ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ನಾಳೆ ಶುಕ್ರವಾರದಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮೊದಲ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೊಹ್ಲಿ ಪಡೆ ಕೋವಿಡ್ ನಡುವೆ ಆಡುತ್ತಿರುವ ಮೊದಲ ಅಂತರಾಷ್ಟ್ರೀಯ ಪಂದ್ಯ ಕೂಡ ಇದಾಗಿದೆ. ಏಕದಿನ ಬಳಿಕ ಟಿ-20 ಸರಣಿ ನಡೆಯಲಿದೆ. ಆದರೆ, ಭಾರತಕ್ಕೆ ಸದ್ಯ ತಲೆನೋವಾಗಿರುವುದು ಡಿ. 17 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತದ ಇಬ್ಬರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಲಭ್ಯತೆ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಇಂಜುರಿ ಕಾರಣ ಇಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Diego Maradona: ಪುಟ್ಬಾಲ್ ದಂತಕಥೆ ಮರಡೋನಾ ಇನ್ನಿಲ್ಲ
ಅಲ್ಲದೆ ಇತ್ತೀಚೆಗಷ್ಟೆ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್-ಇಶಾಂತ್ ಪ್ರದರ್ಶನ ಸಂಪೂರ್ಣ ತೃಪ್ತಿಕರವಾಗಿಲ್ಲ ಎಂದು ಎನ್ಸಿಎ ಹೇಳಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ಗೆ ಇವರಿಬ್ಬರು ಅಲಭ್ಯರಾಗುವ ಸಾಧ್ಯತೆ ಇದೆ. ಇನ್ನೂ ಮೊದಲ ಟೆಸ್ಟ್ ಬಳಿಕ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ತೆರಳಲಿದ್ದಾರೆ. 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ಪಿತೃತ್ವ ರಜೆಯ ಅವಕಾಶ ನೀಡಿದೆ.
ಹೀಗೆ ಕೊಹ್ಲಿ ಜೊತೆ ರೋಹಿತ್, ಇಶಾಂತ್ ಸೇವೆ ಕೂಡ ತಂಡಕ್ಕೆ ಇಲ್ಲವೆಂದಾದರೆ ಭಾರತ ದುರ್ಬಲ ತಂಡವಾಗಿ ಗೋಚರಿಸುತ್ತದೆ. ಇದಕ್ಕೆ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಒಂದನ್ನು ಮಾಡಿದೆ. ರೋಹಿತ್-ಇಶಾಂತ್ರನ್ನು ಟೆಸ್ಟ್ ಸರಣಿಗೆ ಲಭ್ಯರಾಗುವಂತೆ ಮಾಡಲು ಬಿಸಿಸಿಐ, ಕ್ವಾರಂಟೈನ್ ಅವಧಿಯನ್ನು ಸಡಿಲಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಬಳಿ ಮನವಿ ಮಾಡಿಕೊಂಡಿದೆ ಎಂದು ವರದಿಯಿಂದ ತಿಳಿದುಬಂದಿದೆ.
"ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಅವರಿಗೆ ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಬಿಸಿಸಿಐ ಮಾತುಕತೆ ನಡೆಸುತ್ತಿದೆ. ಇದು ಯುಶಸ್ವಿ ಆಗಿದ್ದೇ ಆದಲ್ಲಿ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ಗೆ ಲಭ್ಯರಾಗಲಿದ್ದಾರೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
KL Rahul: ಧೋನಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ..!
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.
ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್ ಬ್ರಿಸ್ಬೇನ್ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್ 5:30ಕ್ಕೆ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ