India vs England 1st ODI: ಭರ್ಜರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್ ವಿರುದ್ದ ಭಾರತ ಜಯಭೇರಿ

Team India

Team India

ಈ ಹಂತದಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಜೇಸನ್ ರಾಯ್ (46) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ (1) ವಿಕೆಟ್ ಪಡೆಯುವ ಮೂಲಕ ಪ್ರಸಿಧ್ಧ್ ಕೃಷ್ಣ ಮತ್ತೊಂದು ಯಶಸ್ಸು ತಂದುಕೊಟ್ಟರು.

  • Share this:

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 66 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ನೀಡಿದ 318 ರನ್​ಗಳ ಟಾರ್ಗೆಟ್​ನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 251 ರನ್​ಗೆ ಸರ್ವಪತನ ಕಂಡಿತು. ಈ ಜಯದೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.


    ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ 64 ರನ್​ಗಳ ಕಲೆಹಾಕಿದ ಈ ಜೋಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಹಂತದಲ್ಲಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ರೋಹಿತ್ ಶರ್ಮಾ( 28) ವಿಕೆಟ್ ಕೀಪರ್ ಜೋಸ್ ಬಟ್ಲರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧವನ್​ಗೆ ಉತ್ತಮ ಸಾಥ್ ನೀಡಿದರು.


    ಅಲ್ಲದೆ 3ನೇ ವಿಕೆಟ್​ಗೆಬ 105 ರನ್​ಗಳ ಜೊತೆಯಾಟವಾಡಿದರು. ಈ ನಡುವೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕಗಳನ್ನು ಪೂರೈಸಿದರು. ಹಾಫ್ ಸೆಂಚುರಿ ಪೂರೈಸಿದ ಬೆನ್ನಲ್ಲೇ 60 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 56 ರನ್​ ಬಾರಿಸಿದ್ದ ಕೊಹ್ಲಿ ಮಾರ್ಕ್​ವುಡ್​ ಎಸೆದಲ್ಲಿ ಕ್ಯಾಚ್ ನೀಡಿ ಹೊರನಡೆದರು. ನಾಯಕನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (6) ಕೂಡ ಮಾರ್ಕ್​ವುಡ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು.


    ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಉತ್ತಮ ಆಟ ಪ್ರದರ್ಶಿಸಿದರು. ಅಲ್ಲದೆ ಶಿಖರ್ ಧವನ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸುವ ಜವಾಬ್ದಾರಿ ಹೊತ್ತುಕೊಂಡರು. ಈ ಹಂತದಲ್ಲಿ ಶತಕದತ್ತ ಮುಖ ಮಾಡಿದ್ದ ಶಿಖರ್ ಧವನ್ 100ರ ಅಂಚಿನಲ್ಲಿ ಎಡವಿದರು. ಬೆನ್ ಸ್ಟೋಕ್ಸ್ ಎಸೆತದಲ್ಲಿ ಪುಲ್ ಮಾಡಲೋಗಿ ಇಯಾನ್ ಮೋರ್ಗನ್​ಗೆ ಕ್ಯಾಚ್ ನೀಡಿ ಶಿಖರ್ ಧವನ್ ಶತಕ ತಪ್ಪಿಸಿಕೊಂಡರು. 106 ಎಸೆತಗಳನ್ನು ಎದುರಿಸಿದ್ದ ಧವನ್ 2 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 98ಕ್ಕೆ ತಮ್ಮ ಇನಿಂಗ್ಸ್​ ಅಂತ್ಯಗೊಳಿಸಿ ನಿರಾಸೆ ಮೂಡಿಸಿದರು.


    ಇದರ ಬಳಿಕ ಕ್ರೀಸ್​ಗೆ ಬಂದ ಬಿಗ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 1 ರನ್​ಗಳಿಸಿ ಬೆನ್ ಸ್ಟೋಕ್ಸ್​ಗೆ ವಿಕೆಟ್ ಒಪ್ಪಿಸಿದರು. ಆದರೆ 7ನೇ ವಿಕೆಟ್​ಗೆ ಜೊತೆಯಾದ ರಾಹುಲ್-ಕೃನಾಲ್ ಪಾಂಡ್ಯ ಜೋಡಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಕೇವಲ 31 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದರು.


    ಅದರಲ್ಲೂ ಚೊಚ್ಚಲ ಪಂದ್ಯವಾಡುತ್ತಿರುವ ಕೃನಾಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಮೊದಲ ಏಕದಿನ ಪಂದ್ಯದಲ್ಲೇ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಹಾಗೆಯೇ ಸತತ ವೈಫಲ್ಯದಿಂದ ಬಳಲುತ್ತಿದ್ದ ಕೆಎಲ್ ರಾಹುಲ್ 39 ಎಸೆತಗಳಲ್ಲಿ ತಮ್ಮ ಹಾಫ್ ಸೆಂಚುರಿ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಅಲ್ಲದೆ ಈ ಜೋಡಿ ಕೇವಲ 56 ಎಸೆತಗಳಲ್ಲಿ 7ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು.


    ಅಂತಿಮ ಓವರ್​ವರೆಗೂ ಅಜೇಯರಾಗಿ ಉಳಿದ ಕೆಎಲ್ ರಾಹುಲ್ 43 ಎಸೆತಗಳಲ್ಲಿ 4 ಸಿಕ್ಸ್ 4 ಫೋರ್​ಗಳೊಂದಿಗೆ 62 ರನ್​ ಬಾರಿಸಿದರೆ, ಕೃನಾಲ್ ಪಾಂಡ್ಯ 32 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್​ನೊಂದಿಗೆ 58 ರನ್​ ಸಿಡಿಸಿದರು. ಪರಿಣಾಮ ಟೀಮ್ ಇಂಡಿಯಾ ಮೊತ್ತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ಕ್ಕೆ ಬಂದು ನಿಂತಿತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 3 ವಿಕೆಟ್ ಪಡೆದರೆ, ಮಾರ್ಕ್​ವುಡ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು.


    ಭಾರತ ನೀಡಿದ 318 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತಿದ ಇಂಗ್ಲೆಂಡ್​ಗೆ ಜೇಸನ್ ರಾಯ್ ಹಾಗೂ ಜಾನಿ ಬೈರ್​ಸ್ಟೋ ಬಿರುಸಿನ ಆರಂಭ ಒದಗಿಸಿದ್ದರು. ಟೀಮ್ ಇಂಡಿಯಾ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು. ಅಲ್ಲದೆ 15ನೇ ಓವರ್ ವೇಳೆಗೆ ತಂಡದ ಮೊತ್ತವನ್ನು 135ಕ್ಕೆ ತಂದು ನಿಲ್ಲಿಸಿದರು.


    ಈ ಹಂತದಲ್ಲಿ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಜೇಸನ್ ರಾಯ್ (46) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ (1) ವಿಕೆಟ್ ಪಡೆಯುವ ಮೂಲಕ ಪ್ರಸಿಧ್ಧ್ ಕೃಷ್ಣ ಮತ್ತೊಂದು ಯಶಸ್ಸು ತಂದುಕೊಟ್ಟರು. ಆದರೆ ಮತ್ತೊಂದೆಡೆ ಜಾನಿ ಬೈರ್ ಸ್ಟೋ ಅಬ್ಬರ ಮುಂದುವರೆದಿತ್ತು.


    23 ಓವರ್​ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಜಾಜಿ ಬೈರ್​ಸ್ಟೋ ಶಾರ್ದುಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಬೈರ್​ಸ್ಟೋ 66 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 94 ರನ್​ ಸಿಡಿಸಿದ್ದರು. ಈ ವಿಕೆಟ್ ಸಿಗುತ್ತಿದ್ದಂತೆ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಬೌಲರುಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದರು. ಅದರಂತೆ ಇಯಾನ್ ಮೋರ್ಗನ್ (22) ಹಾಗೂ ಜೋಸ್ ಬಟ್ಲರ್ (2) ಶಾರ್ದುಲ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸ್ಯಾಮ್ ಬಿಲ್ಲಿಂಗ್ಸ್ (18) ಅವರನ್ನು ಪ್ರಸಿದ್ಧ್​ ಕೃಷ್ಣ ಪೆವಿಲಿಯನ್​ಗೆ ಕಳುಹಿಸಿದರು.


    ಇದಾಗ್ಯೂ ಮೊಯೀನ್ ಅಲಿ ಹಾಗೂ ಸ್ಯಾಮ್ ಕರ್ರನ್ ಒಂದಷ್ಟು ಹೊತ್ತು ಟೀಮ್ ಇಂಡಿಯಾ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ಆದರೆ ಭುವನೇಶ್ವರ್ ಕುಮಾರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಮೊಯೀನ್ ಅಲಿ (30) ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದರ ಬೆನ್ನಲ್ಲೇ ಸ್ಯಾಮ್ ಕರ್ರನ್ (12) ರೂಪದಲ್ಲಿ ಕೃನಾಲ್ ಪಾಂಡ್ಯ ಚೊಚ್ಚಲ ಏಕದಿನ ವಿಕೆಟ್ ತಮ್ಮದಾಗಿಸಿಕೊಂಡರು.


    ಇನ್ನು ಆದಿಲ್ ರಶೀದ್​ ಬಂದ ವೇಗದಲ್ಲೇ ಶೂನ್ಯದೊಂದಿಗೆ ಮರಳಿದರೆ, ಟಾಮ್ ಕರ್ರನ್ 11 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 42.1 ಓವರ್​ನಲ್ಲಿ 251 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ 66 ರನ್​ಗಳ ಭರ್ಜರಿ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯದಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ 54 ರನ್​ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಶಾರ್ದುಲ್ ಠಾಕುರ್ 3 ಹಾಗೂ ಭುವನೇಶ್ವರ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

    Published by:zahir
    First published: