India vs Australia T20: ವಿರಾಟ್ ಹೋರಾಟ ವ್ಯರ್ಥ: ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಜಯ

Virat Kohli

Virat Kohli

ವಿರಾಟ್ ಕೊಹ್ಲಿ ಜೊತೆಗೂಡಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. ಹಾರ್ದಿಕ್ 13 ಎಸೆತಗಳಲ್ಲಿ 20 ರನ್ ಬಾರಿಸಿ ಔಟ್ ಆದರು.

  • Share this:

    ಸಿಡ್ನಿ (ಡಿ. 08): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಭಾರತ ವಿರುದ್ಧದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ 12 ರನ್​ಗಳ ರೋಚಕ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥವಾಗಿ ಭಾರತ ವೈಟ್​ವಾಷ್ ಮಾಡುವಲ್ಲಿ ವಿಫಲವಾಯಿತು. ಮೊದಲು ಬ್ಯಾಟ್ ಮಾಡಿರುವ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್​ಗಳಲ್ಲಿ 186 ರನ್ ಬಾರಿಸಿತು.


    ಕಠಿಣ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತು. ಮ್ಯಾಕ್ಸ್​ವೆಲ್ ಬೌಲಿಂಗ್​ನ ಎರಡನೇ ಎಸೆತದಲ್ಲಿ ಕೆ. ಎಲ್ ರಾಹುಲ್ ಶೂನ್ಯಕ್ಕೆ ಔಟ್ ಆದರು. ಈ ಸಂದರ್ಭ ಒಂದಾದ ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.


    ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಈ ಜೋಡಿ ಪವರ್ ಪ್ಲೇ ಅನ್ನು ಉತ್ತಮವಾಗಿ ಉಪಯೋಗಿಸಿಕೊಂಡಿತು. 74 ರನ್​ಗಳ ಜೊತೆಯಾಟ ಆಡಿದರು. 9ನೇ ಓವರ್​ನಲ್ಲಿ 21 ಎಸೆತಗಳಲ್ಲಿ 28 ರನ್ ಗಳಿಸಿದ ಧವನ್ ಔಟ್ ಆದರು. ಸಂಜು ಸ್ಯಾಮ್ಸನ್ ಆಟ 10 ರನ್​ಗೆ ಅಂತ್ಯವಾದರೆ ಶ್ರೇಯಸ್ ಅಯ್ಯರ್ ಬಂದ ಬೆನ್ನಲ್ಲೇ ಸೊನ್ನೆ ಸುತ್ತಿದರು.


    ವಿರಾಟ್ ಕೊಹ್ಲಿ ಜೊತೆಗೂಡಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಆಟಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. ಹಾರ್ದಿಕ್ 13 ಎಸೆತಗಳಲ್ಲಿ 20 ರನ್ ಬಾರಿಸಿ ಔಟ್ ಆದರು. ಇತ್ತ ಅಂಯಿಮ ಹಂತದಲ್ಲಿ ಕೊಹ್ಲಿ ಬಿರುಸಿನ ಆಟ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. 61 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ನೊಂದಿಗೆ 85 ರನ್ ಚಚ್ಚಿದರು.


    ಅಂತಿಮವಾಗಿ ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ  174 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಆಸೀಸ್ ಪರ ಮಿಚೆಲ್ ಸ್ವೆಪ್ಸನ್ 3 ವಿಕೆಟ್ ಕಿತ್ತರು.


    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತಾದರೂ ನಂತರದಲ್ಲಿ ಚೇತರಿಕೆ ಕಂಡಿತು. ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಮ್ಯಾಥ್ಯೂ ವೇಡ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಆಡಿದರು.


    ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 65 ರನ್​ಗಳ ಕಾಣಿಕೆ ನೀಡಿತು. ಆದರೆ, ಸುಂದರ್ ಬೌಲಿಂಗ್​ನಲ್ಲಿ ಸ್ಮಿತ್ (24) ಔಟ್ ಆಗುವ ಮೂಲಕ ಆಸೀಸ್ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ವೇಡ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಆಟ.



    ಭಾರತೀಯ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಜೊತೆಗೆ ಅಮೋಘ ಅರ್ಧಶತಕ ಸಿಡಿಸಿ ಮಿಂಚಿದರು. 90 ರನ್​ಗಳ ಕಾಣಿಕೆ ನೀಡಿದರು. ವೇಡ್ 53 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 80 ರನ್ ಬಾರಿಸಿದರೆ, ಮ್ಯಾಕ್ಸ್​ವೆಲ್ ಕೇವಲ36 ಎಸೆತಗಳಲ್ಲಿ 3 ಬೌಂಡರಿ ಸಿಕ್ಸರ್​ನೊಂದಿಗೆ 54 ರನ್ ಬಾರಿಸಿದರು.


    ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರೆ, ಶಾರ್ದುಲ್ ಠಾಕೂರ್, ಟಿ. ನಟರಾಜನ್ 1 ವಿಕೆಟ್ ಪಡೆದರು.

    Published by:Vinay Bhat
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು