ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 26 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಈ ಬಾಕ್ಸಿಂಗ್ ಡೇ ಟೆಸ್ಟ್ ಉಭಯ ತಂಡಗಳಿಗೆ ಮುಖ್ಯವಾಗಿದ್ದು, ಅದರಲ್ಲೂ ಭಾರತಕ್ಕೆ ಪ್ರತಿಷ್ಠೆಯ ಪಂದ್ಯವಾಗಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಯಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಟಗಾರರು ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ನಡುವೆ ಭಾರತಕ್ಕೊಂದು ಗುಡ್ ನ್ಯೂಸ್ ಸಿಕ್ಕಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಹೆಲ್ಮೇಟ್ಗೆ ಚೆಂಡು ತಗುಲಿಸಿಕೊಂಡು ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
India vs Australia: ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಸ್ಟೇಟಸ್ ಹಾಕಿ ಪೃಥ್ವಿ ಶಾ ಹೇಳಿದ್ದೇನು ನೋಡಿ
ಮೊದಲ ಟಿ-20 ಪಂದ್ಯದಲ್ಲಿ ತಲೆಗೆ ಪೆಟ್ಟು ತಿಂದು ಕನ್ಕಶನ್ಗೊಳಗಾಗಿದ್ದ ಜಡೇಜಾ ಅವರನ್ನು ಮೆಲ್ಬರ್ನ್ನಲ್ಲಿ ನಡೆಯುವ ಎರಡನೆ ಟೆಸ್ಟ್ನಲ್ಲಿ ಆಡಿಸುವ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ. ತೊಡೆನೋವಿನ ಸಮಸ್ಯೆಯನ್ನೂ ಅನುಭವಿಸುತ್ತಿದ್ದ ಜಡೇಜಾ ನೆಟ್ಸ್ನಲ್ಲಿ ಭಾಗಿಯಾಗುತ್ತಿರುವರಾದರೂ ಶೇಕಡಾ ನೂರರಷ್ಟು ಫಿಟ್ ಆದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಅಂದರೆ ಕ್ರಿಸ್ಮಸ್ಗೆ ಮೊದಲು ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡರೆ ಅವರನ್ನು ಕಳಪೆ ಫಾರ್ಮ್ನಲ್ಲಿರುವ ಹನುಮ ವಿಹಾರಿ ಸ್ಥಾನದಲ್ಲಿ ಆಡಿಸಲಾಗುವುದು ಎನ್ನಲಾಗಿದೆ.
ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, "ರವೀಂದ್ರ ಜಡೇಜಾ ದೀರ್ಘ ಸ್ಪೆಲ್ ಬೌಲಿಂಗ್ ಮಾಡಲು ಫಿಟ್ ಆದರೆ, ಯಾವುದೇ ಚರ್ಚೆ ಇಲ್ಲ. ಆಲ್ರೌಂಡರ್ ಕೌಶಲದ ಆಧಾರದ ಮೇಲೆ ಜಡೇಜಾ, ಹನುಮ ವಿಹಾರಿ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಆ ಮೂಲಕ ಎಂಸಿಜಿ ಅಂಗಳದಲ್ಲಿ ಐವರು ಬೌಲರ್ಗಳ ಆಯ್ಕೆಗೆ ಅವಕಾಶವನ್ನು ಕಲ್ಪಿಸುತ್ತದೆ," ಎಂದು ಹೇಳಿದ್ದಾರೆ.
ಟೆಸ್ಟ್ಗಳಲ್ಲಿ ಜಡೇಜಾ ಅವರ ಬ್ಯಾಟಿಂಗ್ ಪ್ರದರ್ಶನ ವಿಹಾರಿಗಿಂತ ಉತ್ತಮವಾಗಿದೆ. ಇದುವರೆಗೆ 49 ಟೆಸ್ಟ್ಗಳನ್ನಾಡಿರುವ ಜಡ್ಡು, 35ರ ಸರಾಸರಿಯಲ್ಲಿ 1,869 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 14 ಅರ್ಧ ಶತಕಗಳು ಸೇರಿವೆ. ಗಮನಿಸಬೇಕಿರುವ ಅಂಶವೇನೆಂದರೆ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನೆಲೆಗಳ ಮೇಲೆ ಅವರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇತ್ತ 10 ಟೆಸ್ಟ್ಗಳನ್ನಾಡಿರುವ ವಿಹಾರಿ ಒಂದು ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 33ರ ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ.
India vs Australia: ಏನಿದು ಬಾಕ್ಸಿಂಗ್ ಡೇ ಟೆಸ್ಟ್, ಈ ಹೆಸರು ಏಕೆ ಬಂತು..?
ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ. ಮೊದಲ ಟೆಸ್ಟ್ನ ಹೀನಾಯ ಸೋಲಿನಿಂದ ಪಾಠ ಕಲಿತು ಗೆಲುವಿನ ಲಯಕ್ಕೆ ಮರಳಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಾಗಿ ಓಪನರ್ ಆಗಿ ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಆಡುವ ಅಂದಾಜಿದೆ. ಜೊತೆಗೆ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಜಾಗದಲ್ಲಿ ರಿಷಭ್ ಪಂತ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ