ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲುಕಂಡಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿತು. ಅಜಿಂಕ್ಯಾ ರಹಾನೆ ನಾಯಕತ್ವದಡಿಯಲ್ಲಿ ಭಾರತ ತಂಡ ಬ್ಯಾಟಿಂಗ್ - ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿತು. ಸದ್ಯ ಮೂರನೇ ಟೆಸ್ಟ್ಗೆ ಭಾರತ ತಂಡ ಸಜ್ಜಾಗುತ್ತಿದೆ. ಅಲ್ಲದೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಎರಡು ವಾರಗಳ ಕ್ವಾರಂಟೈನ್ ಬಳಿಕ ತಂಡ ಸೇರಿಕೊಂಡಿರುವುದು ಬಲ ಹೆಚ್ಚಿಸಿದೆ. ಇದರ ಜೊತೆಗೆ ಸಿಡ್ನಿ ಟೆಸ್ಟ್ ಭಾರತಕ್ಕೆ ಮುಖ್ಯವಾಗಿದ್ದು ತಂಡದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡಿ ಕಣಕ್ಕಿಳಿಯುವ ಅಂದಾಜಿದೆ.
ಕಳೆದ ಪಂದ್ಯದಲ್ಲಿ ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಹಾಗೂ ಮೊಹಮ್ಮದ್ ಶಮಿ ಬದಲು ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅಮೋಘ ಪ್ರದರ್ಶನ ನೀಡಿದ್ದರು. ಡೆಬ್ಯೂ ಪಂದ್ಯದಲ್ಲೇ ತಂಡದ ಗೆಲುವಿಗೆ ಇಬ್ಬರೂ ಪ್ರಮುಖ ಪಾತ್ರವಹಿಸಿದ್ದರು. ಮೂರನೇ ಟೆಸ್ಟ್ಗೆ ಮತ್ತೊಬ್ಬ ಆಟಗಾರ ಭಾರತ ಪರ ಪದಾರ್ಪಣೆ ಮಾಡುವುದು ಬಹುತೇಕ ಖಚಿತ ಎನಿಸಿದೆ.
Rohit Sharma: ಟೀಂ ಇಂಡಿಯಾ ಸೇರಿಕೊಂಡ ರೋಹಿತ್ ಶರ್ಮಾ: ಆದ್ರೆ, ಮೂರನೇ ಟೆಸ್ಟ್ಗೆ ಅನುಮಾನ!
ಕಳೆದ ಮೆಲ್ಬೋರ್ನ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿರುವ ವೇಗಿ ಉಮೇಶ್ ಯಾದವ್ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಇವರ ಬದಲಿಗೆ ಎಡಗೈ ವೇಗಿ ಟಿ. ನಟರಾಜನ್ ಭಾರತ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈಗಾಗಲೆ ಕಾಂಗರೂಗಳ ನಾಡಿನಲ್ಲಿ ಏಕದಿನ, ಟಿ-20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಮಿಂಚಿರುವ ನಟರಾಜನ್, ಸದ್ಯ ನೆಟ್ ಬೌಲರ್ ಆಗಿ ಟೆಸ್ಟ್ ತಂಡದ ಜತೆಗಿದ್ದಾರೆ. ಹೀಗಾಗಿ ಉಮೇಶ್ ಜಾಗದಲ್ಲಿ ಇವರು ಆಡುವ ಸಾಧ್ಯತೆ ಹೆಚ್ಚಿದೆ.
ಮೊದಲ ಎರಡೂ ಟೆಸ್ಟ್ನಲ್ಲಿ ಮಯಾಂಕ್ ಅಗರ್ವಾಲ್ ಬ್ಯಾಟ್ನಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಮೂಡಿಬಂದಿಲ್ಲ. ಮೊದಲ ಟೆಸ್ಟ್ನಲ್ಲಿ 17, 9 ಹಾಗೂ ಎರಡನೇ ಟೆಸ್ಟ್ನಲ್ಲಿ 0, 5 ರನ್ಗೆ ಔಟ್ ಆಗಿ ಕಳಪೆ ಫಾರ್ಮ್ನಲ್ಲಿದ್ದಾರೆ. ರೋಹಿತ್ ಶರ್ಮಾ ಫಿಟ್ ಆಗಿ ಆಡುವುದು ಖಚಿತವಾದರೆ, ಮಯಾಂಕ್ ಬೆಂಚ್ ಕಾಯಬೇಕಾಗುತ್ತದೆ.
ಇನ್ನೂ ಹನುಮಾ ವಿಹಾರಿ ಬ್ಯಾಟ್ ಕೂಡ ಆಸೀಸ್ ನೆಲದಲ್ಲಿ ಸದ್ದು ಮಾಡುತ್ತಿಲ್ಲ. ಮಧ್ಯಮ ಕ್ರಮಾಂಕದ ಬಲ ಭಾರತಕ್ಕೆ ಮುಖ್ಯ. ಹೀಗಾಗಿ ವಿಹಾರಿ ಬದಲು ಅವಕಾಶಕ್ಕಾಗಿ ಕಾಯುತ್ತಿರುವ ಕೆ. ಎಲ್ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ತಂಡ ಸೇರಿಕೊಂಡ ರೋಹಿತ್ ಶರ್ಮಾ:
ಎರಡು ವಾರಗಳ ಕಾಲ ಕ್ವಾರಂಟೈನ್ನಲ್ಲಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ತಂಡ ಸೇರಿಕೊಂಡಿದ್ದಾರೆ. ಮೆಲ್ಬೋರ್ನ್ನಲ್ಲಿ ರೋಹಿತ್ ಅವರು ಭಾರತೀಯ ಆಟಗಾರರಿರುವ ಹೋಟೆಲ್ಗೆ ಆಗಮಿಸಿ, ಆಟಗಾರರನ್ನು ಭೇಟಿ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ. "ಮೆಲ್ಬೋರ್ನ್ನಲ್ಲಿ ಯಾರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ ನೋಡಿ, ರೋಹಿತ್ ಶರ್ಮಾ ಭಾರತ ತಂಡವನ್ನು ಸೇರಿಕೊಂಡಿದ್ದು, ಅವರಿಗೆ ಆತ್ಮೀಯ ಸ್ವಾಗತ." ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
Look who's joined the squad in Melbourne 😀
A warm welcome for @ImRo45 as he joins the team 🤗#TeamIndia #AUSvIND pic.twitter.com/uw49uPkDvR
— BCCI (@BCCI) December 30, 2020
ಆದರೆ, ಮೂರನೇ ಟೆಸ್ಟ್ನಲ್ಲಿ ಕಣಕ್ಕಿಳಿಯುವುದು ಅನುಮಾನ. ಹೌದು, "ಕಳೆದ 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಹಿತ್ ಶರ್ಮಾಗೆ ಅಭ್ಯಾಸ ಮಾಡುವ ಅವಕಾಶ ಲಭ್ಯವಾಗಿಲ್ಲ. ದೈಹಿಕಕ್ಷಮತೆ ಯಾವ ಸ್ಥಿತಿಯಲ್ಲಿದೆ ಎನ್ನುವುದರ ಮೇಲೆ ಎಲ್ಲ ನಿರ್ಧಾರವಾಗುತ್ತದೆ. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅವರನ್ನು ಆಡಿಸುವುದೇ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ತೀಮಾನ ಕೈಗೊಳ್ಳಲಾಗುವುದು" ಎಂದು ಕೋಚ್ ರವಿ ಶಾಸ್ತ್ರಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ