ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಇಂದಿನಿಂದ ಆರಂಭಗೊಳ್ಳಲಿದ್ದು, ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಕೆಲ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಬ್ಬರೇ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಶಿಖರ್ ಧವನ್ ಅವರನ್ನು ಬ್ಯಾಕಪ್ ಒಪನರ್ ಆಗಿ ಬಳಸಿಕೊಳ್ಳುವುದಾಗಿ ಕೊಹ್ಲಿ ತಿಳಿಸಿದರು.
ಇದರೊಂದಿಗೆ ಇಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಆದರೆ ಎಡಗೈ ವೇಗಿ ಟಿ ನಟರಾಜನ್ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ. ಏಕೆಂದರೆ ಕಳೆದ ಕೆಲ ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿರುವ ನಟರಾಜನ್ ಮೊದಲ ಪಂದ್ಯದಿಂದ ಹೊರುಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಅವರ ಸ್ಥಾನದಲ್ಲಿ ದೀಪಕ್ ಚಹರ್ ಅಥವಾ ನವದೀಪ್ ಸೈನಿ ಅವಕಾಶ ಪಡೆಯಬಹುದು.
ಇನ್ನು ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಟಿ20 ತಂಡದಲ್ಲೂ ಸ್ಥಾನ ಪಡೆಯಲಿದ್ದು, 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುವ ಸಾಧ್ಯತೆಯಿದೆ. ಹಾಗೆಯೇ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿರುವ ಅಕ್ಷರ್ ಪಟೇಲ್ ಸಹ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಏಕೆಂದರೆ ಕೊನೆಯ ಎರಡು ಟೆಸ್ಟ್ ಪಂದ್ಯಗಳು ನಡೆದ ನರೇಂದ್ರ ಮೋದಿ ಮೈದಾನದಲ್ಲೇ ಟಿ20 ಪಂದ್ಯಗಳು ನಡೆಯುತ್ತಿದ್ದು, ಹೀಗಾಗಿ ಚುಟುಕು ಕದನದಲ್ಲೂ ಅಕ್ಷರ್ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಇಲ್ಲಿ ರೋಹಿತ್-ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬರುವ ಸಾಧ್ಯತೆಯಿದೆ. ಇನ್ನು ಎಡಗೈ ಕಾಂಬಿನೇಷನ್ಗಾಗಿ ರಿಷಭ್ ಪಂತ್ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ದೀಪಕ್ ಚಹರ್ 2ನೇ ವೇಗಿಯಾಗಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ನರೇಂದ್ರ ಮೋದಿ ಸ್ಟೇಡಿಯಂ ಸ್ಪಿನ್ನರ್ಗಳಿಗೆ ಸಹಕಾರಿಯಾಗಿರುವುದರಿಂದ ಚಹಲ್, ಸುಂದರ್ ಹಾಗೂ ಅಕ್ಷರ್ರನ್ನು ಕಣಕ್ಕಿಳಿಸಬಹುದು.
ಭಾರತ ಸಂಭವನೀಯ ಇಲೆವೆನ್ ಹೀಗಿದೆ: ಭಾರತದ ಸಂಭವನೀಯ ಹನ್ನೊಂದು: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯಜ್ವೇಂದ್ರ ಚಹಲ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್.
ಇಂಗ್ಲೆಂಡ್ ಸಂಭವನೀಯ ಇಲೆವೆನ್: ಜಾನಿ ಬೈರ್ಸ್ಟೋವ್, ಜೇಸನ್ ರಾಯ್, ಡೇವಿಡ್ ಮಲನ್, ಇಯಾನ್ ಮೋರ್ಗನ್ (ನಾಯಕ), ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆದಿಲ್ ರಶೀದ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ