ಕ್ರಿಕೆಟ್​ ದೇವರು ಸಚಿನ್​ರ​ ವಿಶ್ವ ದಾಖಲೆಯನ್ನೇ ಅಲುಗಾಡಿಸಿದ ರೋಹಿತ್ ಶರ್ಮಾ..!

Rohit sharma: ಅದರಲ್ಲೂ 2003ರ ವಿಶ್ವಕಪ್​ ವೇಳೆ ತೆಂಡೂಲ್ಕರ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 673 ರನ್​ಗಳು. ಇನ್ನು 1996 ರ ವರ್ಲ್ಡ್​ ಕಪ್ ವೇಳೆ 523 ಹಾಗೂ 2011 ರ ವಿಶ್ವಕಪ್​ನಲ್ಲಿ ಸಚಿನ್ 482 ರನ್​ಗಳಿಸಿದ್ದರು. ಇದು ಕೂಡ ವಿಶ್ವಕಪ್ ದಾಖಲೆಯಾಗಿ ಉಳಿದಿದೆ.

zahir | news18
Updated:July 2, 2019, 8:49 PM IST
ಕ್ರಿಕೆಟ್​ ದೇವರು ಸಚಿನ್​ರ​ ವಿಶ್ವ ದಾಖಲೆಯನ್ನೇ ಅಲುಗಾಡಿಸಿದ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ
  • News18
  • Last Updated: July 2, 2019, 8:49 PM IST
  • Share this:
ವಿಶ್ವಕಪ್​ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಅಬ್ಬರ ಮುಂದುವರೆದಿದೆ. ಭರ್ಜರಿ ಫಾರ್ಮ್​ನಲ್ಲಿರುವ ಹಿಟ್​ ಮ್ಯಾನ್ ಬ್ಯಾಕ್ ಟು ಬ್ಯಾಕ್ ಸೆಂಚುರಿಗಳನ್ನು ಸಿಡಿಸಿ ಮಿಂಚುತ್ತಿದ್ದಾರೆ.

2003ರ ವರ್ಲ್ಡ್​ಕಪ್​ನಲ್ಲಿ 3 ಸೆಂಚುರಿ ಬಾರಿಸಿದ್ದ ಸೌರವ್ ಗಂಗೂಲಿ ದಾಖಲೆಯನ್ನು ಇದೀಗ ನಾಲ್ಕು ಶತಕ ಸಿಡಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ತಳ್ಳಿದ್ದಾರೆ. ಈ ಮೂಲಕ ಭಾರತದ ಪರ ಒಂದೇ ವರ್ಲ್ಡ್​ಕಪ್​ನಲ್ಲಿ  ಅತ್ಯಧಿಕ ಸೆಂಚುರಿ ಬಾರಿಸಿದ ಆಟಗಾರನೆಂಬ ಖ್ಯಾತಿ ರೋಹಿತ್ ಪಾಲಾಗಿದೆ.ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೇ 122 ರನ್​ ಚಚ್ಚುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಿದ ರೋಹಿತ್,  ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಬಿರುಸಿನ 140 ರನ್​ಗಳನ್ನು ಬಾರಿಸಿದ್ದರು. ಹಾಗೆಯೇ ಭಾನುವಾರ ಇಂಗ್ಲೆಂಡ್ ವಿರುದ್ಧ 102 ರನ್​ಗಳಿಸಿದರೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 104 ರನ್​ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಅಮೋಘ ಆಟದಿಂದ ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್​ನ ರನ್ ಸರದಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಸದ್ಯ ಹಿಟ್​ ಮ್ಯಾನ್ ಮುಂದಿರುವುದು ಕ್ರಿಕೆಟ್ ದೇವರು ಸಚಿನ್ ದಾಖಲೆಗಳು ಎಂಬುದೇ ವಿಶೇಷ.  ವಿಶ್ವಕಪ್ ಟೂರ್ನಿವೊಂದರಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಮತ್ತು ವರ್ಲ್ಡ್​ಕಪ್​ನಲ್ಲಿ ಅತ್ಯಧಿಕ ಶತಕದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೆಸರಿನಲ್ಲಿದೆ.ವಿಶ್ವಕಪ್​ ಟೂರ್ನಿಯಲ್ಲಿ ಮೂರು ಬಾರಿ ಮಾಸ್ಟರ್ ಬ್ಲಾಸ್ಟರ್ 450ಕ್ಕಿಂತ ಹೆಚ್ಚು ರನ್ ಸಿಡಿಸಿ ಮಿಂಚಿದ್ದಾರೆ. ಅದರಲ್ಲೂ 2003ರ ವಿಶ್ವಕಪ್​ ವೇಳೆ ತೆಂಡೂಲ್ಕರ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 673 ರನ್​ಗಳು. ಇನ್ನು 1996 ರ ವರ್ಲ್ಡ್​ ಕಪ್ ವೇಳೆ 523 ಹಾಗೂ 2011 ರ ವಿಶ್ವಕಪ್​ನಲ್ಲಿ ಸಚಿನ್ 482 ರನ್​ಗಳಿಸಿದ್ದರು. ಇದು ಕೂಡ ವಿಶ್ವಕಪ್ ದಾಖಲೆಯಾಗಿ ಉಳಿದಿದೆ.

ಇದೀಗ 500ರ ಗಡಿದಾಟಿರುವ ರೋಹಿತ್​ ಶರ್ಮಾ ಮುಂದಿರುವುದು 673 ರನ್​ ಬೃಹತ್ ಗುರಿ. ಇನ್ನೊಂದು ಶತಕ ಹಿಟ್​ ಮ್ಯಾನ್​ ಬ್ಯಾಟ್​ನಿಂದ ಮೂಡಿದರೂ ಸಚಿನ್ ದಾಖಲೆಯ ಸನಿಹಕ್ಕೆ ರೋಹಿತ್ ತಲುಪಲಿದ್ದಾರೆ. ಹಾಗೆಯೇ ಈ ಶತಕದೊಂದಿಗೆ ಸಚಿನ್​ರ ಅತೀ ಹೆಚ್ಚು ವಿಶ್ವಕಪ್ ಸೆಂಚುರಿ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಲಿದ್ದಾರೆ.

ಸಚಿನ್ ತೆಂಡೂಲ್ಕರ್ ವಿಶ್ವಕಪ್​ನಲ್ಲಿ ಒಟ್ಟು ಆರು ಭರ್ಜರಿ ಶತಕಗಳನ್ನು ಸಿಡಿಸಿದ್ದರೆ, ರೋಹಿತ್ ಶರ್ಮಾ 5 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ ನಾಲ್ಕು ಶತಕಗಳು ಈ ಬಾರಿ ಮೂಡಿ ಬಂದಿರುವುದು ವಿಶೇಷ. ಸದ್ಯ ಕುಮಾರ ಸಂಗಾಕ್ಕರ, ರಿಕಿ ಪಾಟಿಂಗ್ ಜೊತೆ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ರೋಹಿತ್ ಹಂಚಿಕೊಂಡಿದ್ದಾರೆ.

ಅದ್ಭುತ ಫಾರ್ಮ್​ನಲ್ಲಿರುವ ರೋಹಿತ್ ಶರ್ಮಾ  ಅವರ ಬ್ಯಾಟ್​ನಿಂದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಮತ್ತೊಂದು ಸೆಂಚುರಿ ಬಂದರೆ ಸಚಿನ್ ಅವರೊಂದಿಗೆ ವಿಶ್ವದಾಖಲೆಯನ್ನು ಹಿಟ್​ ಮ್ಯಾನ್ ಹಂಚಿಕೊಳ್ಳಲಿದ್ದಾರೆ. ಅಲ್ಲದೆ ಭಾರತ ಸೆಮಿ ಫೈನಲ್ ಹಾಗೂ ಫೈನಲ್​ಗೆ ಪ್ರವೇಶಿಸಿದರೆ ಸಚಿನ್ ದಾಖಲೆ ಮುರಿಯಲು ಮತ್ತೆರೆಡು ಅವಕಾಶಗಳು ಹಿಟ್​​ಮ್ಯಾನ್​ಗೆ ದೊರೆಯಲಿದೆ. ಒಟ್ಟಿನಲ್ಲಿ ಕ್ರಿಕೆಟ್​ ದಿಗ್ಗಜನ ಯಾರು ಅಳಿಸಿ ಹಾಕದಂತಹ ದಾಖಲೆಯ ಸನಿಹಕ್ಕೆ ಬಂದಿರುವ ರೋಹಿತ್ ಶರ್ಮಾ ಕ್ರಿಕೆಟ್ ಪ್ರೇಮಿಗಳ  ಹುಬ್ಬೇರುವಂತೆ ಮಾಡಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಆರ್ಭಟಕ್ಕೆ ಧೋನಿ, ಎಬಿಡಿ ದಾಖಲೆಗಳು ಉಡೀಸ್..!
First published: July 2, 2019, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading