India vs England 2nd ODI: ಕೆಎಲ್ ರಾಹುಲ್ ಭರ್ಜರಿ ಶತಕ: ಇಂಗ್ಲೆಂಡ್​ಗೆ ಬೃಹತ್ ಮೊತ್ತದ ಸವಾಲು..!

ಈ ನಡುವೆ ವಿರಾಟ್ ಕೊಹ್ಲಿ ಮನಮೋಹಕ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು. ಇದರ ಬೆನ್ನಲ್ಲೇ ರಾಹುಲ್ ಕೂಡ ಹಾಫ್ ಸೆಂಚುರಿ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಕೊಹ್ಲಿ ಆದಿಲ್ ರಶೀದ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು.

KL Rahul

KL Rahul

 • Share this:
  ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ಗೆ 337 ರನ್​ಗಳ ಟಾರ್ಗೆಟ್ ನೀಡಿದೆ. ಕನ್ನಡಿಗ ಕೆಎಲ್ ರಾಹುಲ್ ಅವರ ಆಕರ್ಷಕ ಶತಕದಿಂದ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸುವಂತಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಹಂಗಾಮಿ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು.

  ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ತಂಡದ ಮೊತ್ತ 9 ರನ್​ ಆಗಿದ್ದ ವೇಳೆ ಶಿಖರ್ ಧವನ್ (4) ರೀಸ್ ಟಾಪ್ಲೆಗೆ ವಿಕೆಟ್ ಒಪ್ಪಿಸಿದರೆ, 25 ರನ್​ ಬಾರಿಸಿ ರೋಹಿತ್ ಶರ್ಮಾ ಸ್ಯಾಮ್ ಕರ್ರನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

  ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅದರಂತೆ ಎಚ್ಚರಿಕೆಯ ಆಟದೊಂದಿಗೆ ಮುನ್ನುಗ್ಗಿದ ಈ ಜೋಡಿ ರನ್​ ಗತಿಯನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಮೂರನೇ ವಿಕೆಟ್​ಗೆ 121 ರನ್​ಗಳ ಜೊತೆಯಾಟವಾಡಿದರು.

  ಈ ನಡುವೆ ವಿರಾಟ್ ಕೊಹ್ಲಿ ಮನಮೋಹಕ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು. ಇದರ ಬೆನ್ನಲ್ಲೇ ರಾಹುಲ್ ಕೂಡ ಹಾಫ್ ಸೆಂಚುರಿ ಪೂರೈಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಕೊಹ್ಲಿ ಆದಿಲ್ ರಶೀದ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಅಷ್ಟರಲ್ಲಾಗಲೇ ಕೊಹ್ಲಿ 79 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 66 ರನ್ ಬಾರಿಸಿ ತಂಡದ ಮೊತ್ತವನ್ನು 32 ಓವರ್​ನಲ್ಲಿ 158ಕ್ಕೆ ತಂದು ನಿಲ್ಲಿಸಿದರು.

  ನಾಯಕನ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಎಡಗೈ ದಾಂಡಿಗ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಂತ್ ಕೆಎಲ್ ರಾಹುಲ್​ಗೆ ಉತ್ತಮ ಸಾಥ್ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ರನ್​ಗಳಿಕೆಯ ವೇಗವನ್ನು ಹೆಚ್ಚಿಸಿದರು. ಮತ್ತೊಂದೆಡೆ ಅರ್ಧಶತಕದ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ಕೆಎಲ್ ರಾಹುಲ್, ಬಿರುಸಿನ ಆಟಕ್ಕೆ ಒತ್ತು ನೀಡಿದರು.

  ಅಲ್ಲದೆ 108 ಎಸೆತಗಳಲ್ಲಿ ಐದನೇ ಏಕದಿನ ಶತಕ ಪೂರೈಸಿ ಕೆಎಲ್ ರಾಹುಲ್ ಬ್ಯಾಟ್ ಮೇಲೆಕ್ಕೆತ್ತಿದರು. ಶತಕ ಸಿಡಿಸಿ ಬೆನ್ನಲ್ಲೇ ಬಿಗ್ ಹಿಟ್​ಗೆ ಮುಂದಾದ ಕೆಎಲ್​ಆರ್​ ಟಾಮ್ ಕರ್ರನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. 114 ಎಸೆತಗಳನ್ನು ಎದುರಿಸಿ ಕೆಎಲ್ ರಾಹುಲ್ 2 ಸಿಕ್ಸರ್, 7 ಬೌಂಡರಿಗಳೊಂದಿಗೆ 108 ರನ್​ ಬಾರಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.

  ಈ ಹಂತದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸ್ಯಾಮ್ ಕರ್ರನ್ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಖಾತೆ ತೆರೆದರು. ಅಲ್ಲದೆ ಪಂತ್ ಜೊತೆಗೂಡಿ 47ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಈ ವೇಳೆ 40 ಎಸೆತಗಳಲ್ಲಿ 7 ಸಿಡಿಲಬ್ಬರದ ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 77 ರನ್ ಬಾರಿಸಿದ ಪಂತ್ ಟಾಮ್ ಕರ್ರನ್​ಗೆ ವಿಕೆಟ್​ ಒಪ್ಪಿ ತಮ್ಮ ಬಿರುಸಿನ ಇನಿಂಗ್ಸ್​ನ್ನು ಅಂತ್ಯಗೊಳಿಸಿದರು.

  ಇದಾಗ್ಯೂ ಅಂತಿಮ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 35 ರನ್ ಸಿಡಿಸಿ ಕೊನೆಯ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್​ನಲ್ಲಿ ಕ್ರೀಸ್​ನಲ್ಲಿದ್ದ ಕೃನಾಲ್ ಪಾಂಡ್ಯ 12 ಬಾರಿಸುವ ಮೂಲಕ ತಂಡದ ಮೊತ್ತವನ್ನು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ  336 ಕ್ಕೆ ತಂದು ನಿಲ್ಲಿಸಿದರು. ಇಂಗ್ಲೆಂಡ್ ಪರ ರೀಸ್ ಟಾಪ್ಲೆ 8 ಓವರ್​ನಲ್ಲಿ 50 ರನ್​ಗೆ 2 ವಿಕೆಟ್​ ಪಡೆದು ಮಿಂಚಿದರು. ಹಾಗೆಯೇ ಟಾಮ್ ಕರ್ರನ್ 2 ವಿಕೆಟ್ ಕಬಳಿಸಲು ಯಶಸ್ವಿಯಾದರೂ, 10 ಓವರ್​ಗಳಲ್ಲಿ 83 ರನ್​ ನೀಡಿ ದುಬಾರಿ ಎನಿಸಿಕೊಂಡರು.
  Published by:zahir
  First published: