ಕ್ಯಾನ್ಬೆರಾ (ಡಿ. 02): ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಒಂದುಕಡೆಯಾದರೆ, ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ - ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 50 ಓವರ್ಗಳಲ್ಲಿ 302 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕಳೆದ ಎರಡು ಪಂದ್ಯದಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ಗಳಾಗಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಧವನ್ 16 ರನ್ ಗಳಿಸಿ ಔಟ್ ಆದರು.
Virat Kohli: ರನ್ ಮೆಷಿನ್ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶ್ವದಾಖಲೆ: ಸಚಿನ್ ದಾಖಲೆ ಬ್ರೇಕ್
2ನೇ ವಿಕೆಟ್ಗೆ ಗಿಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 56 ರನ್ಗಳ ಕಾಣಿಕೆ ನೀಡಿತು. ಗಿಲ್ 39 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಎಲ್ಬಿ ಬಲೆಗೆ ಸಿಲುಕಿದರು. ಶ್ರೇಯಸ್ ಅಯ್ಯರ್(19) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಇತ್ತ ಕೆ. ಎಲ್ ರಾಹುಲ್(5) ಕೂಡ ಕೊಹ್ಲಿಗೆ ಸಾತ್ ನೀಡದೆ ನಿರ್ಗಮಿಸಿದರು. ಈ ನಡುವೆ ಕೊಹ್ಲಿ ಅರ್ಧಶತಕ ಬಾರಿಸಿದರು. ಆದರೆ, 78 ಎಸೆತಗಳಲ್ಲಿ 63 ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಈ ಸಂದರ್ಭ ಒಂದಾದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸೆಯಾಗಿ ನಿಂತರು. ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ ಅತ್ಯುತ್ತಮ ಶತಕದ ಜೊತೆಯಾಟ(150 ರನ್) ಆಡಿತು.
ಕೊನೆಯ 5 ಓವರ್ನಲ್ಲಿ ಬರೋಬ್ಬರಿ 76 ರನ್ ಮೂಡಿಬಂತು. ಹಾರ್ದಿಕ್ 76 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಗಳಿಸಿದರೆ, ಜಡೇಜಾ ಕೇವಲ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ ಅಜೇಯ 66 ರನ್ ಬಾರಿಸಿದರು.
ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಅಸ್ಟರ್ ಅಗರ್ 2 ವಿಕೆಟ್ ಕಿತ್ತರೆ, ಜೋಷ್ ಹ್ಯಾಜ್ಲೆವುಡ್, ಸೀನ್ ಅಬಟ್ ಹಾಗೂ ಆ್ಯಡಂ ಝಂಪ ತಲಾ 1 ವಿಕೆಟ್ ಪಡೆದರು.
ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್ (ನಾಯಕ), ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೊಯ್ಸೆಸ್ ಹೆನ್ರಿಕ್ಯೂ, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಆಸ್ಟನ್ ಅಗರ್, ಸಿಯಾನ್ ಅಬಾಟ್, ಜೋಶ್ ಹ್ಯಾಝಲ್ವುಡ್, ಆ್ಯಡಂ ಝಂಪ.
ಭಾರತ ತಂಡ: ಶಿಖರ್ ಧವನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಟಿ. ನಟರಾಜನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ