ನವ ದೆಹಲಿ (ನ. 03): ದೀಪಾವಳಿ ಬಳಿಕ ರಾಜಧಾನಿ ದೆಹಲಿ ದಟ್ಟ ವಾಯುಮಾಲಿನ್ಯದಿಂದ ಕೂಡಿದ್ದು, ಇಡೀ ನಗರ ಗ್ಯಾಸ್ ಚೇಂಬರ್ನಂತೆ ಆಗಿದೆ. ಜೀವವಾಯುವಿನ ಮಾಲಿನ್ಯದ ಗುಣಮಟ್ಟ ಸೂಚ್ಯಂಕ 500ರ ಗಡಿ ದಾಟಿದ್ದು, “ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ“ ಎಂದು ಘೋಷಿಸಲಾಗಿದೆ. ಅಲ್ಲದೆ, ನವೆಂಬರ್ 05ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಕಟ್ಟಡ ನಿರ್ಮಾಣ ಕೆಲಸಗಳಿಗೂ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇವೆಲ್ಲದರ ನಡುವೆ ಇಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದೆ. ಇದು ಅಂತರಾಷ್ಟ್ರೀಯ ಟಿ-20ಯ ಸಾವಿರನೇ ಪಂದ್ಯವಾಗಿದ್ದು, ಸ್ಮರಣೀಯ ಗೆಲುವನ್ನಾಗಿಸಲು ಉಭಯ ತಂಡಗಳು ಸಕಲ ತಯರಿಯಲ್ಲಿ ತೊಡಗಿಕೊಂಡಿವೆ.
![Day Before Odd-Even Comeback, Haze Thickens Over Delhi as 9 Places Breach 900-Mark on AQI Scale]()
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ
ಮಿಂಚಿದ ರಾಣಿ ರಾಂಪಾಲ್: 3ನೇ ಬಾರಿ ಒಲಿಂಪಿಕ್ಗೆ ಅರ್ಹತೆ ಪಡೆದುಕೊಂಡ ಭಾರತೀಯ ವನಿತೆಯರು
ಈವರೆಗೆ ಬಾಂಗ್ಲಾದೇಶ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತ ಒಂದೇ ಒಂದು ಸೋಲು ಕಂಡಿಲ್ಲ. ಉಭಯ ತಂಡಗಳು ಒಟ್ಟು 8 ಟಿ-20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಎಂಟೂ ಪಂದ್ಯಗಳಲ್ಲಿ ಗೆದ್ದು ಬೀಗಿದ್ದು ಭಾರತ. ಹೀಗಾಗಿ ಇದು ರೋಹಿತ್ ಪಡೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ನಾಲ್ಕು ವರ್ಷದ ಹಿಂದೆ ಟೀಂ ಇಂಡಿಯಾ ಪರ ಏಕೈಕ ಟಿ-20 ಪಂದ್ಯವನ್ನಾಡಿದ ಬಳಿಕ ಮತ್ತೆ ಅಂತರಾಷ್ಟ್ರೀಯ ತಂಡ ಸೇರಿರುವ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರ ಎಂಬುದು ಕುತೂಹಲ ಕೆರಳಿಸಿದೆ. ಕೊಹ್ಲಿ ಜಾಗದ ಮೂರನೇ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ ಅಥವಾ ಸ್ಯಾಮ್ಸನ್ರಲ್ಲಿ ಯಾರಿಗೆ ಸ್ಥಾನ ಎಂಬುದು ತಿಳಿಯಬೇಕಿದೆ.
ಇನ್ನು ಆಲ್ರೌಂಡರ್ ಶಿವಂ ದುಬೆಗೆ ಇದು ಪದಾರ್ಪಣೆಯ ಪಂದ್ಯ ಎಂದು ಹೇಳಲಾಗುತ್ತಿದೆ. ಕ್ರುನಾಲ್ ಪಾಂಡ್ಯ ಜೊತೆ ದುಬೆ ಬ್ಯಾಟಿಂಗ್- ಬೌಲಿಂಗ್ನಲ್ಲಿ ಭಾರತಕ್ಕೆ ನೆರವಾಗಲಿದ್ದಾರೆ. ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ ಎಂದು ಈಗಾಗಲೇ ರೋಹಿತ್ ಶರ್ಮಾ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಬೌಲಿಂಗ್ನಲ್ಲಿ ಯಜುವೇಂದ್ರ ಚಹಾಲ್ ಕಮ್ಬ್ಯಾಕ್ ಮಾಡಲಿದ್ದಾರೆ. ಇನ್ನೊಬ್ಬ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅಥವಾ ರಾಹುಲ್ ಚಹಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ವೇಗಿಗಳಾಗಿ ದೀಪಕ್ ಚಹಾರ್ ಹಾಗೂ ಖಲೀಲ್ ಅಹ್ಮದ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
India vs Bangladesh: ಮೊದಲ ಟಿ-20 ಪಂದ್ಯದಲ್ಲೇ ಗೆದ್ದು ಬೀಗಲಿದೆ ಭಾರತ; ಯಾಕೆ ಗೊತ್ತಾ..?
ಇತ್ತ ಬಾಂಗ್ಲಾದೇಶ ಪರ ಮಹಮುದುಲ್ಲಾ ರಿಯಾದ್‌ಗೆ ಟಿ-20 ನಾಯಕ ಪಟ್ಟ ವಹಿಸಿಕೊಂಡಿದ್ದಾರೆ. ಈ ಮೈದಾನದಲ್ಲಿ ಬಾಂಗ್ಲಾ ಆಡುತ್ತಿರುವುದು ಇದೇ ಮೊದಲು. ಕೆಲ ಬಾಂಗ್ಲಾ ಆಟಗಾರರಿಗಷ್ಟೆ ಭಾರತದ ಮೈದಾನದಲ್ಲಿ ಆಡಿದ ಅನುಭವವಿದೆ. ಇದು ಬಾಂಗ್ಲಾ ಹುಲಿಗಳಿಗೆ ಹಿನ್ನಡೆಯಾಗುವುದು ಖಚಿತ. ಜೊತೆಗೆ ಶಕಿಬ್ ಅಲ್ ಹಸನ್ ಎರಡು ವರ್ಷ ಕ್ರಿಕೆಟ್ನಿಂದ ಬ್ಯಾನ್ ಆಗಿರುವ ಶಾಕ್ನಿಂದ ಬಾಂಗ್ಲಾ ಆಟಗಾರರು ಇನ್ನೂ ಹೊರಬಂದಿಲ್ಲ.
ಒಟ್ಟಾರೆ ಇದು ಟಿ-20 ಪಂದ್ಯವಾಗಿರುವುದರಿಂದ ಗೆಲುವು ಯಾರಕಡೆ ಎಂದು ಹೇಳಲು ಸಾಧ್ಯವಿಲ್ಲ. ಉಭಯ ತಂಡಗಳಿಗೆ ಇದು ಮುಖ್ಯವಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟಿ-20 ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಉಭಯ ತಂಡಗಳು ಪ್ರಯೋಗಕ್ಕೆ ಒಳಪಡಲಿದೆ. ಹೀಗಾಗಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯವಾಗುವುದರಲ್ಲಿ ಅನುಮಾನವಿಲ್ಲ.
ಪಂದ್ಯ ಆರಂಭ: ಸಂಜೆ 7 ಗಂಟೆಗೆ