India Vs Bangladesh: ರೋಹಿತ್ ಶತಕ, ಬುಮ್ರಾ ಮ್ಯಾಜಿಕ್: ಬಾಂಗ್ಲಾ ಬಗ್ಗು ಬಡಿದು ಸೆಮಿಗೆ ಲಗ್ಗೆಯಿಟ್ಟ ಭಾರತ

India vs Bangladesh: ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ರೋಹಿತ್ ಶರ್ಮಾ 89 ಎಸೆತಗಳಲ್ಲಿ 5 ಅಮೋಘ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಗಳೊಂದಿಗೆ  ಶತಕ ಪೂರೈಸಿದರು. ಈ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ 4ನೇ ಶತಕ ಸಿಡಿಸಿ ವರ್ಲ್ಡ್​ಕಪ್​ವೊಂದರಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರನೆಂಬ ದಾಖಲೆ ಬರೆದರು.

zahir | news18
Updated:July 2, 2019, 11:31 PM IST
India Vs Bangladesh: ರೋಹಿತ್ ಶತಕ, ಬುಮ್ರಾ ಮ್ಯಾಜಿಕ್: ಬಾಂಗ್ಲಾ ಬಗ್ಗು ಬಡಿದು ಸೆಮಿಗೆ ಲಗ್ಗೆಯಿಟ್ಟ ಭಾರತ
India Vs Bangladesh
  • News18
  • Last Updated: July 2, 2019, 11:31 PM IST
  • Share this:
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ವಿಶ್ವಕಪ್​ನ 40ನೇ ಪಂದ್ಯದಲ್ಲಿ ಟೀಂ ಇಂಡಿಯಾ 28 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ನೀಡಿದ 315 ರನ್​ ಗುರಿ ಬೆನ್ನತ್ತಿದ್ದ ಬಾಂಗ್ಲಾ 286 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಜಯದೊಂದಿಗೆ ಭಾರತ ತಂಡವು ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಕ್ರೀಸ್​ಗೆ ಇಳಿದ ರೋಹಿತ್ ಶರ್ಮಾ ಹಾಗೂ ಕೆಎಲ್​ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದಾರೆ. ಮೊದಲ ಓವರ್​ನಲ್ಲೇ ಬಾಂಗ್ಲಾ ಬೌಲರುಗಳನ್ನು ದಂಡಿಸಲು ರೋಹಿತ್ ಶರ್ಮಾ ಪ್ರಾರಂಭಿಸಿದ್ದರು. ಇದೇ ವೇಳೆ ತಮೀಮ್ ಇಕ್ಬಾಲ್ ಬೌಂಡರಿಯಲ್ಲಿ ಕ್ಯಾಚನ್ನು ಕೈಚೆಲ್ಲುವ ಮೂಲಕ ಹಿಟ್​ ಮ್ಯಾನ್​ಗೆ ಜೀವದಾನ ನೀಡಿದರು.

ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ರೋಹಿತ್ ಶರ್ಮಾ ಬಾಂಗ್ಲಾ ಬೌಲರುಗಳ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ರೋಹಿತ್ ಶರ್ಮಾ 89 ಎಸೆತಗಳಲ್ಲಿ 5 ಅಮೋಘ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಗಳೊಂದಿಗೆ  ಶತಕ ಪೂರೈಸಿದರು. ಈ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ 4ನೇ ಶತಕ ಸಿಡಿಸಿ ವರ್ಲ್ಡ್​ಕಪ್​ವೊಂದರಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರನೆಂಬ ದಾಖಲೆ ಬರೆದರು.

ಏಕದಿನ ಕ್ರಿಕೆಟ್​ನ 26 ಶತಕ ಪೂರೈಸಿದ ಹಿಟ್​ ಮ್ಯಾನ್​(104)ಗೆ ಕೊನೆಗೂ ಪೆವಿಲಿಯನ್ ದಾರಿ ತೋರಿಸುವಲ್ಲಿ ಬಾಂಗ್ಲಾ ಸ್ಪಿನ್ನರ್ ಸೌಮ್ಯ ಸರ್ಕಾರ್ ಯಶಸ್ವಿಯಾದರು.  ಅಷ್ಟರಲ್ಲಾಗಲೇ ಆರಂಭಿಕ ಜೋಡಿ ಮೊದಲ ವಿಕೆಟ್​ಗೆ 180 ರನ್​ಗಳ ಜೊತೆಯಾಟ ಆಡಿದ್ದರು. ಉಪನಾಯಕನಿಗೆ  ಉತ್ತಮ ಸಾಥ್ ನೀಡಿದ ಕನ್ನಡಿಗ ರಾಹುಲ್ ಸಹ ಕೆಲ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. 92 ಎಸೆತಗಳಲ್ಲಿ 77 ಬಾರಿಸಿದ್ದ ರಾಹುಲ್ ರುಬೆಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.

ಒನ್​ಡೌನ್​ ಬಳಿಕ ಕ್ರೀಸ್​ಗೆ ಇಳಿದ ಕೊಹ್ಲಿ ಈ ಬಾರಿ ತಮ್ಮ ಕಮಾಲ್ ಮಾಡುವಲ್ಲಿ ವಿಫಲರಾದರು. ಬಾಂಗ್ಲಾ ಬೌಲರುಗಳನ್ನು ಒಂದಷ್ಟು ಹೊತ್ತು ಕಾಡಿದ ಕೊಹ್ಲಿ ಕೇವಲ 26 ರನ್​ಗಳಿಸಲಷ್ಟೇ ಶಕ್ತರಾದರು. ನಾಯಕ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ(1) ಸಹ ಮುಸ್ತಾಫಿಜುರ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಯುವ ಆಟಗಾರ ರಿಷಭ್ ಪಂತ್ 41 ಎಸೆತಗಳಲ್ಲಿ 48 ರನ್​ ಬಾರಿಸಿದರು. ಈ ವೇಳೆ ಶಕಿಬ್​ ಅಲ್ ಹಸನ್ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಅರ್ಧಶತಕ ವಂಚಿತರಾದರು. ಕೊನೆಯ ಹಂತದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 35 ರನ್​ಗಳಿಸಿದ್ದು ಬಿಟ್ಟರೆ, ಭಾರತದ ಬೌಲರುಗಳಿಂದ ಯಾವುದೇ ಉಪಯುಕ್ತ ಕಾಣಿಕೆ ಮೂಡಿ ಬರಲಿಲ್ಲ. ಪರಿಣಾಮ 350 ರನ್​ಗಳ ಗಡಿದಾಟಬೇಕಿದ್ದ ಟೀಂ ಇಂಡಿಯಾ ಸ್ಕೋರನ್ನು ಬಾಂಗ್ಲಾ ಬೌಲರುಗಳು 314ಕ್ಕೆ ನಿಯಂತ್ರಿಸಿದರು.

ಇನ್ನು ಬಾಂಗ್ಲಾದೇಶದ ಪರ ಮಾರಕ ದಾಳಿ ನಡೆಸಿದ ಯುವ ಬೌಲರ್ ಮುಸ್ತಫಿಜುರ್ ರೆಹಮಾನ್ ಕೊಹ್ಲಿ ವಿಕೆಟ್ ಸೇರಿದಂತೆ ಟೀಂ ಇಂಡಿಯಾದ 5 ವಿಕೆಟ್​ಗಳನ್ನು ಪಡೆದರು. ಈ ಮೂಲಕ ವಿಶ್ವಕಪ್​ನಲ್ಲಿ 5 ವಿಕೆಟ್ ಕಬಳಿಸಿದ ಆಟಗಾರರ ಪಟ್ಟಿಯಲ್ಲಿ ಮುಸ್ತಫಿಜುರ್ ಸ್ಥಾನ ಪಡೆದರು.ಟೀಂ ಇಂಡಿಯಾ ಮುಂದಿಟ್ಟ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾಗೆ ಎಚ್ಚರಿಕೆಯ ಆರಂಭ ಒದಗಿಸುವಲ್ಲಿ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಯಶಸ್ವಿಯಾಗಿದ್ದರು. ಆದರೆ  9ನೇ ಓವರ್​ನ್ನು ಎಸೆದ ಮೊಹಮ್ಮದ್ ಶಮಿ ತಮೀಮ್ ಇಕ್ಬಾಲ್(22)ರನ್ನು  ಕ್ಲೀನ್ ಬೌಲ್ಡ್​ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಮೊದಲ ವಿಕೆಟ್ ಪತನದ ಬಳಿಕವೂ ಉತ್ತಮವಾಗಿಯೇ ಬ್ಯಾಟ್ ಮಾಡುತ್ತಿದ್ದ ಸೌಮ್ಯ ಸರ್ಕಾರ್ (33) ​ರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.

ಈ ಹಂತದಲ್ಲಿ ಜತೆಯಾದ ಶಕೀಬ್ ಅಲ್ ಹಸನ್ ಹಾಗೂ ಮುಷ್ಫಿಕುರ್ ರಹೀಮ್ ತಂಡವನ್ನು ಸುಸ್ಥಿತಿಗೆ ತಲುಪಿಸಲು ನಿಧಾನಗತಿಯ ಆಟಕ್ಕೆ ಒತ್ತುಕೊಟ್ಟರು. ಉತ್ತಮ ಜೊತೆಯಾಟ ಮೂಡುತ್ತಿರುವ ಬೆನ್ನಲ್ಲೇ ಬೌಲರ್  ಬದಲಿಸಿದ ನಾಯಕ ಕೊಹ್ಲಿ ಚಹಾಲ್​ ಕೈಗೆ ಚೆಂಡಿಟ್ಟರು. ನಾಯಕನ ಊಹೆಯಂತೆ ಮುಷ್ಷಿಕರ್​ರನ್ನು ಕೊನೆಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಚಹಾಲ್ ಸಫಲರಾದರು.

ಆದರೆ ಸೋಲನ್ನು ಒಪ್ಪಿಕೊಳ್ಳಲು ತಯಾರಿರದ ಶಕೀಬ್ ಅಲ್ ಹಸನ್ ಏಕಾಂಗಿ ಹೋರಾಟಕ್ಕೆ ಕೈ ಹಾಕಿದರು. ಟೀಂ ಇಂಡಿಯಾ ಬೌಲರುಗಳನ್ನು ಕಾಡಿದ ಶಕೀಬ್ ಭರ್ಜರಿ ಇನಿಂಗ್ಸ್ ಆಡಿದರು. ಈ ವೇಳೆ  58 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಶಕೀಬ್ ಅಲ್ ಹಸನ್ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದರು.

ಆದರೆ ಪಾಂಡ್ಯ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿಸಿದ ಶಕೀಬ್  66 ರನ್​ಗಳಿಸಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಬಳಿಕ ಬಂದ ಬಾಂಗ್ಲಾ ಆಟಗಾರರಿಂದ ನಿರೀಕ್ಷಿತ ಹೋರಾಟ ಮೂಡಿ ಬರಲಿಲ್ಲ. ಆದರೂ ಕೊನೆಯ ಹಂತದಲ್ಲಿ ಸಿಡಿದ ಸೈಫುದ್ದೀನ್ ಟೀಂ ಇಂಡಿಯಾ ಬೌಲರುಗಳನ್ನು ದಂಡಿಸಿದರು. ಪರಿಣಾಮ ಮತ್ತೊಮ್ಮೆ ರೋಚಕ ಘಟ್ಟದತ್ತ ಪಂದ್ಯ ಸಾಗಿತು.

ಇನ್ನೊಂದೆಡೆ ಬಾಂಗ್ಲಾ ಬಾಲಂಗೋಚಿಗಳನ್ನು ಪೆವಿಲಿಯನ್​ಗಟ್ಟಲು ಯಶಸ್ವಿಯಾದ ಬುಮ್ರಾ ಬ್ಯಾಕ್​ ಟು ಬ್ಯಾಕ್ ವಿಕೆಟ್ ಉರುಳಿಸಿದರು. ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಸೈಫುದ್ದೀನ್(51) ​ಅಜೇಯ ಹೋರಾಟದ ಹೊರತಾಗಿಯು ಬಾಂಗ್ಲಾದೇಶ 48 ಓವರ್​ಗಳಲ್ಲಿ 286 ರನ್​ಗಳಿಸಲಷ್ಟೇ ಶಕ್ತವಾಯಿತು.

ಟೀಂ ಇಂಡಿಯಾ ಪರ ಬುಮ್ರಾ 4 ವಿಕೆಟ್ ಉರುಳಿಸಿದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಅದ್ಭುತ ಜಯದೊಂದಿಗೆ ಈ ಬಾರಿಯ ವಿಶ್ವಕಪ್​ನಲ್ಲಿ​ ಸೆಮಿ ಫೈನಲ್ ಪ್ರವೇಶಿಸಿದ ಎರಡನೇ ತಂಡವಾಗಿ ಟೀಂ ಇಂಡಿಯಾ ಹೊರ ಹೊಮ್ಮಿತು. ಭರ್ಜರಿ ಶತಕದೊಂದಿಗೆ ಅಮೋಘ ಇನಿಂಗ್ಸ್ ಆಡಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ