Yuzvendra Chahal: ತನ್ನದೇ ಹೀನಾಯ ದಾಖಲೆ ಮುರಿದು ಗಮನ ಸೆಳೆದ ಚಹಾಲ್..!
2019 ರಲ್ಲಿ ಇಂಗ್ಲೆಂಡ್ ವಿರುದ್ಧ 10 ಓವರ್ನಲ್ಲಿ 1 ವಿಕೆಟ್ ಪಡೆದು 88 ರನ್ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ 1 ರನ್ ಹೆಚ್ಚು ನೀಡುವ ಮೂಲಕ ಕಳಪೆ ದಾಖಲೆಯನ್ನು ನವೀಕರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 66 ರನ್ಗಳಿಂದ ಹೀನಾಯವಾಗಿ ಸೋತಿದೆ. ಈ ಸೋಲಿಗೆ ಪ್ರಮುಖ ಕಾರಣ ಭಾರತದ ಕಳಪೆ ಬೌಲಿಂಗ್. ಅದರಲ್ಲೂ ತಂಡದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರ ಹೀನಾಯ ಪ್ರದರ್ಶನ. ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್ಗೆ 156 ರನ್ಗಳ ಭರ್ಜರಿ ಜೊತೆಯಾಟವಾಡಿದ್ದರು.
ಒಂದೆಡೆ ಬೌಲರುಗಳು ವಿಕೆಟ್ಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಆಸೀಸ್ ಬ್ಯಾಟ್ಸ್ಮನ್ಗಳಿಂದ ದಂಡಿಸಿಕೊಳ್ಳುತ್ತಿದ್ದರು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಬಿಟ್ಟರೆ ಉಳಿದೆಲ್ಲಾ ಬೌಲರುಗಳು ದುಬಾರಿ ಎನಿಸಿಕೊಂಡರು. ಪರಿಣಾಮ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374 ರನ್ ಕಲೆಹಾಕಿತು. ಇತ್ತ 10 ಓವರ್ ಬೌಲಿಂಗ್ ಮಾಡಿದ್ದ ಚಹಾಲ್ ಒಂದು ವಿಕೆಟ್ ಉರುಳಿಸಿದ್ದರು. ಆದರೆ ಬಿಟ್ಟು ಕೊಟ್ಟಿದ್ದು ಬರೋಬ್ಬರಿ 89 ರನ್ಗಳು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್ ಎಂಬ ಹೀನಾಯ ದಾಖಲೆಯನ್ನು ಚಹಾಲ್ ತಮ್ಮಲ್ಲೇ ಉಳಿಸಿಕೊಂಡರು.
ಈ ಕೆಟ್ಟ ದಾಖಲೆ ಈ ಹಿಂದೆ ಚಹಾಲ್ ಅವರ ಹೆಸರಿನಲ್ಲಿಯೇ ಇತ್ತು. 2019 ರಲ್ಲಿ ಇಂಗ್ಲೆಂಡ್ ವಿರುದ್ಧ 10 ಓವರ್ನಲ್ಲಿ 1 ವಿಕೆಟ್ ಪಡೆದು 88 ರನ್ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ 1 ರನ್ ಹೆಚ್ಚು ನೀಡುವ ಮೂಲಕ ಕಳಪೆ ದಾಖಲೆಯನ್ನು ನವೀಕರಿಸಿದ್ದಾರೆ.
ಏಕದಿನ ಕ್ರಿಕೆಟ್ನ ಭಾರತೀಯ ದುಬಾರಿ ಸ್ಪಿನ್ನರ್ಗಳ ಪಟ್ಟಿ ಹೀಗಿದೆ:
ಯಜುವೇಂದ್ರ ಚಹಾಲ್- 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ಓವರ್ಗಳಲ್ಲಿ 89/1
ಯಜುವೇಂದ್ರ ಚಹಾಲ್ - 2019 ರಲ್ಲಿ ಇಂಗ್ಲೆಂಡ್ ವಿರುದ್ಧ 10 ಓವರ್ಗಳಲ್ಲಿ 88/1
ಪಿಯೂಷ್ ಚಾವ್ಲಾ - 2008 ರಲ್ಲಿ ಪಾಕಿಸ್ತಾನ ವಿರುದ್ಧ 10 ಓವರ್ಗಳಲ್ಲಿ 85/0
ಕುಲದೀಪ್ ಯಾದವ್ - 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಓವರ್ಗಳಲ್ಲಿ 84/2
ರವೀಂದ್ರ ಜಡೇಜಾ - 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ಓವರ್ಗಳಲ್ಲಿ 80/2
ಏಕದಿನ ಕ್ರಿಕೆಟ್ನ ಭಾರತೀಯ ದುಬಾರಿ ವೇಗಿಗಳ ಪಟ್ಟಿ ಹೀಗಿದೆ:
ಭುವನೇಶ್ವರ್ ಕುಮಾರ್ - 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಓವರ್ಗಳಲ್ಲಿ 106/1
ಆರ್ ವಿನಯ್ ಕುಮಾರ್ - 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಓವರ್ಗಳಲ್ಲಿ 102/1
ಭುವನೇಶ್ವರ್ ಕುಮಾರ್ - 2017 ರಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಓವರ್ಗಳಲ್ಲಿ 92/1
ಜಹೀರ್ ಖಾನ್ - 2009 ರಲ್ಲಿ ಶ್ರೀಲಂಕಾ ವಿರುದ್ಧ 10 ಓವರ್ಗಳಲ್ಲಿ 88/0
ಜಾವಗಲ್ ಶ್ರೀನಾಥ್ - 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ಓವರ್ಗಳಲ್ಲಿ 87/0