INDIA VS AUSTRALIA LIVE: ಭಾರತ ಉತ್ತಮ ಪ್ರದರ್ಶನ, ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಪತನ
India Vs Australia Gabba Test 4th Day Live Score: ಮಾರ್ಕಸ್ ಹ್ಯಾರಿಸ್ ಶಾರ್ದುಲ್ ಠಾಕೂರ್ ಓವರ್ನಲ್ಲಿ ರಿಷಬ್ ಪಂತ್ಗೆ ಕ್ಯಾಚ್ ಕೊಟ್ಟು 38 ರನ್ ಗಳಿಸಿ ಪೆವಿಲಿಯನ್ ಸೇರಿದರು. ಅದರ ಬೆನ್ನಲ್ಲೇ ಡೇವಿಡ್ ವಾರ್ನರ್ ಸಹ 48 ರನ್ ಗಳಿಸಿ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಹೊಸ ದಾಖಲೆ ಬರೆದಿದ್ದಾರೆ. ಚೊಚ್ಚಲ ಪಂದ್ಯವಾಡುತ್ತಿರುವ ಸುಂದರ್ ಹಾಗೂ ಶಾರ್ದೂಲ್ ತಲಾ 3 ವಿಕೆಟ್ ಉರುಳಿಸಿ ಮಿಂಚಿದ್ದರು. ಬಳಿಕ ಬ್ಯಾಟಿಂಗ್ನಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರು. 186 ರನ್ ಗೆ 6ನೇ ವಿಕೆಟ್ ಪತನವಾದಾಗ ಒಂದಾದ ಈ ಜೋಡಿ ಶತಕದ ಜೊತೆಯಾಟವಾಡಿದರು. ಈ ಮೂಲಕ 30 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು. ಇದೀಗ ನಾಲ್ಕನೇ ದಿನದ ಆರಂಭದಲ್ಲೇ ಠಾಕೂರ್ - ಸುಂದರ್ ಜೋಡಿ ಬೌಲಿಂಗ್ನಲ್ಲಿ ಜುಗಲ್ಬಂದಿ ಆರಂಭಿಸಿದ್ದು, ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಹ್ಯಾರಿಸ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಕೇವಲ 5 ರನ್ ಅಂತರದಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್ ಕೈಚೆಲ್ಲಿದೆ. ಈ ಮೂಲಕ, ಪಂದ್ಯವನ್ನು Washington Sundar - Shardhul Thakur ರೋಚಕ ಘಟ್ಟಕ್ಕೆ ತೆಗೆದೊಯ್ಯುವ ಪ್ರಯತ್ನದಲ್ಲಿದ್ದಾರೆ.
ಬ್ರಿಸ್ಬೇನ್ ಗಾಬ್ಬಾ ಮೈದಾನದಲ್ಲಿ 1991ರಲ್ಲಿ ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ 58 ರನ್ ಜೊತೆಯಾಟವಾಡಿರುವುದು 7ನೇ ವಿಕೆಟ್ ಅತ್ಯುತ್ತಮ ಜೊತೆಯಾಟವಾಗಿತ್ತು. ಆದರೆ ಸುಂದರ್ ಹಾಗೂ ಶಾರ್ದೂಲ್ ಜೋಡಿ 59 ರನ್ ಗಳಿಸುವುದರೊಂದಿಗೆ 3 ದಶಕಗಳ ಹಿಂದಿನ ದಾಖಲೆಯನ್ನು ಮುರಿದರು. ಈ ಮೂಲಕ ಗಬ್ಬಾ ಮೈದಾನದಲ್ಲಿ 7ನೇ ವಿಕೆಟ್ ಅತೀ ಹೆಚ್ಚು ರನ್ ಜೊತೆಯಾಟವಾಡಿದ ಜೋಡಿ ಎಂಬ ಹಿರಿಮೆಗೆ ಶಾರ್ದೂಲ್-ಸುಂದರ್ ಪಾತ್ರರಾಗಿದ್ದಾರೆ.
ಇನ್ನು ವಾಷಿಂಗ್ಟನ್ ಸುಂದರ್ (62) ಮತ್ತು ಶಾರ್ದೂಲ್ ಠಾಕೂರ್ (67) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 336 ರನ್ ಗಳಿಸಿತು. ಆಸ್ಟ್ರೇಲಿಯಾದ 369 ರನ್ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ 33 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯಾ 3ನೇ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್ಗೆ ಹೆಚ್ಚಿಸಿಕೊಂಡು ತುಸು ಮೇಲುಗೈ ಸ್ಥಿತಿಯಲ್ಲಿತ್ತು.
ನಾಲ್ಕನೇ ದಿನ ವಿಕೆಟ್ ನಷ್ಟವಿಲ್ಲದೇ ಆಟ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಗತಿಯಲ್ಲಿ ರನ್ ಗಳಿಸುತ್ತಿತ್ತು. ಆದರೆ ಮಾರ್ಕಸ್ ಹ್ಯಾರಿಸ್ ಶಾರ್ದುಲ್ ಠಾಕೂರ್ ಓವರ್ನಲ್ಲಿ ರಿಷಬ್ ಪಂತ್ಗೆ ಕ್ಯಾಚ್ ಕೊಟ್ಟು 38 ರನ್ ಗಳಿಸಿ ಪೆವಿಲಿಯನ್ ಸೇರಿದರು. ಅದರ ಬೆನ್ನಲ್ಲೇ ಡೇವಿಡ್ ವಾರ್ನರ್ ಸಹ 48 ರನ್ ಗಳಿಸಿ ಅರ್ಧಶತಕ ಹೊಸ್ತಿಲಿನಲ್ಲಿ ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.