ಭಾರತ ತಂಡಕ್ಕೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದಾಗಿನಿಂದ ಇಂಜುರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ಕೆಲ ಸ್ಟಾರ್ ಆಟಗಾರರು ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. ಸದ್ಯ ಮತ್ತೊಬ್ಬ ಪ್ರಮುಖ ಆಟಗಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ನಡೆಯುವುದು ಖಚಿತವಾಗಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್ನ ಮೂರನೇ ದಿನದಾಟದ ವೇಳೆ ಆಲ್ರೌಂಡರ್ ರವೀಂದ್ರ ಜಡೇಜಾ ಇಂಜುರಿಗೆ ತುತ್ತಾಗಿದ್ದು ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟುಮಾಡಿದೆ.
ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವಾಗ ಎಡಗೈ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಸ್ಕ್ಯಾನ್ಗಾಗಿ ಕರೆದೊಯ್ಯಲಾಗಿತ್ತು. ಆಸ್ಟ್ರೇಲಿಯಾ ತಂಡದ ದ್ವಿತೀಯ ಇನಿಂಗ್ಸ್ನಲ್ಲಿ ಎಡಗೈ ಆಟಗಾರ ಫೀಲ್ಡಿಗ್ಗೆ ಬಂದಿರಲಿಲ್ಲ.
India vs Australia: ಬೃಹತ್ ಮುನ್ನಡೆಯುತ್ತ ಆಸ್ಟ್ರೇಲಿಯಾ: ವಿಕೆಟ್ ಕೀಳಲು ಟೀಂ ಇಂಡಿಯಾ ಪರದಾಟ
ಇನ್ನೂ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜಾ ಒಂದು ತಿಂಗಳಿಂದ ಆರು ವಾರಗಳ ಕಾಲ ಮತ್ತೇ ಟೀಂ ಇಂಡಿಯಾದಿಂದ ಹೊರ ನಡೆಯುವ ಸಾಧ್ಯತೆ ಇದೆ. ಆ ಮೂಲಕ ಪ್ರಸ್ತುತ ನಡೆಯುತ್ತಿರುವ ಮೂರನೇ ಟೆಸ್ಟ್ ಹಾಗೂ ಜ. 15ರಿಂದ ಆರಂಭವಾಗಲಿರುವ ಅಂತಿಮ ಪಂದ್ಯಕ್ಕೂ ಅಲಭ್ಯರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ಗೂ ಎಡಗೈ ಆಟಗಾರ ಅನುಮಾನ ಎನ್ನಲಾಗುತ್ತಿದೆ.
ಜಡೇಜಾ ಆಸೀಸ್ ವಿರುದ್ಧದ ಸೀಮಿತ ಓವರ್ಗಳ ಪಂದ್ಯದ ವೇಳೆಯೂ ಗಾಯಗೊಂಡು ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಇನ್ನೂ ಶನಿವಾರ ಮೊಣಕೈಗೆ ಚೆಂಡು ತಗುಲಿಸಿಕೊಂಡಿದ್ದ ರಿಷಭ್ ಪಂತ್ ಸ್ಕ್ಯಾನ್ಗೆ ಒಳಪಡಿಸಲಾಗಿದ್ದು, ವರದಿಗಳಿಂದ ಅವರಿಗೆ ಗಂಭೀರ ಗಾಯವಾಗಿಲ್ಲವೆಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪಂದ್ಯದ ಐದನೇ ದಿನ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ.
ರಿಷಭ್ ಪಂತ್ ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕಮ್ಮಿನ್ಸ್ ಎಸೆದ ಚೆಂಡು ಅವರ ಮೊಣಕೈಗೆ ತಗುಲಿತು. ಈ ವೇಳೆ ಮೈದಾನಕ್ಕೆ ಬಂದ ಫಿಸಿಯೋ ಚಿಕಿತ್ಸೆ ನೀಡಿದ ನಂತರ ಪಂತ್ ಮತ್ತೆ ಬ್ಯಾಟಿಂಗ್ ಮುಂದುವರೆಸಿದರು. ಆದರೆ, ಔಟ್ ಆದ ಬಳಿಕ ಪಂತ್ ಮೊಣಕೈಗೆ ಬಲವಾದ ಪೆಟ್ಟು ಬಿದ್ದಿದ್ದು ಕಂಡುಬಂದಿದೆ. ಅವರನ್ನು ಸ್ಕ್ಯಾನ್ಗಾಗಿ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಪಂತ್ ಬದಲು ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
IPL 2021: ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗನನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್?
ಭಾರತ ಈ ಇಡೀ ಪ್ರವಾಸದಲ್ಲಿ ಗಾಯಾಳುಗಳ ಸಮಸ್ಯೆಗೆ ಸಿಲುಕಿದೆ. ಸರಣಿಗಿಂತ ಮುನ್ನವೇ ರೋಹಿತ್ ಶರ್ಮ, ಇಶಾಂತ್ ಶರ್ಮ ಗಾಯಕ್ಕೆ ಸಿಲುಕಿದ್ದರು. ಬಳಿಕ ಮೊಹಮ್ಮದ್ ಶಮಿ, ಕೆ. ಎಲ್ ರಾಹುಲ್, ಉಮೇಶ್ ಯಾದವ್ ಇಂಜುರಿಯಿಂದಾಗಿ ಸರಣಿಯಿಂದ ಹೊರಬಿದ್ದರು. ಸದ್ಯ ಪಂತ್ ಹಾಗೂ ಜಡೇಜ ಗಾಯದ ಸಮಸ್ಯೆಗೆ ಒಳಗಾಗಿರುವುದು ತಂಡಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ