೆಲ ಹೊತ್ತಿನಲ್ಲೇ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 64 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಪಾಂಡ್ಯ, ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ಕೃನಾಲ್ ಪಾಂಡ್ಯ ಹಾಗೂ ಶಾರ್ದುಲ್ ಠಾಕೂರ್ ಕೊನೆಯ 11 ಓವರ್ಗಳನ್ನು ಆಡುವ ಜವಾಬ್ದಾರಿ ವಹಿಸಿಕೊಂಡರು. ಅಲ್ಲದೆ 44ನೇ ಓವರ್ನಲ್ಲಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು.
ಕೃನಾಲ್ ಪಾಂಡ್ಯ ಜೊತೆಗೂಡಿ 8ನೇ ವಿಕೆಟ್ಗೆ 45 ರನ್ಗಳ ಜೊತೆಯಾಟವಾಡಿದ ಶಾರ್ದುಲ್ ಠಾಕೂರ್ ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 30 ರನ್ಗಳಿಸಿ ಮಾರ್ಕ್ವುಡ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 25 ರನ್ ಬಾರಿಸಿದ ಕೃನಾಲ್ ಪಾಂಡ್ಯ ಕೂಡ ಔಟ್ ಆದರು. ಇನ್ನು ಪ್ರಸಿಧ್ ಕೃಷ್ಣರನ್ನು ಶೂನ್ಯಕ್ಕೆ ಮಾರ್ಕ್ವುಡ್ ಬೌಲ್ಡ್ ಮಾಡಿದರೆ, 3 ರನ್ಗಳಿಸಿದ್ದ ಭುವನೇಶ್ವರ್ ಕುಮಾರ್ರನ್ನು ರೀಸ್ ಟಾಪ್ಲೆ ಔಟ್ ಮಾಡಿದರು. ಇದರೊಂದಿಗೆ 48.2 ಓವರ್ನಲ್ಲಿ ಟೀಮ್ ಇಂಡಿಯಾ 329 ರನ್ಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಮಾರ್ಕ್ವುಡ್ 3 ವಿಕೆಟ್ ಕಬಳಿಸಿದರೆ, ಆದಿಲ್ ರಶೀದ್ 2 ವಿಕೆಟ್ ಉರುಳಿಸಿ ಮಿಂಚಿದರು.
ಟೀಮ್ ಇಂಡಿಯಾ ನೀಡಿದ 330 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಲು ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋವ್ರನ್ನು ಆರಂಭದಲ್ಲೇ ನಿಯಂತ್ರಿಸಲು ಈ ಬಾರಿ ಟೀಮ್ ಇಂಡಿಯಾ ಬೌಲರುಗಳು ಯಶಸ್ವಿಯಾದರು. ಅದರಲ್ಲೂ ಮೊದಲ ಓವರ್ನಲ್ಲೇ 3 ಬೌಂಡರಿ ಬಾರಿಸಿ ಜೇಸನ್ ರಾಯ್ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ ಈ ಓವರ್ನ ಕೊನೆಯ ಎಸೆತದಲ್ಲಿ ಜೇಸನ್ ರಾಯ್ (14)ರನ್ನ ಕ್ಲೀನ್ ಬೌಲ್ಡ್ ಮಾಡಿ ಭುವನೇಶ್ವರ್ ಕುಮಾರ್ ಮೊದಲ ಯಶಸ್ಸು ತಂದುಕೊಟ್ಟರು.
ಅಲ್ಲದೆ ತಂಡದ ಮೊತ್ತ 28 ಆಗಿದ್ದ ವೇಳೆ ಜಾನಿ ಬೈರ್ಸ್ಟೊವ್ (1) ಅವರನ್ನು ಎಲ್ಬಿ ಬಲೆಗೆ ಬೀಳಿಸಿ ಭುವಿ ಮತ್ತೊಂದು ವಿಕೆಟ್ ಉರುಳಿಸಿದರು. ಈ ಹಂತದಲ್ಲಿ ಜೊತೆಗೂಡಿದ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲಾನ್ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಟೀಮ್ ಇಂಡಿಯಾ ಬೌಲರುಗಳ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 10 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 60ರ ಗಡಿದಾಟಿಸಿದರು.
11ನೇ ಓವರ್ನಲ್ಲಿ ನಟರಾಜನ್ ಎಸೆದ ಫುಲ್ಟಾಸ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಮುಂದಾದ ಬೆನ್ ಸ್ಟೋಕ್ಸ್ (35) ಬೌಂಡರಿ ಲೈನ್ನಲ್ಲಿದ್ದ ಶಿಖರ್ ಧವನ್ಗೆ ಕ್ಯಾಚ್ ನೀಡಿದರು. ಇತ್ತ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಜೋಸ್ ಬಟ್ಲರ್ (15) ರನ್ನು ನೆಲೆಯೂರುವ ಮುನ್ನ ಎಲ್ಬಿಡಬ್ಲ್ಯೂ ಮಾಡಿ ಶಾರ್ದುಲ್ ಠಾಕೂರ್ ಪೆವಿಲಿಯನ್ಗೆ ಕಳುಹಿಸಿದರು.
ಇದಾಗ್ಯೂ ಇಂಗ್ಲೆಂಡ್ ತಂಡ 23 ಓವರ್ ಮುಗಿಯುವಷ್ಟರಲ್ಲಿ 150 ರನ್ ಗಡಿ ದಾಟಿತ್ತು. ಅಲ್ಲದೆ ಮಲಾನ್ ಜೊತೆಗೂಡಿ ಲಿಯಾಮ್ ಲಿವಿಂಗ್ ಸ್ಟೋನ್ ಉತ್ತಮ ಪಾಲುದಾರಿಕೆ ನಡೆಸಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಶಾರ್ದುಲ್ ಠಾಕೂರ್ ಲಿವಿಂಗ್ಸ್ಟೋನ್ (36) ವಿಕೆಟ್ ಪಡೆದು ಭಾರತಕ್ಕೆ 5ನೇ ಯಶಸ್ಸು ತಂದುಕೊಟ್ಟರು. ಆದರೆ ಮತ್ತೊಂದು ತುದಿಯಲ್ಲಿದ್ದ ಡೇವಿಡ್ ಮಲಾನ್ 50 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಇದೇ ವೇಳೆ ಠಾಕೂರ್ ಎಸೆತದಲ್ಲಿ ಸ್ಪೋಟಕ ಹೊಡೆತಕ್ಕೆ ಮುಂದಾದ ಮಲಾನ್ ರೋಹಿತ್ ಶರ್ಮಾಗೆ ಕ್ಯಾಚಿತ್ತರು. ಇದರೊಂದಿಗೆ 168 ರನ್ಗೆ ಇಂಗ್ಲೆಂಡ್ 6 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಈ ವೇಳೆ ಜೊತೆಯಾದ ಆಲ್ರೌಂಡರ್ಗಳಾದ ಮೊಯೀನ್ ಅಲಿ ಹಾಗೂ ಸ್ಯಾಮ್ ಕರ್ರನ್ ಎಚ್ಚರಿಕೆಯ ಆಟದೊಂದಿಗೆ ರನ್ ಪೇರಿಸುವತ್ತ ಗಮನ ಹರಿಸಿದರು. ಪರಿಣಾಮ 30 ಓವರ್ ವೇಳೆಗೆ ತಂಡದ ಮೊತ್ತ 200ರ ಗಡಿಗೆ ಬಂದು ನಿಂತಿತು. ಈ ವೇಳೆ ಬೌಲಿಂಗ್ನಲ್ಲಿ ಬದಲಾವಣೆ ಮಾಡಿದ ವಿರಾಟ್ ಕೊಹ್ಲಿ, ಮತ್ತೆ ಭುವನೇಶ್ವರ್ ಕುಮಾರ್ ಕೈಗೆ ಚೆಂಡಿತ್ತರು. ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸದ ಭುವಿ, 25 ಎಸೆತಗಳಲ್ಲಿ 29 ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಮೊಯೀನ್ ಅಲಿಯ ವಿಕೆಟ್ ಪಡೆದರು.
ಇನ್ನು 40ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ಪ್ರೇಕ್ಷಕರನ್ನು ದಂಗಾಗಿಸಿತ್ತು. ಶಾರ್ದುಲ್ ಠಾಕೂರ್ ಎಸೆತದಲ್ಲಿ ಆದಿಲ್ ರಶೀದ್ ಆಫ್ ಸೈಡ್ನತ್ತ ಬಾರಿಸಿದ್ದರು. ಅಲ್ಲೇ ಶಾರ್ಟ್ ಕವರ್ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಚಕ್ಕನೆ ಚಿಮ್ಮಿ ಚೆಂಡನ್ನು ಹಿಡಿದು ಇಂಗ್ಲೆಂಡ್ನ 8ನೇ ವಿಕೆಟ್ ಪತನಕ್ಕೆ ಕಾರಣರಾದರು. ಇದಾಗ್ಯೂ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ ಕರ್ರನ್ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಅಂತಿಮ 6 ಓವರ್ಗಳಲ್ಲಿ ಇಂಗ್ಲೆಂಡ್ಗೆ ಗೆಲ್ಲಲು 51 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ ಕರ್ರನ್ ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಅಂತಿಮ ಮೂರು ಓವರ್ಗಳಲ್ಲಿ ಕೇವಲ 23 ರನ್ಗಳ ಅವಶ್ಯಕತೆಯಿತ್ತು.
48ನೇ ಓವರ್ ಎಸೆದ ಭುವನೇಶ್ವರ್ ಕುಮಾರ್ ಕೇವಲ 4 ರನ್ ನೀಡಿದರು. ಪರಿಣಾಮ ಅಂತಿಮ 2 ಓವರ್ನಲ್ಲಿ 19 ರನ್ಗಳು ಬೇಕಿತ್ತು. ಹಾರ್ದಿಕ್ ಪಾಂಡ್ಯ ಎಸೆದ 49ನೇ ಓವರ್ನಲ್ಲಿ ಮಾರ್ಕ್ವುಡ್ ನೀಡಿದ ಕ್ಯಾಚ್ನ್ನು ಶಾರ್ದುಲ್ ಠಾಕೂರ್ ಕೈಚೆಲ್ಲಿದರು. ಇದರ ಬೆನ್ನಲ್ಲೇ ಸ್ಯಾಮ್ ಕರ್ರನ್ ನೀಡಿದ ಕ್ಯಾಚ್ ಹಿಡಿಯುವಲ್ಲಿ ನಟರಾಜನ್ ವಿಫಲರಾದರು. ಇದಾಗ್ಯೂ ಕೇವಲ 5 ರನ್ಗಳನ್ನು ನೀಡಿ ಪಾಂಡ್ಯ ಪಂದ್ಯವನ್ನು ಕೊನೆಯ ಓವರ್ನತ್ತ ಕೊಂಡೊಯ್ದರು.
ಕೊನೆಯ ಓವರ್ನಲ್ಲಿ 14 ರನ್ಗಳ ಅವಶ್ಯಕತೆಯಿತ್ತು. ನಟರಾಜ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ಸ್ಯಾಮ್ ಕರ್ರನ್ ಬಿರುಸಿನ ಹೊಡೆತ ಬಾರಿಸಿದರು. ಎರಡು ರನ್ ಕದಿಯುವ ತವಕದಲ್ಲಿದ್ದ ಸ್ಯಾಮ್ ಮೊದಲ ರನ್ ಪೂರೈಸಿದ ಬಳಿಕ ಎಡವಿದರು. ಇತ್ತ ಕೀಪರ್ ತುದಿಯಿಂದ ಎರಡನೇ ರನ್ಗೆ ಓಡಿದ ಮಾರ್ಕ್ವುಡ್ (14) ಮರಳಿ ಬರುವಷ್ಟರಲ್ಲಿ ಪಾಂಡ್ಯ ಎಸೆತ ನೇರ ಥ್ರೋಗೆ ವಿಕೆಟ್ ಕೀಪರ್ ರನೌಟ್ ಮಾಡಿದರು.
2ನೇ ಎಸೆತದಲ್ಲಿ ರೀಸ್ ಟಾಪ್ಲೆ 1 ರನ್ ತೆಗೆದರು. 3ನೇ ಹಾಗೂ 4ನೇ ಎಸೆತದಲ್ಲಿ ಸ್ಯಾಮ್ ಯಾವುದೇ ರನ್ ಓಡಲಿಲ್ಲ. ಕೊನೆಯ 2 ಬಾಲ್ನಲ್ಲಿ 12 ರನ್ಗಳ ಅವಶ್ಯಕತೆ. 5ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದರು. ಅಂತಿಮ ಎಸೆತದಲ್ಲಿ 8 ರನ್ಗಳ ಅವಶ್ಯಕತೆಯಿತ್ತು. ಆದರೆ ಭರ್ಜರಿ ಹೊಡೆತ ಬಾರಿಸುವಲ್ಲಿ ಸ್ಯಾಮ್ ಕರ್ರನ್ (95) ವಿಫಲರಾದರು. ಅಲ್ಲದೆ ನಿಗದಿತ 50 ಓವರ್ಗಳಲ್ಲಿ ಇಂಗ್ಲೆಂಡ್ ತಂಡವು 9 ವಿಕೆಟ್ ನಷ್ಟಕ್ಕೆ 322 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ರೋಚಕ ಜಯದೊಂದಿಗೆ ಸರಣಿ ವಶಪಡಿಸಿಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ