ಮೆಲ್ಬೋರ್ನ್ (ಡಿ. 29): ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಬ್ಯಾಟಿಂಗ್ - ಬೌಲಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯರು 8 ವಿಕೆಟ್ಗಳ ಜಯ ಸಾಧಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಈ ಮೂಲಕ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲುಕಂಡಿದ್ದ ಭಾರತ ಎರಡನೇ ಟೆಸ್ಟ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿದೆ.
ನಿನ್ನೆ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ 2 ರನ್ಗಳ ಮುನ್ನಡೆ ಸಾಧಿಸಿದ್ದ ಆಸೀಸ್ ಇಂದು ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಉಮೇಶ್ ಯಾದವ್ ಅನುಪಸ್ಥಿತಿಯಲ್ಲೂ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಬೆಂಕಿಯ ಚೆಂಡು ಉಗುಳಿದರು.
ಆಸ್ಟ್ರೇಲಿಯಾ ಪರ ಇಂದು ಬ್ಯಾಟಿಂಗ್ ಮುಂದುವರೆಸಿದ ಕ್ಯಾಮೆರನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬುಮ್ರಾ ಬೌಲಿಂಗ್ನಲ್ಲಿ ಕಮಿನ್ಸ್(22) ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರೆ, ಇವರ ಬೆನ್ನಲ್ಲೆ 45 ರನ್ ಗಳಿಸಿದ್ದ ಗ್ರೀನ್ ಕೂಡ ಔಟ್ ಆದರು.
ನೇಥನ್ ಲ್ಯಾನ್ 3 ಹಾಗೂ ಜೋಷ್ ಹ್ಯಾಜ್ಲೆವುಡ್ 10 ರನ್ಗೆ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್ ಅಜೇಯ 14 ರನ್ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 103.1 ಓವರ್ನಲ್ಲಿ 200 ರನ್ಗೆ ಸರ್ವಪತನ ಕಂಡಿತು. ಭಾರತ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಬುಮ್ರಾ, ಅಶ್ವಿನ್, ಜಡೇಜಾ 2 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದರು.
ಐಸಿಸಿ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ, ಧೋನಿಗಿಲ್ಲ ಸ್ಥಾನ..!
70 ರನ್ಗಳ ಸುಲಭ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಶುರುಮಾಡಿದ ಭಾರತ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಮಯಾಂಕ್ ಅಗರ್ವಾಲ್ 5 ರನ್ಗೆ ಔಟ್ ಆದರೆ, ಚೇತೇಶ್ವರ್ ಪೂಜಾರ ಮತ್ತೊಮ್ಮೆ ವೈಫಲ್ಯ ಅನುಭವಿಸಿ 3 ರನ್ಗೆ ನಿರ್ಗಮಿಸಿದರು. ಬಳಿಕ ಶುಭ್ಮನ್ ಗಿಲ್ ಜೊತೆಯಾದ ನಾಯಕ ಅಜಿಂಕ್ಯಾ ರಹಾನೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
Smashed with authority from Rahane! #AUSvIND pic.twitter.com/lkPbgayOiS
— cricket.com.au (@cricketcomau) December 29, 2020
ಇದಕ್ಕೂ ಮುನ್ನ ಆಸ್ಟ್ರೇಲಿಯಾ 195 ರನ್ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ ತಂಡ 115.1 ಓವರ್ನಲ್ಲಿ 326 ರನ್ ಗಳಿಸಿತ್ತು. ರಹಾನೆ 223 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 112 ರನ್ ಬಾರಿಸಿದರೆ, ಜಡೇಜಾ 159 ಎಸೆತಗಳಲ್ಲಿ 57 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ನೇಥನ್ ಲ್ಯಾನ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ 3 ವಿಕೆಟ್ ಕಿತ್ತರೆ, ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ