HOME » NEWS » Sports » CRICKET INDIA VS AUSTRALIA CRICKET SCORE 4TH TEST AT BRISBANE DAY 5 HEROIC RISHABH PANT TAKES IND TO INCREDIBLE WIN VB

India vs Australia: ಐತಿಹಾಸಿಕ ಜಯ: ರೋಚಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಪಂತ್

ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದ ವಿಶೇಷ ಸಾಧನೆ ಮಾಡಿದೆ.

news18-kannada
Updated:January 19, 2021, 1:14 PM IST
India vs Australia: ಐತಿಹಾಸಿಕ ಜಯ: ರೋಚಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಪಂತ್
Rishabh Pant
  • Share this:
ಬ್ರಿಸ್ಬೇನ್ (ಜ. 19): ಇಲ್ಲಿನ ಗಬ್ಬಾದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ರೋಚಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 3 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ರಿಷಭ್ ಪಂತ್ ಅವರ ಸಮಯೋಚಿತ ಆಟ ಹಾಗೂ ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಹಾನೆ ಪಡೆ ಕಾಂಗರೂಗಳ ನಾಡಿನಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡಿದೆ.

ನಿನ್ನೆ ಆಸ್ಟ್ರೇಲಿಯಾವನ್ನು 294 ರನ್​ಗೆ ಆಲೌಟ್ ಮಾಡಿ 328 ರನ್​ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಅಂತಿಮ ಸೆಷನ್​ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಬೇಗನೆ ದಿನದಾಟವನ್ನು ಮುಗಿಸಲಾಯಿತು.

ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಆರಂಭದಲ್ಲೇ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜೊತೆಯಾದ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್ ಕಚ್ಚಿ ನಿಂತರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವಿನ ಆಸೆಯನ್ನು ಚುಗುರಿಸಿತು.

ಆದರೆ, ಶತಕದ ಅಂಚಿನಲ್ಲಿ ಎಡವಿದ ಗಿಲ್ 146 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಿಡಿಸಿ 91 ರನ್​ಗೆ ಔಟ್ ಆದರು. ನಾಯಕ ಅಜಿಂಕ್ಯಾ ರಹಾನೆ 1 ಸಿಕ್ಸ್, ಬೌಂಡರಿ ಬಾರಿಸಿ 24 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ರಿಷಭ್ ಪಂತ್ ಹಾಗೂ ಪೂಜಾರ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು.




ಅರ್ಧಶತಕ ಬಾರಿಸಿದ ಬಳಿಕ ಪೂಜಾರ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 211 ಎಸೆತಗಳಲ್ಲಿ 56 ರನ್ ಗಳಿಸಿ ಎಲ್​ಬಿ ಬಲೆಗೆ ಪೂಜಾರ ಸಿಲುಕಿದರು. ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 9 ರನ್​ಗೆ ನಿರ್ಗಮಿಸಿದರು. ಆದರೆ, ಇತ್ತ ರಿಷಭ್ ಪಂತ್ ತಂಡದ ಗೆಲುವಿಗೆ ಹೋರಾಟ ನಡೆಸುತ್ತಲೇ ಇದ್ದರು.

ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಜೊತೆಗೂಡಿದ ಪಂತ್ ಆಕರ್ಷಕ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಭಾರತ 97 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 329 ರನ್ ಬಾರಿಸಿ 3 ವಿಕೆಟ್​ಗಳ ಜಯ ತನ್ನದಾಗಿಸಿತು.

ರಿಷಭ್ ಪಂತ್ 138 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 89 ರನ್ ಬಾರಿಸಿದರು. ಸುಂದರ್ 22 ರನ್ ಗಳಿಸಿದರು. ಆಸೀಸ್ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಕಿತ್ತರೆ, ನೇಥನ್ ಲ್ಯಾನ್ 2, ಜೋಷ್ ಹ್ಯಾಜ್ಲೆವುಡ್ 1 ವಿಕೆಟ್ ಪಡೆದರು.

ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸುವ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದ ವಿಶೇಷ ಸಾಧನೆ ಮಾಡಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಸಿರಾಜ್(5 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್(4 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ತಂಡದ ಪರ ಸ್ಟೀವ್ ಸ್ಮಿತ್ 55, ಡೇವಿಡ್ ವಾರ್ನರ್ 48, ಕಾಮೆರನ್ ಗ್ರೀನ್ 37 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಕಾಣಿಕೆ ತಂಡಕ್ಕೆ ಅಷ್ಟೇನು ಸಿಗಲಿಲ್ಲ. ಪರಿಣಾಮ 294 ರನ್​ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 328 ರನ್​ಗಳ ಟಾರ್ಗೆಟ್ ನೀಡಿತು.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್: 369/10 (ಮಾರ್ನಸ್ ಲಾಬುಶೇನ್ 108, ಟಿಮ್ ಪೇಯ್ನ್ 50, ವಾಷಿಂಗ್ಟನ್ ಸುಂದರ್ 89/3)

ಭಾರತ ಪ್ರಥಮ ಇನ್ನಿಂಗ್ಸ್: 336/10 (ಶಾರ್ದೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62, ಜೋಷ್ ಹ್ಯಾಜೆಲ್​ವುಡ್ 57/5)

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್: 294/10 (ಸ್ಟೀವ್ ಸ್ಮಿತ್ 55, ಡೇವಿಡ್ ವಾರ್ನರ್ 48, ಮೊಹಮ್ಮದ್ ಸಿರಾಜ್ 73/5)

ಭಾರತ ದ್ವಿತೀಯ ಇನ್ನಿಂಗ್ಸ್: 329/7 (ಶುಭ್ಮನ್ ಗಿಲ್ 91, ರಿಷಭ್ ಪಂತದ ಅಜೇಯ 89, ಪ್ಯಾಟ್ ಕಮಿನ್ಸ್ 55/4)
Published by: Vinay Bhat
First published: January 19, 2021, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories