ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವು ಕುತೂಹಲಘಟಕ್ಕೆ ತಲುಪಿದೆ. ವಾಷಿಂಗ್ಟನ್ ಸುಂದರ್ (62) ಮತ್ತು ಶಾರ್ದೂಲ್ ಠಾಕೂರ್ (67) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 336 ರನ್ ಗಳಿಸಿತು. ಆಸ್ಟ್ರೇಲಿಯಾದ 369 ರನ್ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ 33 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯಾ 3ನೇ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್ಗೆ ಹೆಚ್ಚಿಸಿಕೊಂಡು ತುಸು ಮೇಲುಗೈ ಸ್ಥಿತಿಯಲ್ಲಿದೆ.
ಇನ್ನು ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಚೊಚ್ಚಲ ಇನಿಂಗ್ಸ್ನಲ್ಲೇ ಅರ್ಧಶತಕ ಬಾರಿಸಿ ಗಮನ ಸೆಳೆದರು. 144 ಎಸೆತಗಳನ್ನು ಎದುರಿಸಿದ ಸುಂದರ್ 62 ರನ್ ಕಲೆಹಾಕಿದರು. ಇದರಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು. ಈ ಭರ್ಜರಿ ಇನಿಂಗ್ಸ್ನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪಣೆ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎಂಬ ವಿಶ್ವ ದಾಖಲೆ ವಾಷಿಂಗ್ಟನ್ ಸುಂದರ್ ಪಾಲಾಗಿದೆ.
ಹೌದು, ಈ ಹಿಂದೆ 1911ರ ಡಿಸೆಂಬರ್ನಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಇಂಗ್ಲೆಂಡ್ ತಂಡದ ಬೌಲರ್ ಫ್ರಾಂಕ್ ಪೋಸ್ಟರ್ 56 ರನ್ ಬಾರಿಸಿದ್ದರು. ಈ ದಾಖಲೆ ಅಚ್ಚಳಿಯದೇ ಉಳಿದಿತ್ತು. ಆದರೆ ಚೊಚ್ಚಲ ಪಂದ್ಯದಲ್ಲೇ 7ನೇ ಕ್ರಮಾಂಕದಲ್ಲಿ 62 ರನ್ ಕಲೆಹಾಕುವ ಮೂಲಕ ಸುಂದರ್ 110 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಇನ್ನು ಸುಂದರ್-ಶಾರ್ದೂಲ್ ಜೋಡಿ 123 ರನ್ ಕಲೆಹಾಕುವ ಮೂಲಕ 7ನೇ ವಿಕೆಟ್ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡಿದ್ದಾರೆ. ಇದಲ್ಲದೆ ಬ್ರಿಸ್ಬೇನ್ ಗಾಬ್ಬಾ ಮೈದಾನದಲ್ಲಿ 1991ರಲ್ಲಿ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ 58 ರನ್ ಜೊತೆಯಾಟವಾಡಿರುವುದು 7ನೇ ವಿಕೆಟ್ ಅತ್ಯುತ್ತಮ ಜೊತೆಯಾಟವಾಗಿತ್ತು. ಆದರೆ ಸುಂದರ್ ಹಾಗೂ ಶಾರ್ದೂಲ್ ಜೋಡಿ 59 ರನ್ ಗಳಿಸುವುದರೊಂದಿಗೆ 3 ದಶಕಗಳ ಹಿಂದಿನ ದಾಖಲೆಯನ್ನು ಮುರಿದರು. ಈ ಮೂಲಕ ಗಬ್ಬಾ ಮೈದಾನದಲ್ಲಿ 7ನೇ ವಿಕೆಟ್ ಅತೀ ಹೆಚ್ಚು ರನ್ ಜೊತೆಯಾಟವಾಡಿದ ಜೋಡಿ ಎಂಬ ಹಿರಿಮೆಗೆ ಶಾರ್ದೂಲ್-ಸುಂದರ್ ಪಾತ್ರರಾಗಿದ್ದಾರೆ.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ