India vs Australia 3rd ODI: ಕೊನೆಗೂ ಕೊನೆಯ ಏಕದಿನ ಪಂದ್ಯ ಗೆದ್ದು ಬೀಗಿದ ಭಾರತ

ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತ ಮ್ಯಾಕ್ಸ್​ವೆಲ್ ಸ್ಫೋಟಕ ಆಟವಾಡಿದರು. ಅರ್ಧಶತಕ ಸಿಡಿಸಿ ಮಿಂಚಿದರಾದರು ಜಯ ತಂದುಕೊಡಲು ಯಶಸ್ವಿಯಾಗಲಿಲ್ಲ.

Team India

Team India

  • Share this:
    ಕ್ಯಾನ್ಬೆರಾ (ಡಿ. 02): ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 13 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಕೊಹ್ಲಿ ಪಡೆ ಸರಣಿ ಕ್ಲೀನ್​ಸ್ವೀಪ್​ನಿಂದ ಪಾರಾಗಿದ್ದು ಬ್ಯಾಟ್ಸ್​ಮನ್​ಗಳು - ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರು.

    ಭಾರತ ನೀಡಿದ್ದ 303 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ನಾಯಕ ಆ್ಯರೋನ್ ಫಿಂಚ್ ಜೊತೆ ಓಪನರ್ ಆಗಿ ಕಣಕ್ಕಿಳಿದ ಮಾರ್ನಸ್‌ ಲಾಬುಶೇನ್(7) ನಟರಾಜನ್ ಬೌಲಿಂಗ್​ನಲ್ಲಿ ಬೇಗನೆ ಔಟ್ ಆದರು.

    ಕಳೆದ ಎರಡೂ ಪಂದ್ಯದಲ್ಲಿ ಸತತ ಶತಕ ಬಾರಿಸಿ ಮಿಂಚಿದ್ದ ಸ್ಟೀವ್ ಸ್ಮಿತ್ ಆಟ ಕೂಡ ಈ ಬಾರಿ 7 ರನ್​ಗೆ ಅಂತ್ಯವಾಯಿತು. ಫಿಂಚ್ ಹಾಗೂ ಮೊರೀಸ್ ಹೆನ್ರಿಕ್ಯೂಸ್(22) ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಈ ನಡುವೆ ಫಿಂಚ್ ಬ್ಯಾಟ್​ನಿಂದ ಭರ್ಜರಿ ಅರ್ಧಶತಕ ಸಿಡಿಸಿಯಿತು.





    ಆದರೆ, ತಂಡವನ್ನು ಗೆಲುವಿನ ತಂಡ ಸೇರಿಸುವಲ್ಲಿ ಎಡವಿದ ಫಿಂಚ್ 82 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಬಾರಿಸಿ 75 ರನ್​ಗೆ ಔಟ್ ಆದರು. ಚೊಚ್ಚಲ ಏಕದಿನ ಪಂದ್ಯವನ್ನಾಡಿದ ಕ್ಯಾಮ್ರೆನ್ ಗ್ರೀನ್ 21 ರನ್​ಗೆ ಸುಸ್ತಾದರು.

    ಈ ಸಂದರ್ಭ ಒಂದಾದ ಅಲೆಕ್ಸ್ ಕ್ಯಾರಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಭಾರತೀಯ ಬೌಲರ್​ಗಳನ್ನು ಕೊಂಚ ಕಾಡಿದರು. ಅರ್ಧಶತಕದ ಜೊತೆಯಾಟವೂ ಆಡಿತು. ಆದರೆ, 42 ಎಸೆತಗಳಲ್ಲಿ 38 ರನ್ ಗಳಿಸಿದ ಕ್ಯಾರಿ ರನೌಟ್​ಗೆ ಬಲಿಯಾದರು.

    ಬಳಿಕ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತ ಮ್ಯಾಕ್ಸ್​ವೆಲ್ ಸ್ಫೋಟಕ ಆಟವಾಡಿದರು. ಅರ್ಧಶತಕ ಸಿಡಿಸಿ ಮಿಂಚಿದರಾದರು ಜಯ ತಂದುಕೊಡಲು ಯಶಸ್ವಿಯಾಗಲಿಲ್ಲ. ಮ್ಯಾಕ್ಸ್​ವೆಲ್ ಕೇವಲ 38 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಬಾರಿಸಿ 59 ರನ್ ಚಚ್ಚಿದರು. ಆಸ್ಟನ್ ಅಗರ್ ಹೋರಾಟ 28 ರನ್​ಗೆ ಅಂತ್ಯವಾಯಿತು.

    ಅಂತಿಮವಾಗಿ ಆಸ್ಟ್ರೇಲಿಯಾ 49.3 ಓವರ್​ಗಳಲ್ಲಿ 289 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಿತ್ತರೆ, ಟಿ. ನಟರಾಜನ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 2, ಕುಲ್ದೀಪ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

    ಭಾರತ ತಂಡ ಏಕದಿನ ಸರಣಿ ಸೋತರೂ ಕೊನೆಯ ಪಂದ್ಯ ಜಯ ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿಸಿದೆ. ಶುಕ್ರವಾರದಿಂದ ಆಸೀಸ್ ವಿರುದ್ಧದ ಟಿ-20 ಸರಣಿ ಆರಂಭವಾಗಲಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕಳೆದ ಎರಡು ಪಂದ್ಯದಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.  ಓಪನರ್​ಗಳಾಗಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಧವನ್ 16 ರನ್​ ಗಳಿಸಿ ಔಟ್ ಆದರು.

    Virat Kohli: ರನ್ ಮೆಷಿನ್ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶ್ವದಾಖಲೆ: ಸಚಿನ್ ದಾಖಲೆ ಬ್ರೇಕ್

    2ನೇ ವಿಕೆಟ್​ಗೆ ಗಿಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 56 ರನ್​ಗಳ ಕಾಣಿಕೆ ನೀಡಿತು. ಗಿಲ್ 39 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಎಲ್​ಬಿ ಬಲೆಗೆ ಸಿಲುಕಿದರು. ಶ್ರೇಯಸ್ ಅಯ್ಯರ್(19) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

    ಇತ್ತ ಕೆ. ಎಲ್ ರಾಹುಲ್(5) ಕೂಡ ಕೊಹ್ಲಿಗೆ ಸಾತ್ ನೀಡದೆ ನಿರ್ಗಮಿಸಿದರು. ಈ ನಡುವೆ ಕೊಹ್ಲಿ ಅರ್ಧಶತಕ ಬಾರಿಸಿದರು. ಆದರೆ, 78 ಎಸೆತಗಳಲ್ಲಿ 63 ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಈ ಸಂದರ್ಭ ಒಂದಾದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸೆಯಾಗಿ ನಿಂತರು. ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ ಅತ್ಯುತ್ತಮ ಶತಕದ ಜೊತೆಯಾಟ(150 ರನ್) ಆಡಿತು.





    ಕೊನೆಯ 5 ಓವರ್​ನಲ್ಲಿ ಬರೋಬ್ಬರಿ 76 ರನ್ ಮೂಡಿಬಂತು. ಹಾರ್ದಿಕ್ 76 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಗಳಿಸಿದರೆ, ಜಡೇಜಾ ಕೇವಲ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ ಅಜೇಯ 66 ರನ್ ಬಾರಿಸಿದರು.

    ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಅಸ್ಟರ್ ಅಗರ್ 2 ವಿಕೆಟ್ ಕಿತ್ತರೆ, ಜೋಷ್ ಹ್ಯಾಜ್ಲೆವುಡ್, ಸೀನ್ ಅಬಟ್ ಹಾಗೂ ಆ್ಯಡಂ ಝಂಪ ತಲಾ 1 ವಿಕೆಟ್ ಪಡೆದರು.
    Published by:Vinay Bhat
    First published: