news18-kannada Updated:February 15, 2021, 6:19 PM IST
India vs England
ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭಾರತ 286 ರನ್ ಪೇರಿಸಿದ್ದು, ಈ ಮೂಲಕ ಇಂಗ್ಲೆಂಡ್ಗೆ 482 ರನ್ ಗುರಿ ನೀಡಿದೆ.
1 ವಿಕೆಟ್ ಗೆ 54 ರನ್ಗಳೊಂದಿಗೆ 3ನೇ ದಿನದಾಟವನ್ನು ಆರಂಭಿಸಿದ ಭಾರತ ಮೊದಲ ಓವರ್ನಲ್ಲೇ ಪೂಜಾರ (7) ಕಳೆದುಕೊಂಡಿತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ (26) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಕ್ಷಣಾತ್ಮಕ ಆಟದೊಂದಿಗೆ ತಂಡಕ್ಕೆ ಆಸರೆಯಾದರು. ಆದರೆ ಮತ್ತೊಂದೆಡೆ ರಿಷಭ್ ಪಂತ್ (8), ಅಜಿಂಕ್ಯ ರಹಾನೆ (10) ಹಾಗೂ ಅಕ್ಷರ್ ಪಟೇಲ್ (7) ಕೂಡ ಬೇಗನೆ ವಿಕೆಟ್ ಒಪ್ಪಿಸಿ ನಿರ್ಮಿಸಿದರು.
7ನೇ ವಿಕೆಟ್ಗೆ ಜೊತೆಗೂಡಿದ ಕೊಹ್ಲಿ ಹಾಗೂ ಅಶ್ವಿನ್ 96 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ವೇಳೆ ವಿರಾಟ್ ಕೊಹ್ಲಿ (62) ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಶ್ವಿನ್ ಶತಕ ಸಿಡಿಸಿ ಮಿಂಚಿದರು. ಕೊನೆವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದ ಅಶ್ವಿನ್ 148 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 106 ರನ್ಗಳನ್ನು ಬಾರಿಸಿದರು. ಪರಿಣಾಮ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 286 ರನ್ಗಳಿಸುವಂತಾಯಿತು. ಮೊದಲ ಇನಿಂಗ್ಸ್ನ 195 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಗೆಲ್ಲಲು 482 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಒಳಗಾಗಿದೆ. 3ನೇ ಸೆಷನ್ನ 9ನೇ ಓವರ್ನಲ್ಲಿ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲೆ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದ ಅಕ್ಷರ್ ಪಟೇಲ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಅಲ್ಲದೆ ತಂಡದ ಮೊತ್ತ 49 ರನ್ ಆಗಿದ್ದ ವೇಳೆ ರೋರಿ ಬರ್ನ್ಸ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ 2ನೇ ವಿಕೆಟ್ ಉರುಳಿಸಿದರು. ಇದರ ಬೆನ್ನಲ್ಲೇ ಅಕ್ಷರ್ ಪಟೇಲ್ ಜಾಕ್ ಲೀಚ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.
3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 53 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಇನ್ನು 2 ದಿನಗಳ ಆಟ ಉಳಿದಿದ್ದು ಇಂಗ್ಲೆಂಡ್ಗೆ ಗೆಲ್ಲಲು 429 ರನ್ಗಳ ಅವಶ್ಯಕತೆಯಿದೆ. ಹಾಗೆಯೇ ಟೀಮ್ ಇಂಡಿಯಾಗೆ 7 ವಿಕೆಟ್ಗಳ ಅವಶ್ಯಕಯಿದೆ.
Published by:
zahir
First published:
February 15, 2021, 6:19 PM IST