India vs Australia: ಮತ್ತೋರ್ವ ಆಟಗಾರನಿಗೆ ಗಾಯ: ಸರಣಿಯಿಂದ ಹೊರಗುಳಿಯುವ ಸಾಧ್ಯತೆ..!

ಈಗಾಗಲೇ ತಂಡದ ಇಬ್ಬರು ಪ್ರಮುಖ ಬೌಲರುಗಳಾದ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ಅವರು ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಪಿತೃತ್ವ ರಜೆ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿದ್ದಾರೆ.

Team India

Team India

  • Share this:
    ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭಾರತ ಗೆಲುವಿನ ಸಮೀಪದಲ್ಲಿದೆ. ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾವನ್ನು 195 ರನ್​ಗಳಿಗೆ ಕಟ್ಟಿಹಾಕಿದ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅವರ ಶತಕದ ನೆರವಿನಿಂದ 326 ರನ್​ಗಳನ್ನು ಕಲೆಹಾಕಿತು. ದ್ವಿತೀಯ ಇನಿಂಗ್ಸ್​ನಲ್ಲೂ ಆಸೀಸ್​ ಬ್ಯಾಟ್ಸ್​ಮನ್​ಗಳನ್ನು ಕಾಡಿದ ಭಾರತ ಮೂರನೇ ದಿನದಾಂತ್ಯಕ್ಕೆ 133 ರನ್​ಗಳಿಗೆ 6 ವಿಕೆಟ್ ಉರುಳಿಸಿತು.

    ಇತ್ತ ಅತ್ಯುತ್ತಮ ಬೌಲಿಂಗ್ ಮೂಲಕ ಗಮನ ಸೆಳೆದರೂ, ತಂಡದ ಪ್ರಮುಖ ವೇಗಿ ಉಮೇಶ್ ಯಾದವ್ ನಾಲ್ಕನೇ ಓವರ್​ನಲ್ಲೇ ಮೈದಾನ ತೊರೆದಿದ್ದರು. ಎರಡನೇ ಓವರ್​ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಜೋ ಬನ್ರ್ಸ್ ಅವರನ್ನು ಬಲಿ ತೆಗೆದುಕೊಂಡ ಉಮೇಶ್ ಬಳಿಕ ಬೌಲಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೊಳಗಾದರು. ಆ ಬಳಿಕ ಓಡಲು ಕಷ್ಟಪಟ್ಟ ಅವರು ಅರ್ಧದಲ್ಲೇ ಮೈದಾನ ತೊರೆದರು. ಇತ್ತ ಉಮೇಶ್ ಯಾದವ್ ಅವರ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಸ್ಪಿನ್ ದಾಳಿ ಮೂಲಕ ಸರಿದೂಗಿಸುವಲ್ಲಿ ಯಶಸ್ವಿಯಾದರು.

    ಸದ್ಯ ಉಮೇಶ್ ಯಾದವ್ ಅವರನ್ನು ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿದ್ದು, ಇನ್ನಷ್ಟೇ ಟೆಸ್ಟ್​ ರಿಪೋರ್ಟ್ ಬರಬೇಕಿದೆ. ಒಂದು ವೇಳೆ ಅವರ ಸಮಸ್ಯೆಯು ಗಂಭೀರವಾಗಿದ್ದರೆ 4ನೇ ದಿನ ಕಣಕ್ಕಿಳಿಯುವುದು ಅನುಮಾನ. ಹಾಗೆಯೇ ಮುಂದಿನ ಪಂದ್ಯದಿಂದಲೂ ಕೈ ಬಿಡುವ ಸಾಧ್ಯತೆ ಕೂಡ ಇದೆ. ಈಗಾಗಲೇ ತಂಡದ ಇಬ್ಬರು ಪ್ರಮುಖ ಬೌಲರುಗಳಾದ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ಅವರು ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಪಿತೃತ್ವ ರಜೆ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಿದ್ದಾರೆ.



    ಇದೀಗ ಉಮೇಶ್ ಯಾದವ್ ಕೂಡ ಗಾಯಗೊಂಡಿರುವುದು ಟೀಮ್ ಇಂಡಿಯಾವನ್ನು ಚಿಂತೆಗೀಡು ಮಾಡಿದೆ. ಅಲ್ಲದೆ ಸರಣಿಯಿಂದ ಮತ್ತೋರ್ವ ಅನುಭವಿ ಬೌಲರ್​ನನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದೆ. ಒಟ್ಟಿನಲ್ಲಿ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸಮಬಲ ಸಾಧಿಸುವತ್ತ ದಾಪುಗಾಲಿಟ್ಟಿರುವ ಟೀಮ್​ ಇಂಡಿಯಾಗೆ ಇದೀಗ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿರುವುದು ಸುಳ್ಳಲ್ಲ.
    Published by:zahir
    First published: