HOME » NEWS » Sports » CRICKET INDIA VS ENGLAND 1ST TEST ENGLAND 263 3 AT STUMPS ON DAY 1 ZP

Ind vs Eng 1st Test, Day 1: ಜೋ ರೂಟ್ ಭರ್ಜರಿ ಶತಕ: ಮೊದಲ ದಿನ ಇಂಗ್ಲೆಂಡ್ ಮೇಲುಗೈ

ಡೇನಿಯಲ್ ಲಾರೆನ್ಸ್ ಅವರನ್ನು ಶೂನ್ಯಕ್ಕೆ ಎಲ್​ಬಿಡಬ್ಲ್ಯೂಗೆ ಕೆಡವಿದ ಜಸ್​ಪ್ರೀತ್ ಬುಮ್ರಾ ಭಾರತಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಈ ವೇಳೆ ಕ್ರೀಸ್​ಗಿಳಿದ ನಾಯಕ ಜೋ ರೂಟ್ ತಮ್ಮ ಹಿಂದಿನ ಫಾರ್ಮ್​ನ್ನು ಚೆನ್ನೈನಲ್ಲೂ ಮುಂದುವರೆಸಿದರು.

news18-kannada
Updated:February 5, 2021, 5:38 PM IST
Ind vs Eng 1st Test, Day 1: ಜೋ ರೂಟ್ ಭರ್ಜರಿ ಶತಕ: ಮೊದಲ ದಿನ ಇಂಗ್ಲೆಂಡ್ ಮೇಲುಗೈ
ಕೊಹ್ಲಿ-ರೂಟ್
  • Share this:
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಮೊದಲ ದಿನದಾಟದಲ್ಲಿ ಆಂಗ್ಲರ ಪಡೆ ಮೇಲುಗೈ ಸಾಧಿಸಿದೆ. ನಾಯಕ ಜೋ ರೂಟ್ ಅವರ ಅಜೇಯ ಶತಕ ಹಾಗೂ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಮೊದಲ ದಿನ 3 ವಿಕೆಟ್ ನಷ್ಟಕ್ಕೆ 263 ರನ್ ಪೇರಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಕಣಕ್ಕಿಳಿದ ರೊರಿ ಬರ್ನ್ಸ್ ಹಾಗೂ ಸಿಬ್ಲಿ ಉತ್ತಮ ಆರಂಭ ಒದಗಿಸಿದರು. ಟೀಮ್ ಇಂಡಿಯಾ ಬೌಲರುಗಳ ವಿರುದ್ಧ ಆರಂಭದಿಂದಲೇ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್​ಗೆ 63 ರನ್ ಕಲೆಹಾಕಿತು. ಈ ವೇಳೆ ದಾಳಿಗಿಳಿದ ಅಶ್ವಿನ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಬರ್ನ್ಸ್​ (33) ವಿಕೆಟ್ ಕೀಪರ್ ರಿಷಭ್ ಪಂತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದರ ಬೆನ್ನಲ್ಲೇ ಡೇನಿಯಲ್ ಲಾರೆನ್ಸ್ ಅವರನ್ನು ಶೂನ್ಯಕ್ಕೆ ಎಲ್​ಬಿಡಬ್ಲ್ಯೂಗೆ ಕೆಡವಿದ ಜಸ್​ಪ್ರೀತ್ ಬುಮ್ರಾ ಭಾರತಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಈ ವೇಳೆ ಕ್ರೀಸ್​ಗಿಳಿದ ನಾಯಕ ಜೋ ರೂಟ್ ತಮ್ಮ ಹಿಂದಿನ ಫಾರ್ಮ್​ನ್ನು ಚೆನ್ನೈನಲ್ಲೂ ಮುಂದುವರೆಸಿದರು. ಪರಿಣಾಮ ಮೂರನೇ ವಿಕೆಟ್​ಗಾಗಿ ಭಾರತೀಯ ಬೌಲರುಗಳು ಪರದಾಡುವಂತಾಯಿತು.

78ನೇ ಓವರ್​ನಲ್ಲಿ 1 ರನ್ ಕಲೆಹಾಕುವ ಮೂಲಕ 164 ಎಸೆತಗಳಲ್ಲಿ ಜೋ ರೂಟ್ ಶತಕ ಪೂರೈಸಿದರು. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. ಒಂದು ಹಂತದಲ್ಲಿ 2 ವಿಕೆಟ್ ನಷ್ಟದೊಂದಿಗೆ ದಿನಾದಾಟ ಮುಕ್ತಾಯಗೊಳಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಅಂತಿಮ ಓವರ್​ನಲ್ಲಿ ಜಸ್​ಪ್ರೀತ್ ಬುಮ್ರಾ ಆಘಾತ ನೀಡುವಲ್ಲಿ ಯಶಸ್ವಿಯಾದರು.

286 ಎಸೆತಗಳಲ್ಲಿ 87 ರನ್ ಗಳಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿಯನ್ನು ಎಲ್​ಬಿ ಬಲೆಗೆ ಕೆಡವಿದ ಬುಮ್ರಾ 90ನೇ ಓವರ್​ನಲ್ಲಿ ಭಾರತಕ್ಕೆ 3ನೇ ಯಶಸ್ಸು ತಂದುಕೊಟ್ಟರು. ಇದರೊಂದಿಗೆ ಮೊದಲ ದಿನದಾಟ ಕೂಡ ಅಂತ್ಯವಾಯಿತು. ಅತ್ತ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರೂಟ್ 197 ಎಸೆತಗಳಲ್ಲಿ ಅಜೇಯ 128 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ಆರ್​. ಅಶ್ವಿನ್ 1 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
Published by: zahir
First published: February 5, 2021, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories