India vs Australia T20 Live Score: ರೋಚಕ ಘಟಗಟದತ್ತ ಪಂದ್ಯ
IND vs AUS 3rd T20 Live, India vs Australia Live Score: ಟಿ-20 ಕ್ರಿಕೆಟ್ನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತರುವ ಭಾರತ ತನ್ನ ದಾಖಲೆಯನ್ನ ಮುಂದುವರೆಸುತ್ತಾ ನೋಡಬೇಕಿದೆ.
ಸಿಡ್ನಿ (ಡಿ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಂತಿಮ ಟಿ-20 ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 186 ರನ್ ಬಾರಿಸಿದೆ. ಇಂದಿನ ಪಂದ್ಯ ಗೆದ್ದು ಕೊಹ್ಲಿ ಪಡೆ ಸರಣಿ ಕ್ಲೀನ್ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಕಾಂಗರೂ ಪಡೆ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ.
ಸದ್ಯ 187 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್ವೆಲ್ ಬೌಲಿಂಗ್ನ ಎರಡನೇ ಎಸೆತದಲ್ಲಿ ಕೆ. ಎಲ್ ರಾಹುಲ್ ಶೂನ್ಯಕ್ಕೆ ಔಟ್ ಆದರು. ಈ ಸಂದರ್ಭ ಒಂದಾದ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಈ ಜೋಡಿ ಪವರ್ ಪ್ಲೇ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡಿತು. 74 ರನ್ಗಳ ಜೊತೆಯಾಟ ಆಡಿದರು. 9ನೇ ಓವರ್ನಲ್ಲಿ 21 ಎಸೆತಗಳಲ್ಲಿ 28 ರನ್ ಗಳಿಸಿದ ಧವನ್ ಔಟ್ ಆದರು. ಸಂಜು ಸ್ಯಾಮ್ಸನ್ ಆಟ 10 ರನ್ಗೆ ಅಂತ್ಯವಾದರೆ ಶ್ರೇಯಸ್ ಅಯ್ಯರ್ ಬಂದ ಬೆನ್ನಲ್ಲೇ ಸೊನ್ನೆ ಸುತ್ತಿದರು.
ಕ್ರೀಸ್ನಲ್ಲಿ ಅರ್ಧಶತಕ ಸಿಡಿಸಿರುವ ಕೊಹ್ಲಿ ಜೊತೆ ಹಾರ್ದಿಕ್ ಪಾಂಡ್ಯ ಇದ್ದಾರೆ. ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತಾದರೂ ನಂತರದಲ್ಲಿ ಚೇತರಿಕೆ ಕಂಡಿತು. ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಆಡಿದರು.
ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 65 ರನ್ಗಳ ಕಾಣಿಕೆ ನೀಡಿತು. ಆದರೆ, ಸುಂದರ್ ಬೌಲಿಂಗ್ನಲ್ಲಿ ಸ್ಮಿತ್ (24) ಔಟ್ ಆಗುವ ಮೂಲಕ ಆಸೀಸ್ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಸ್ಫೋಟಕ ಆಟ.
ಭಾರತೀಯ ಬೌಲರ್ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಜೊತೆಗೆ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು. 90 ರನ್ಗಳ ಕಾಣಿಕೆ ನೀಡಿದರು. ವೇಡ್ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 80 ರನ್ ಬಾರಿಸಿದರೆ, ಮ್ಯಾಕ್ಸ್ವೆಲ್ ಕೇವಲ36 ಎಸೆತಗಳಲ್ಲಿ 3 ಬೌಂಡರಿ ಸಿಕ್ಸರ್ನೊಂದಿಗೆ 54 ರನ್ ಬಾರಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಶಾರ್ದುಲ್ ಠಾಕೂರ್, ಟಿ. ನಟರಾಜನ್ 1 ವಿಕೆಟ್ ಪಡೆದರು.
ಭಾರತ ತಂಡ: ಶಿಖರ್ ಧವನ್, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ. ನಟರಾಜನ್, ಯಜುವೇಂದ್ರ ಚಹಾಲ್.