ಬ್ರಿಸ್ಬೇನ್ (ಜ. 19): ಇಲ್ಲಿನ ಗಬ್ಬಾದಲ್ಲಿ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನವಾಗಿದ್ದು ಭಾರತ ತಂಡ ಊಟದ ವಿರಾಮದ ವೇಳೆಗೆ 83 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ರಹಾನೆ ಪಡೆಯ ಗೆಲುವಿಗೆ ಇನ್ನೂ 245 ರನ್ಗಳ ಅವಶ್ಯಕತೆಯಿದೆ. ಶುಭ್ಮನ್ ಗಿಲ್ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕ್ರೀಸ್ನಲ್ಲಿದ್ದಾರೆ.
ನಿನ್ನೆ ಆಸ್ಟ್ರೇಲಿಯಾವನ್ನು 294 ರನ್ಗೆ ಆಲೌಟ್ ಮಾಡಿ 328 ರನ್ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಅಂತಿಮ ಸೆಷನ್ನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಬೇಗನೆ ದಿನದಾಟವನ್ನು ಮುಗಿಸಲಾಯಿತು.
Video: 41ರ ಹರೆಯದ ಹಿರಿಯ ವೇಗಿ ದಾಳಿಗೆ ನಲುಗಿದ ಬಲಿಷ್ಠ ಮುಂಬೈ..!
ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಆರಂಭದಲ್ಲೇ 7 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, ಸದ್ಯ 2ನೇ ವಿಕೆಟ್ಗೆ ಜೊತೆಯಾಗಿರುವ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಕ್ರೀಸ್ ಕಚ್ಚಿ ನಿಂತಿದ್ದಾರೆ. ಅದರಲ್ಲೂ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ಸಿರಾಜ್(5 ವಿಕೆಟ್) ಹಾಗೂ ಶಾರ್ದೂಲ್ ಠಾಕೂರ್(4 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ತಂಡದ ಪರ ಸ್ಟೀವ್ ಸ್ಮಿತ್ 55, ಡೇವಿಡ್ ವಾರ್ನರ್ 48, ಕಾಮೆರನ್ ಗ್ರೀನ್ 37 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಕಾಣಿಕೆ ತಂಡಕ್ಕೆ ಅಷ್ಟೇನು ಸಿಗಲಿಲ್ಲ. ಪರಿಣಾಮ 294 ರನ್ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 328 ರನ್ಗಳ ಟಾರ್ಗೆಟ್ ನೀಡಿತು.
IPL 2021: ಕಿಂಗ್ಸ್ ಇಲೆವೆನ್ ಪಂಜಾಬ್ ಈ ಆಟಗಾರರನ್ನು ಕೈ ಬಿಡುವುದು ಬಹುತೇಕ ಖಚಿತ..!
ಭಾರತ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಿಂದ ಸಮವಾಗಿದ್ದು, ಕಳೆದ ಟೆಸ್ಟ್ನಲ್ಲಿ ಭಾರತ ಸೋಲಿನ ದವಡೆಯಿಂದ ಪಾರಾಗಿ ರೋಚಕ ರೀತಿಯಲ್ಲಿ ಡ್ರಾ ಸಾಧಿಸಿತ್ತು. ಈ ನಾಲ್ಕನೇ ಪಂದ್ಯದ ಸದ್ಯದ ಗತಿ ಗಮನಿಸಿದರೆ ಡ್ರಾ ಆಗುವ ಸಾಧ್ಯತೆ ತುಸು ಹೆಚ್ಚಿದ್ದಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ