ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತ ನೀಡಿದ 329 ರನ್ಗಳನ್ನು ಬೆನ್ನತ್ತಿದ ಆಂಗ್ಲರು ಕೇವಲ 134 ರನ್ಗಳಿಗೆ ಸರ್ವಪತನ ಕಂಡಿತು. 195 ರನ್ ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು, ದಿನದಾಟದ ಮುಕ್ತಾಯಕ್ಕೆ 1 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಓವರ್ನಲ್ಲೇ ಇಶಾಂತ್ ಶರ್ಮಾ ಆಘಾತ ನೀಡಿದ್ದರು. ಆರಂಭಿಕ ಆಟಗಾರ ರೋಯ್ ಬರ್ನ್ಸ್ರನ್ನು ಎಲ್ಬಿ ಬಲೆಗೆ ಕೆಡವಿದ ಇಶಾಂತ್ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ದಾಳಿಗಿಳಿದ ಆರ್. ಅಶ್ವಿನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಆಂಗ್ಲರಿಗೆ ಶಾಕ್ ನೀಡಿದರು.
ಅಶ್ವಿನ್ 8ನೇ ಓವರ್ನಲ್ಲಿ ಸಿಬ್ಲಿ ವಿಕೆಟ್ ಪಡೆದರೆ, 10ನೇ ಓವರ್ನಲ್ಲಿ ಲಾರೆನ್ಸ್ರನ್ನು ಪೆವಿಲಿಯನ್ಗೆ ಕಳುಹಿಸಿದರು. ಇದೇ ವೇಳೆ ನಾಯಕ ಜೋ ರೂಟ್ರನ್ನು ಕೇವಲ 5 ರನ್ಗೆ ಔಟ್ ಮಾಡುವಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಅಕ್ಷರ್ ಪಟೇಲ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ವಿಕೆಟ್ ಉರುಳಿಸಿದ ಅಶ್ವಿನ್ ಭಾರತಕ್ಕೆ 5ನೇ ಯಶಸ್ಸು ತಂದುಕೊಟ್ಟರು.
ಈ ವೇಳೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಸಹ ಭಾರತದಲ್ಲಿ ಚೊಚ್ಚಲ ಟೆಸ್ಟ್ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು. ಕೇವಲ 87 ರನ್ಗಳಿಗೆ 6 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಈ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಫೋಕ್ಸ್ ಆಸರೆಯಾಗಿ ನಿಂತರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಫೋಕ್ಸ್ 107 ಎಸೆತಗಳಲ್ಲಿ ಅಜೇಯ 42 ರನ್ಗಳಿಸಿದರು.
ಆದರೆ ಮತ್ತೊಂದೆಡೆ ಟೀಮ್ ಇಂಡಿಯಾ ಬೌಲರುಗಳು ಬಾಲಂಗೋಚಿಗಳನ್ನು ಪೆವಿಲಿಯನ್ ಕಡೆ ಕಳುಹಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಇಂಗ್ಲೆಂಡ್ ಕೇವಲ 134 ರನ್ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ 43 ರನ್ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ರೆ, ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು.
195 ರನ್ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತವು ಶುಭ್ಮನ್ ಗಿಲ್ (14) ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಟೀಮ್ ಇಂಡಿಯಾ 54 ರನ್ಗಳಿಸುವುದರೊಂದಿಗೆ 249 ರನ್ಗಳ ಮುನ್ನಡೆಯೊಂದಿಗೆ 2ನೇ ದಿನದಾಟವನ್ನು ಅಂತ್ಯಗೊಳಿಸಿದೆ. ಸದ್ಯ ಕ್ರೀಸ್ನಲ್ಲಿ ರೋಹಿತ್ ಶರ್ಮಾ (25) ಹಾಗೂ ಚೇತೇಶ್ವರ ಪೂಜಾರ (7) ಇದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
2ನೇ ದಿನ ಬ್ಯಾಟಿಂಗ್ ಆರಂಭಿಸಿದ್ದ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೆ ಒಳಗಾಗಿತ್ತು. ಮೊದಲ ದಿನದಾಂತ್ಯಕ್ಕೆ ರೋಹಿತ್ ಶರ್ಮಾ (161) ಅವರ ಅಮೋಘ ಶತಕ ಮತ್ತು ಉಪನಾಯಕ ಅಜಿಂಕ್ಯ ರಹಾನೆ (67) ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. 2ನೇ ದಿನ ಈ ಮೊತ್ತಕ್ಕೆ ಕೇವಲ 29 ಸೇರ್ಪಡೆಯಾಗುವಷ್ಟರಲ್ಲಿ ಭಾರತ ಸರ್ವಪತನ ಕಂಡಿತು. ಇದಾಗ್ಯೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಿಷಭ್ ಪಂತ್ ಅಜೇಯ 58 ರನ್ ಬಾರಿಸಿ ಗಮನ ಸೆಳೆದರು.
ಮೊದಲ ಇನಿಂಗ್ಸ್ನ 2ನೇ ದಿನ ಇನಿಂಗ್ಸ್ ಆರಂಭಿಸಿದ ಪಂತ್ ಹಾಗೂ ಅಕ್ಷರ್ ಪಟೇಲ್ ದೊಡ್ಡ ಮೊತ್ತ ಪೇರಿಸುವ ಯೋಚನೆಯಲ್ಲಿದ್ದರು. ಆದರೆ ದಿನದಾಟದ ಆರಂಭದಲ್ಲಿ ಭಾರತೀಯ ಬಾಲಂಗೋಚಿಗಳನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಇಂಗ್ಲೆಂಡ್ ಬೌಲರುಗಳು ಯಶಸ್ವಿಯಾದರು. ಅಕ್ಷರ್ ಪಟೇಲ್ 5 ರನ್ಗಳಿಸಿದರೆ, ಇಶಾಂತ್ ಶರ್ಮಾ ಹಾಗೂ ಕುಲ್ದೀಪ್ ಯಾದವ್ ಶೂನ್ಯದೊಂದಿಗೆ ಮರಳಿದರು. ಇನ್ನು ಮೊಹಮ್ಮದ್ ಸಿರಾಜ್ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಪಂತ್ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ 3 ಸಿಕ್ಸರ್, 7 ಬೌಂಡರಿಗಳ ನೆರವಿನಿಂದ ಪಂತ್ 77 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿ ಮಿಂಚಿದರು. ಇಂಗ್ಲೆಂಡ್ ಪರ ಮೊಯೀನ್ ಅಲಿ 4 ವಿಕೆಟ್ ಪಡೆದರೆ, ಒಲಿ ಸ್ಟೋನ್ 3 ವಿಕೆಟ್ ಕಬಳಿಸಿದರು. ಇನ್ನು ಲೀಚ್ 2 ಮತ್ತು ರೂಟ್ ಒಂದು ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ