ನಾಳೆಯಿಂದ ಭಾರತ-ಇಂಗ್ಲೆಂಡ್ ಟೆಸ್ಟ್: ನೂತನ ದಾಖಲೆಯ ಹೊಸ್ತಿಲಲ್ಲಿ ಬರೋಬ್ಬರಿ 5 ಆಟಗಾರರು

ಹೌದು ನಾಯಕನಾಗಿ ವಿರಾಟ್ ಕೊಹ್ಲಿ ವಿಶ್ವದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಬ್ಯಾಟ್​ನಿಂದ ಇನ್ನೊಂದೇ ಒಂದು ಶತಕ ಸಿಡಿದರೆ, ನಾಯಕನಾಗಿ ಗರಿಷ್ಠ 42ನೇ ಶತಕ ಗಳಿಸಲಿದ್ದಾರೆ.

India vs England

India vs England

 • Share this:
  ಬೆಂಗಳೂರು (ಫೆ. 04): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ನಾಳೆ ಫೆಬ್ರವರಿ 5 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವೆ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರಲು ಉಭಯ ತಂಡಗಳಿಗೆ ಈ ಟೆಸ್ಟ್​ ಸರಣಿ ಮುಖ್ಯವಾಗಿದೆ. ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಮೇಲೆ ಎಲ್ಲರ ಕಣ್ಣಿದೆ. ಇದರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಇಂಗ್ಲೆಂಡ್ ನಾಯಕ ಜೋ ರೂಟ್ ಸೇರಿದಂತೆ ಉಭಯ ತಂಡದ ಕೆಲ ಆಟಗಾರರು ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.

  ವಿಶ್ವದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ:

  ಹೌದು ನಾಯಕನಾಗಿ ವಿರಾಟ್ ಕೊಹ್ಲಿ ವಿಶ್ವದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಬ್ಯಾಟ್​ನಿಂದ ಇನ್ನೊಂದೇ ಒಂದು ಶತಕ ಸಿಡಿದರೆ, ನಾಯಕನಾಗಿ ಗರಿಷ್ಠ 42ನೇ ಶತಕ ಗಳಿಸಲಿದ್ದಾರೆ. ಇದು ವಿಶ್ವದಾಖಲೆಯಾಗಲಿದೆ. ಪ್ರಸ್ತುತ 41 ಶತಕ ಬಾರಿಸಿರುವ ಕೊಹ್ಲಿ, ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಜೊತೆಗೆ ಸಮಬಲ ಸಾಧಿಸಿದ್ದಾರೆ. ನಾಯಕನಾಗಿ ಒಟ್ಟು 33 ಶತಕ ಬಾರಿಸಿರುವ ದ. ಆಫ್ರಿಕಾದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ 2ನೇ ಸ್ಥಾನದಲ್ಲಿದ್ದಾರೆ.

  Chris Gayle: ಕೇವಲ 22 ಬಾಲ್​ಗಳಲ್ಲಿ ಅಜೇಯ 84 ರನ್: ಅಬ್ಬರಿಸಿ ಬೊಬ್ಬಿರಿದ ಕ್ರಿಸ್ ಗೇಲ್ ವಿಡಿಯೋ ಇಲ್ಲಿದೆ

  ಇದರ ಜೊತೆಗೆ ಕೊಹ್ಲಿ ಇನ್ನೊಂದು ಗೆಲುವು ಕಂಡರೆ, ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದಿರುವ ಎಂಎಸ್ ಧೋನಿ ದಾಖಲೆ ಸರಿಗಟ್ಟಲಿದ್ದಾರೆ. ಧೋನಿ ಭಾರತದಲ್ಲಿ 21 ಟೆಸ್ಟ್ ಗೆದ್ದಿದ್ದರೆ, ಕೊಹ್ಲಿ 20 ಗೆಲುವು ಕಂಡಿದ್ದಾರೆ. ಇನ್ನೂ ಕೊಹ್ಲಿ 73 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾರನ್ನು ಹಿಂದಿಕ್ಕಲಿದ್ದಾರೆ. ಲಾರಾ 22,358 ರನ್ ಗಳಿಸಿದ್ದರೆ, ಕೊಹ್ಲಿ 22,286 ರನ್ ಗಳಿಸಿದ್ದಾರೆ.

  ಆರ್. ಅಶ್ವಿನ್: ರವಿಚಂದ್ರನ್ ಅಶ್ವಿನ್ ಒಟ್ಟು 74 ಟೆಸ್ಟ್‌ಗಳಿಂದ 377 ವಿಕೆಟ್ ಕಬಳಿಸಿದ್ದು, ಇನ್ನು 23 ವಿಕೆಟ್ ಕಬಳಿಸಿದರೆ 400 ವಿಕೆಟ್ ಕಬಳಿಸಿದ ವಿಶ್ವದ 16ನೇ ಮತ್ತು ಭಾರತದ 4ನೇ ಬೌಲರ್ ಎನಿಸಲಿದ್ದಾರೆ. ಜೊತೆಗೆ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಇದುವರೆಗೆ 42 ವಿಕೆಟ್ ಕಬಳಿಸಿದ್ದು, 50 ವಿಕೆಟ್ ಪೂರೈಸಿದ 4ನೇ ಭಾರತೀಯ ಎನಿಸುವ ಸನಿಹದಲ್ಲಿದ್ದಾರೆ.

  ಇಶಾಂತ್ ಶರ್ಮಾ: ಟೀಂ ಇಂಡಿಯಾ ಪ್ರಮುಖ ವೇಗಿ ಇಶಾಂತ್ ಶರ್ಮ ಸರಣಿಯಲ್ಲಿ 3 ಪಂದ್ಯ ಆಡಿದರೆ ಭಾರತ ಪರ 100 ಟೆಸ್ಟ್ ಆಡಿದ 11ನೇ ಆಟಗಾರ ಮತ್ತು 2ನೇ ವೇಗದ ಬೌಲರ್ ಎನಿಸಲಿದ್ದಾರೆ. ಕಪಿಲ್ ದೇವ್ (131) ಈ ಸಾಧನೆ ಮಾಡಿರುವ ಮೊದಲ ವೇಗಿ ಆಗಿದ್ದಾರೆ.

  ಜೋ ರೂಟ್‌: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ಗೆ ಇದು 100ನೇ ಟೆಸ್ಟ್ ಪಂದ್ಯ. ಫೆಬ್ರವರಿ 5 ರಂದು ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿದಾಗ 100 ಟೆಸ್ಟ್ ಆಡಿದ 15ನೇ ಆಂಗ್ಲ ಕ್ರಿಕೆಟಿಗ ಎನಿಸಲಿದ್ದಾರೆ ಜೋ ರೂಟ್. 99 ಟೆಸ್ಟ್‌ಗಳಲ್ಲಿ 8249 ರನ್ ಗಳಿಸಿರುವ ಅವರು, ಇಂಗ್ಲೆಂಡ್ ಪರ 10ನೇ ಗರಿಷ್ಠ ರನ್‌ಸ್ಕೋರರ್ ಎನಿಸಿದ್ದಾರೆ.

  Video: ಚೆಂಡು ಬೌಂಡರಿ ಲೈನ್ ಕಡೆ ಹೋಗುತ್ತಿದ್ದರೆ, ಫೀಲ್ಡರ್ ಜೆರ್ಸಿ ಬದಲಿಸುತ್ತಿದ್ದ..!

  ಜೇಮ್ಸ್ ಆ್ಯಂಡರ್ಸನ್: ದಾಖಲೆಗಳ ಸರದಾರ ಜೇಮ್ಸ್ ಆ್ಯಂಡರ್ಸನ್ 157 ಟೆಸ್ಟ್‌ಗಳಲ್ಲಿ 606 ವಿಕೆಟ್ ಕಬಳಿಸಿದ್ದಾರೆ. ಈ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇವರು 13 ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ ಭಾರತದ ಅನಿಲ್ ಕುಂಬ್ಳೆ (619) ಅವರನ್ನು ಸರಿಗಟ್ಟಲಿದ್ದಾರೆ. ಭಾರತ ವಿರುದ್ಧ ಗರಿಷ್ಠ (110) ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆ ಈಗಾಗಲೆ ಆಂಡರ್‌ಸನ್ ಹೆಸರಿನಲ್ಲಿದೆ.

  ಒಟ್ಟಾರೆ ಹಲವು ವಿಶೇಷತೆಗಳಿಗೆ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್​ ಸರಣಿ ಕಾರಣವಾಗಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾಬಾದ್​ನ ಸರ್ದಾರ್​ ಪಟೇಲ್​ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ ಡೇ-ನೈಟ್‌ ಪಂದ್ಯವಾಗಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಾಗುವ ಸಾಧ್ಯತೆ ಕೂಡ ಇದೆ.
  Published by:Vinay Bhat
  First published: