India vs Eng; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಟೆಸ್ಟ್​ ಚಾಂಪಿಯನ್​ಶಿಪ್​ಗೆ ತೇರ್ಗಡೆಯಾದ ಟೀಂ ಇಂಡಿಯಾ

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಚಾಂಪಿಯನ್​ ಶಿಪ್ ಸರಣಿಯಲ್ಲಿ ಭಾರತ ಆಡುವುದು ಖಚಿತವಾದಂತಾಗಿದೆ.

ಭಾರತದ ಆಟಗಾರರು.

ಭಾರತದ ಆಟಗಾರರು.

  • Share this:
    ಅಹಮದಾಬಾದ್​ (ಮಾ. 06): ಇಂಗ್ಲೆಂಡ್ ವಿರುದ್ಧ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್​ ಮತ್ತು 25 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಚಾಂಪಿಯನ್​ ಶಿಪ್ ಸರಣಿಯಲ್ಲಿ ಭಾರತ ಆಡುವುದು ಖಚಿತವಾದಂತಾಗಿದೆ. ಗೆಲ್ಲಲೇಬೇಕಾದ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲೂ ಆಂಗ್ಲರ ತಂಡದ ಬ್ಯಾಟ್ಸ್​ಮನ್​ಗಳು ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಪರಿಣಾಮ ಜೋ ರೂಟ್​ ಪಡೆ ಟೀಂ ಇಂಡಿಯಾ ಎದುರಿನ ನಾಲ್ಕು ಟೆಸ್ಟ್​ಗಳ ಸರಣಿಯಲ್ಲಿ ಸತತ ಮೂರು ಟೆಸ್ಟ್​ ಪಂದ್ಯಗಳಲ್ಲಿ ಸೋಲನುಭವಿಸಿದೆ. ಅದರಲ್ಲೂ ಎರಡು ಟೆಸ್ಟ್​ಗಳಲ್ಲಿ ಇನ್ನಿಂಗ್ಸ್​ ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

    ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ರಿಷಭ್​ ಪಂತ್​ ಅವರ ಶತಕ, ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್ ಅವರ ಅಮೋಘ 96 ರನ್​ ಮತ್ತು ಅಕ್ಷರ್​ ಪಟೇಲ್ ಅವರ 43 ರನ್​ಗಳ ಅಮೋಘ ಕೊಡುಗೆಯಿಂದಾಗಿ ಭಾರತ ತಂಡ ಇಂಗ್ಲೆಂಡ್​ನ 205 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ, 365 ರನ್ ಗಳಿಸುವಲ್ಲಿ ಸಫಲವಾಗಿತ್ತು. ಅಲ್ಲದೆ, ಮೊದಲ ಇನ್ನಿಂಗ್ಸ್​ 160 ರನ್​ಗಳ ಭಾರೀ ಮುನ್ನಡೆ ಸಾಧಿಸಲು ಕಾರಣವಾಯಿತು.

    ನಿನ್ನೆ ಭಾರತದ ಇನ್ನಿಂಗ್ಸಲ್ಲಿ ರಿಷಭ್ ಪಂತ್ ಅವರ ಭರ್ಜರಿ ಶತಕ ಹೈಲೈಟ್ ಆಗಿತ್ತು. ಇವತ್ತು ಮೂರನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಅವರ ಆಟ ಎಲ್ಲರನ್ನೂ ಸೆಳೆಯಿತು. ಶತಕದತ್ತ ದಾಪುಗಾಲಿಕ್ಕುತ್ತಿದ್ದ ಅವರಿಗೆ ಬೇರೆಯವರಿಂದ ಸಹಯೋಗ ಸಿಗದೆ ಕೇವಲ ನಾಲ್ಕು ರನ್ನಿಂಗ್ ಶತಕವಂಚಿತರಾದರು. ನಿನ್ನೆ ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತದ ಇನ್ನಿಂಗ್ಸ್​ಗೆ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಪುಷ್ಟಿ ನೀಡುವುದನ್ನು ಮುಂದುವರಿಸಿದರು.

    ಇವರಿಬ್ಬರೂ ಎಂಟನೇ ವಿಕೆಟ್​ಗೆ 106 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಭಾರತಕ್ಕೆ ಒಳ್ಳೆಯ ಮುನ್ನಡೆ ತಂದುಕೊಟ್ಟರು. ಅಕ್ಷರ್ ಪಟೇಲ್ ಔಟಾಗುತ್ತಿದ್ದಂತೆಯೇ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಶೂನ್ಯ ಸಂಪಾದನೆ ಮಾಡಿ ಪೆವಿಲಿನ್​ಗೆ ಮರಳಿದರು. ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.

    ಆದರೆ, ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಂಗ್ಲರು ಮತ್ತೆ ಕಳಪೆ ಬ್ಯಾಟಿಂಗ್ ಮುಂದುವರೆಸಿದರು. ಆರಂಭಿಕ ಬ್ಯಾಟ್ಸ್​ಮನ್​ಗಳ ಭಾರತೀಯ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ತಲೆಗೆರೆಗಳಂತೆ ಉದುರಿದರು. ತಂಡದ ಮೊತ್ತು 30 ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್​ಗಳು ಉರುಳಿದ್ದವು. ಇದರೊಂದಿಗೆ ಭಾರತದ ಗೆಲುವು ಖಚಿತವಾಗಿತ್ತು.

    ಇದನ್ನೂ ಓದಿ: India vs Eng – ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 160 ರನ್ ಮುನ್ನಡೆ; ಶತಕವಂಚಿತ ವಾಷಿಂಗ್ಟನ್

    ಕೊನೆಗೆ ಇಂಗ್ಲೆಂಡ್​ ಪಡೆ ಕೇವಲ 135 ರನ್​ ಗಳಿಗೆ ತನ್ನೆಲ್ಲಾ ವಿಕೆಟ್​ ಒಪ್ಪಿಸಿ ಭಾರತದ ಬೌಲರ್​ಗಳಿಗೆ ಶರಣಾಯಿತು. ನಾಯಯ ಜೋ ರೂಟ್​ (30) ಹಾಗೂ ಡಾನ್​ ಲಾರೆನ್ಸ್​ (50) ಅಲ್ಪ ಹೋರಾಟ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಭಾರತ ಪರ ಎರಡನೇ ಇನ್ನಿಂಗ್ಸ್​ನಲ್ಲೂ ಕಮಾಲ್ ಮಾಡಿದ ಅಕ್ಷರ್​ ಪಟೇಲ್ ಹಾಗೂ ರವಿಚಂದ್ರನ್​ ಅಶ್ವಿನ್ ತಲಾ 5 ವಿಕೆಟ್​ ಪಡೆದರು.

    ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಷಭ್ ಪಂತ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಇಡೀ ಸರಣಿಯುದ್ದಕ್ಕೂ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
    Published by:MAshok Kumar
    First published: