India vs Australia: ಅಡಿಲೇಡ್ ಮೈದಾನ ಭಾರತೀಯ ಬ್ಯಾಟ್ಸ್​ಮನ್​ಗಳ ಸ್ವರ್ಗ..!

ಅಡಿಲೇಡ್ ಮೈದಾನ ರಾಹುಲ್ ದ್ರಾವಿಡ್ ಅವರ ಅಚ್ಚು ಮೆಚ್ಚಿನ ಮೈದಾನಗಳಲ್ಲಿ ಒಂದು. ದ್ರಾವಿಡ್ 2003 ರಲ್ಲಿ ಇದೇ ಪಿಚ್​ನಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು.

 adelaide oval ground

adelaide oval ground

  • Share this:
    ಟೀಮ್ ಇಂಡಿಯಾ - ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದು, ಆ ಬಳಿಕ ಪಿತೃತ್ವ ರಜೆ ಹಿನ್ನೆಲೆ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲೇ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿ ಕೊಡುವ ಜವಾಬ್ದಾರಿ ಕೊಹ್ಲಿ ಮೇಲಿದೆ.

    ಪ್ರಥಮ ಟೆಸ್ಟ್ ಪಂದ್ಯವು ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ. ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರನ್​ ಮಳೆಹರಿಯುವ ಸಾಧ್ಯತೆಯಿದೆ. ಏಕೆಂದರೆ ಈ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಸಹಕಾರಿ. ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ಪಿಚ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಮಿಂಚಿದ್ದರು ಎಂಬುದು ವಿಶೇಷ.

    ಆಸ್ಟ್ರೇಲಿಯಾದ ಅಡಿಲೇಡ್ ಓವಲ್​ ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತೆ ಮತ್ತೆ ಬ್ಯಾಟಿಂಗ್ ಮಾಡಲು ಬಯಸುತ್ತಾರೆ. ಈ ಗ್ರೌಂಡ್ ಅತ್ಯಂತ ಹಳೆಯ ಮೈದಾನಗಳಲ್ಲಿ ಒಂದು. 1932 ರಲ್ಲಿ, ಈ ಮೈದಾನದಲ್ಲಿ ಡಾನ್ ಬ್ರಾಡ್ಮನ್ ಅಜೇಯ 299 ರನ್ ಬಾರಿಸಿದ್ದರು. ಕಳೆದ ವರ್ಷ ಇದೇ ಮೈದಾನದಲ್ಲಿ ಡೇವಿಡ್ ವಾರ್ನರ್ ತ್ರಿಶತಕ ಸಿಡಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾದಲ್ಲಿನ ಮೈದಾನಗಳಲ್ಲಿ ಇದು ವಿರಾಟ್ ಕೊಹ್ಲಿಯ ನೆಚ್ಚಿನ ಗ್ರೌಂಡ್.

    ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಪಂದ್ಯಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿವೆ. ಆದರೆ ಉಳಿದ ಪಿಚ್​ಗಳಿಗೆ ಹೋಲಿಸಿದರೆ ಅಡಿಲೇಡ್ ವಿಭಿನ್ನವಾಗಿದೆ. ಇಲ್ಲಿಯವರೆಗೆ 78 ಟೆಸ್ಟ್ ಪಂದ್ಯಗಳನ್ನು ಇಲ್ಲಿ ಆಡಲಾಗಿದೆ. ಈ ವೇಳೆ ಮೂಡಿ ಬಂದಿರುವುದು 184 ಶತಕಗಳು ಎಂಬುದು ವಿಶೇಷ. ಪ್ರತಿ ಪಂದ್ಯದಲ್ಲೂ ತಲಾ 2 ಶತಕಗಳಾದರೂ ಇಲ್ಲಿ ಮೂಡಿ ಬರುತ್ತವೆ. ಈ ಮೈದಾನದಲ್ಲಿ ಈವರೆಗೆ 89144 ರನ್ ಗಳಿಸಲಾಗಿದೆ. ಅಂದರೆ ಸರಾಸರಿ 35 ಕ್ಕಿಂತ ಹೆಚ್ಚು. ಆಸ್ಟ್ರೇಲಿಯಾದ ಯಾವುದೇ ಮೈದಾನದಲ್ಲಿ ಈ ವೇಗದಲ್ಲಿ ರನ್​ಗಳಿಸಲಾಗುವುದಿಲ್ಲ. ಮೆಲ್ಬೋರ್ನ್‌ನ ರನ್​ ಸರಾಸರಿ ರನ್ 28.67 ಆದರೆ, ಸಿಡ್ನಿಯಲ್ಲಿ 29.35 ಸರಾಸರಿಯಲ್ಲಿ ರನ್ ಮೂಡಿಬಂದಿವೆ​. ಅಷ್ಟೇ ಅಲ್ಲ, ಅಡಿಲೇಡ್‌ ಮೈದಾನದಲ್ಲಿ ಬ್ಯಾಟ್ಸ್​ಮನ್​ಗಳು ಇದುವರೆಗೆ 21 ದ್ವಿಶತಕ ಬಾರಿಸಿದ್ದಾರೆ.

    ವಿರಾಟ್ ಕೊಹ್ಲಿ ಸಹ ಅಡಿಲೇಡ್ ಮೈದಾನದಲ್ಲಿ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ, ವಿರಾಟ್ ಕೊಹ್ಲಿ ಈ ಮೈದಾನದಲ್ಲೇ ತಮ್ಮ ಮೊದಲ ಶತಕವನ್ನು ಗಳಿಸಿದ್ದರು. 2012 ರಲ್ಲಿ ಅವರು 116 ರನ್ ಬಾರಿಸಿದ್ದರು. ಇದರ ಬಳಿಕ, 2014 ರಲ್ಲಿ ಅವರು ಅಡಿಲೇಡ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 115 ರನ್ ಬಾರಿಸಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ 141 ರನ್ ಸಿಡಿಸಿದ್ದರು. ವಿರಾಟ್ ಇದುವರೆಗೆ ಈ ಮೈದಾನದಲ್ಲಿ 12 ಪಂದ್ಯಗಳಲ್ಲಿ 71 ಕ್ಕೂ ಹೆಚ್ಚು ಸರಾಸರಿಯಲ್ಲಿ 431 ರನ್ ಗಳಿಸಿದ್ದಾರೆ. ಈ ವೇಳೆ 3 ಶತಕಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ವಿರಾಟ್ ಈ ಮೈದಾನದಲ್ಲಿ ಏಕದಿನ ಪಂದ್ಯಗಳನ್ನು ಆಡಿದ್ದು ಇದರಲ್ಲೂ ಶತಕಗಳನ್ನು ಬಾರಿಸಿದ್ದಾರೆ.

    ಅಡಿಲೇಡ್ ಮೈದಾನ ರಾಹುಲ್ ದ್ರಾವಿಡ್ ಅವರ ಅಚ್ಚು ಮೆಚ್ಚಿನ ಮೈದಾನಗಳಲ್ಲಿ ಒಂದು. ದ್ರಾವಿಡ್ 2003 ರಲ್ಲಿ ಇದೇ ಪಿಚ್​ನಲ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು. ಅಡಿಲೇಡ್ ಮೈದಾನದಲ್ಲಿ ದ್ರಾವಿಡ್ ಸರಾಸರಿ 66 ಕ್ಕೂ ಹೆಚ್ಚು. ವೀರೇಂದ್ರ ಸೆಹ್ವಾಗ್ ಅವರು ಸಹ 64 ರ ಸರಾಸರಿಯಲ್ಲಿ 388 ರನ್ ಗಳಿಸಿದ್ದಾರೆ. ಇನ್ನು ವಿಜಯ್ ಹಜಾರೆ ಕೂಡ ಈ ಮೈದಾನದಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, 1981 ರಲ್ಲಿ ಸಂದೀಪ್ ಪಾಟೀಲ್ ಕೂಡ 174 ರನ್ ಬಾರಿಸಿದ್ದರು. ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗ ಎನ್ನಲಾಗುವ ಅಡಿಲೇಡ್​ ಓವಲ್​ ಮೈದಾನದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಮಿಂಚುವ ನಿರೀಕ್ಷೆಯಿದ್ದು, ಅದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಶತಕ ಮೂಡಿ ಬರುವ ಸಾಧ್ಯತೆಯಿದೆ.

    ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
    Published by:zahir
    First published: