India Vs Bangladesh: ರೋಹಿತ್ ಶರ್ಮಾ ಭರ್ಜರಿ ಶತಕ: ಬಾಂಗ್ಲಾಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಫಾರ್ಮ್​ನಲ್ಲಿದ್ದು, ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದಾರೆ.

zahir | news18
Updated:July 2, 2019, 7:02 PM IST
India Vs Bangladesh: ರೋಹಿತ್ ಶರ್ಮಾ ಭರ್ಜರಿ ಶತಕ: ಬಾಂಗ್ಲಾಗೆ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ
Rohit Sharma
  • News18
  • Last Updated: July 2, 2019, 7:02 PM IST
  • Share this:
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 314 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್​ ರಾಹುಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್​ನಲ್ಲಿ 9 ವಿಕೆಟ್​ ನಷ್ಟಕ್ಕೆ 314 ರನ್​ ಪೇರಿಸುವಂತಾಯಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕ್ರೀಸ್​ಗೆ ಇಳಿದ ರೋಹಿತ್ ಶರ್ಮಾ ಹಾಗೂ ಕೆಎಲ್​ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದಾರೆ. ಮೊದಲ ಓವರ್​ನಲ್ಲೇ ಬಾಂಗ್ಲಾ ಬೌಲರುಗಳನ್ನು ದಂಡಿಸಲು ರೋಹಿತ್ ಶರ್ಮಾ ಪ್ರಾರಂಭಿಸಿದ್ದರು. ಇದೇ ವೇಳೆ ತಮೀಮ್ ಇಕ್ಬಾಲ್ ಬೌಂಡರಿಯಲ್ಲಿ ಕ್ಯಾಚನ್ನು ಕೈಚೆಲ್ಲುವ ಮೂಲಕ ಹಿಟ್​ ಮ್ಯಾನ್​ಗೆ ಜೀವದಾನ ನೀಡಿದರು.

ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ರೋಹಿತ್ ಶರ್ಮಾ ಬಾಂಗ್ಲಾ ಬೌಲರುಗಳ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ರೋಹಿತ್ ಶರ್ಮಾ 89 ಎಸೆತಗಳಲ್ಲಿ 5 ಅಮೋಘ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಗಳೊಂದಿಗೆ  ಶತಕ ಪೂರೈಸಿದರು. ಈ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ 4ನೇ ಶತಕ ಸಿಡಿಸಿ ವರ್ಲ್ಡ್​ಕಪ್​ವೊಂದರಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರನೆಂಬ ದಾಖಲೆ ಬರೆದರು.

ಏಕದಿನ ಕ್ರಿಕೆಟ್​ನ 26 ಶತಕ ಪೂರೈಸಿದ ಹಿಟ್​ ಮ್ಯಾನ್​(104)ಗೆ ಕೊನೆಗೂ ಪೆವಿಲಿಯನ್ ದಾರಿ ತೋರಿಸುವಲ್ಲಿ ಬಾಂಗ್ಲಾ ಸ್ಪಿನ್ನರ್ ಸೌಮ್ಯ ಸರ್ಕಾರ್ ಯಶಸ್ವಿಯಾದರು.  ಅಷ್ಟರಲ್ಲಾಗಲೇ ಆರಂಭಿಕ ಜೋಡಿ ಮೊದಲ ವಿಕೆಟ್​ಗೆ 180 ರನ್​ಗಳ ಜೊತೆಯಾಟ ಆಡಿದ್ದರು. ಉಪನಾಯಕನಿಗೆ  ಉತ್ತಮ ಸಾಥ್ ನೀಡಿದ ಕನ್ನಡಿಗ ರಾಹುಲ್ ಸಹ ಕೆಲ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. 92 ಎಸೆತಗಳಲ್ಲಿ 77 ಬಾರಿಸಿದ್ದ ರಾಹುಲ್ ರುಬೆಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.

ಒನ್​ಡೌನ್​ ಬಳಿಕ ಕ್ರೀಸ್​ಗೆ ಇಳಿದ ಕೊಹ್ಲಿ ಈ ಬಾರಿ ತಮ್ಮ ಕಮಾಲ್ ಮಾಡುವಲ್ಲಿ ವಿಫಲರಾದರು. ಬಾಂಗ್ಲಾ ಬೌಲರುಗಳನ್ನು ಒಂದಷ್ಟು ಹೊತ್ತು ಕಾಡಿದ ಕೊಹ್ಲಿ ಕೇವಲ 26 ರನ್​ಗಳಿಸಲಷ್ಟೇ ಶಕ್ತರಾದರು. ನಾಯಕ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(1) ಸಹ ಮುಸ್ತಾಫಿಜುರ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಯುವ ಆಟಗಾರ ರಿಷಭ್ ಪಂತ್ 41 ಎಸೆತಗಳಲ್ಲಿ 48 ರನ್​ ಬಾರಿಸಿದರು. ಈ ವೇಳೆ ಶಕಿಬ್​ ಅಲ್ ಹಸನ್ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಅರ್ಧಶತಕ ವಂಚಿತರಾದರು. ಕೊನೆಯ ಹಂತದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 35 ರನ್​ಗಳಿಸಿದ್ದು ಬಿಟ್ಟರೆ, ಭಾರತದ ಬೌಲರುಗಳಿಂದ ಯಾವುದೇ ಉಪಯುಕ್ತ ಕಾಣಿಕೆ ಮೂಡಿ ಬರಲಿಲ್ಲ. ಪರಿಣಾಮ 350 ರನ್​ಗಳ ಗಡಿದಾಟಬೇಕಿದ್ದ ಟೀಂ ಇಂಡಿಯಾ ಸ್ಕೋರನ್ನು ಬಾಂಗ್ಲಾ ಬೌಲರುಗಳು 314ಕ್ಕೆ ನಿಯಂತ್ರಿಸಿದರು.

ಇನ್ನು ಬಾಂಗ್ಲಾದೇಶದ ಪರ ಮಾರಕ ದಾಳಿ ನಡೆಸಿದ ಯುವ ಬೌಲರ್ ಮುಸ್ತಫಿಜುರ್ ರೆಹಮಾನ್ ಕೊಹ್ಲಿ ವಿಕೆಟ್ ಸೇರಿದಂತೆ ಟೀಂ ಇಂಡಿಯಾದ 5 ವಿಕೆಟ್​ಗಳನ್ನು ಪಡೆದರು. ಈ ಮೂಲಕ ವಿಶ್ವಕಪ್​ನಲ್ಲಿ 5 ವಿಕೆಟ್ ಕಬಳಿಸಿದ ಆಟಗಾರರ ಪಟ್ಟಿಯಲ್ಲಿ ಮುಸ್ತಫಿಜುರ್ ಸ್ಥಾನ ಪಡೆದರು.ಟೀಂ ಇಂಡಿಯಾದಲ್ಲಿ 2 ಬದಲಾವಣೆ:

2 ಬದಲಾವಣೆಯೊಂದಿಗೆ ಕಣಕ್ಕಿಳಿದಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸೆಮೀಸ್​ ಹಂತಕ್ಕೇರುವ ತವಕದಲ್ಲಿದೆ. ಅತ್ತ ಮಾಡು ಇಲ್ಲವೇ ಮಡಿ ಎಂಬಂತಿರುವ ಈ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ಆಸೆಯನ್ನು ಜೀವಂತವಿರಿಸಲು ಬಾಂಗ್ಲಾ ಪಡೆ ಯೋಜನೆ ಹಾಕಿಕೊಂಡಿದೆ.

ಇಂದಿನ ಪಂದ್ಯದಲ್ಲಿ ಕೇದಾರ್ ಜಾಧವ್ ಬದಲಾಗಿ ದಾಂಡಿಗ ದಿನೇಶ್ ಕಾರ್ತಿಕ್ ಹಾಗೂ ಕುಲ್​ದೀಪ್ ಯಾದವ್​ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಗಾಯಾಳು ವಿಜಯ್ ಶಂಕರ್ ಸ್ಥಾನಕ್ಕೆ ಆಯ್ಕೆಯಾಗಿರುವ ಕನ್ನಡಿಗ ಮಯಾಂಕ್ ಅಗರ್​ವಾಲ್​ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಲಭಿಸಿಲ್ಲ.​

ಈ ಬಾರಿಯ ವಿಶ್ವಕಪ್​ನಲ್ಲಿ ತನ್ನ ಸಾಮರ್ಥ್ಯಕ್ಕಿಂತಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾದೇಶ ಆಟಗಾರರು ಪ್ರಸ್ತುತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ 11 ಪಾಯಿಂಟ್​ಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದುಕೊಂಡರೆ ಭಾರತ ತಂಡವು ಅಧಿಕೃತವಾಗಿ ಸೆಮಿ ಫೈನಲ್ ಹಂತಕ್ಕೇರಲಿದೆ.

 

ಉಭಯ ತಂಡಗಳು ಇಂತಿವೆ:

ಟೀಂ ಬಾಂಗ್ಲಾ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಶ್ಫಿಕುರ್ ರಹೀಮ್ , ಲಿಟನ್ ದಾಸ್, ಮೊಸದ್ದೆಕ್ ಹುಸೈನ್, ಸಬ್ಬೀರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ಮುಶ್ರಫೆ ಮೊರ್ತಾಜಾ (ನಾಯಕ), ರುಬೆಲ್ ಹುಸೈನ್, ಮುಸ್ತಾಫಿಜುರ್ ರೆಹಮಾನ್

ಟೀಂ ಇಂಡಿಯಾ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ದಿನೇಶ್ ಕಾರ್ತಿಕ್, ರಿಷಭ್ ಪಂತ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ
First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ