ಬೆಂಗಳೂರು (ಜ. 19): ಆಸ್ಟ್ರೇಲಿಯಾ ವಿರುದ್ಧ 36 ರನ್ಗಳ ಅಧಪತನದ ಜೊತೆ ಹೀನಾಯ ಸೋಲಿನೊಂದಿಗೆ ಟೆಸ್ಟ್ ಸರಣಿ ಆರಂಭಿಸಿದ ಭಾರತ ಕ್ರಿಕೆಟ್ ತಂಡ ಇಂದು ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಭಾರತ, ಎರಡನೇ ಟೆಸ್ಟ್ನಲ್ಲಿ ಪುಟಿದೆದ್ದು ಪಂದ್ಯವನ್ನು ಗೆದ್ದುಕೊಂಡು ಸರಣಿ ಸಮಬಲ ಸಾಧಿಸಿತ್ತು. ಖಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಮಾತ್ರವಲ್ಲದೆ ಪ್ರಮುಖ ಸ್ಟಾರ್ ಆಟಗಾರರ ಇಂಜುರಿ ನಡುವೆ ಮೂರನೇ ಟೆಸ್ಟ್ನಲ್ಲಿ ರಹಾನೆ ಪಡೆ ಉತ್ತಮ ಪ್ರದರ್ಶನ ತೋರಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಕೊನೆಯ ಟೆಸ್ಟ್ ವೇಳೆಗೆ ಟೀಂ ಇಂಡಿಯಾ ಆಟಗಾರರ ಗಾಯಗದ ಸಮಸ್ಯೆ ಅತಿರೇಕಕ್ಕೆ ಹೋಗಿತ್ತು. ಯಾವೊಬ್ಬ ಅನುಭವಿ ಬೌಲರ್ ತಂಡದಲ್ಲಿ ಇರಲಿಲ್ಲ. ಹೀಗಾಗಿ ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕನೇ ಟೆಸ್ಟ್ನಲ್ಲಿ ಭಾರತ ಜಯ ಸಾಧಿಸುವುದು ಕಷ್ಟ. ಆದ್ರೆ ಕನಿಷ್ಠ ಡ್ರಾ ಆದರೂ ಮಾಡಲಿ ಎಂಬುದು ಅಭಿಮಾನಿಗಳ ಆಸೆಯಾಗಿತ್ತು.
India vs Australia: ಐತಿಹಾಸಿಕ ಜಯ: ರೋಚಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಪಂತ್
ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ ಮುನ್ನಡೆ ಸಾಧಿಸಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಭಾರತ ಕಮ್ಬ್ಯಾಕ್ ಮಾಡಿತು. ಅನಾನುಭವಿ ಬೌಲರ್ಗಳು ಅಮೋಘ ಪ್ರದರ್ಶನ ನೀಡಿದರೆ, ಕೆಟ್ಟ ಹೊಡೆತಗಳಿಂದಲೇ ಔಟ್ ಆಗಿ ಟ್ರೋಲ್ ಆಗುತ್ತಿದ್ದ ರಿಷಭ್ ಪಂತ್ ಗೆಲುವಿನ ರುವಾರಿ ಎನಿಸಿಕೊಂಡರು. ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಕೂಡುಗೆ ಕೂಡ ಮರೆಯುವಂತಿಲ್ಲ.
ಹೀಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತಕ್ಕೆ ಬಿಸಿಸಿಐ ದೊಡ್ಡ ಸರ್ಪ್ರೈಸ್ ಒಂದನ್ನು ನೀಡಿದೆ. ಅದೇನೆಂದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ ಭಾರತೀಯ ತಂಡಕ್ಕೆ ಬರೋಬ್ಬರಿ 5 ಕೋಟಿ ರೂ. ಬೋನಸ್ ನೀಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರು ಗಂಗೂಲಿ, "ಇದೊಂದು ಅವಿಸ್ಮರಣೀಯ ಗೆಲುವು. ಆಸ್ಟ್ರೇಲಿಯಾ ದೇಶಕ್ಕೆ ಪ್ರವಾಸ ಬೆಳೆಸಿ ಈರೀತಿ ಟೆಸ್ಟ್ ಸರಣಿ ಗೆದ್ದಿರುವುದು ನಿಜಕ್ಕೂ ಅದ್ಭುತ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈ ಗೆಲುವು ಎಂದೆಂದಿಗೂ ನೆನಪಿನಲ್ಲಿ ಇರುತ್ತದೆ. ಇದೇ ಖುಷಿಯಲ್ಲಿ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಬೋನಸ್ ನೀಡುತ್ತಿದೆ" ಎಂದು ಹೇಳಿದ್ದಾರೆ.
ಭಾರತ ಸರಣಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್, ಶಿಖರ್ ಧವನ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಕೂಡ ಟ್ವೀಟ್ ಮಾಡಿ ಟೀಂ ಇಂಡಿಯಾ ಸಾಧನೆಯನ್ನು ಹಾಡಿಹೊಗಳಿದ್ದಾರೆ.
Rishabh Pant: ಧೋನಿಯ ಮತ್ತೊಂದು ದಾಖಲೆ ಮುರಿದ ರಿಷಭ್ ಪಂತ್: ಟೆಸ್ಟ್ನಲ್ಲಿ ನೂತನ ಸಾಧನೆ
ಪ್ರಧಾನಿ ನರೇಂದ್ರ ಮೋದಿ ಅವರು, "ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡದ ಯಶಸ್ಸಿನಿಂದ ನಮಗೆಲ್ಲಾ ಬಹಳ ಸಂತೋಷವಾಗಿದೆ. ಸರಣಿಯುದ್ದಕ್ಕೂ ಆಟಗಾರರ ಗಮನಾರ್ಹ ಶಕ್ತಿ ಮತ್ತು ಉತ್ಸಾಹ, ಗುರಿ ಹಾಗೂ ದೃಢ ಸಂಕಲ್ಪ ಕಾಣುತ್ತಿತ್ತು. ಭಾರತ ತಂಡಕ್ಕೆ ಅಭಿನಂದನೆಗಳು, ಅವರ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಒಳ್ಳೆಯದಾಗಲಿ" ಎಂದು ಮೋದಿ ಹಾರೈಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ