HOME » NEWS » Sports » CRICKET INDIA VS AUSTRALIA 2020 LIVE SCORE 2ND ODI MATCH AT SYDNEY AUSTRALIA WON BY 51 RUNS ZP

India vs Australia: ಟೀಮ್ ಇಂಡಿಯಾಗೆ ಫಿಂಚ್ ಪಡೆಯ ಪಂಚ್: ಆಸ್ಟ್ರೇಲಿಯಾ ಪಾಲಾದ ಏಕದಿನ ಸರಣಿ

ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಮ್ಯಾಕ್ಸ್​ವೆಲ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯರಾಗುಳಿದ ಮ್ಯಾಕ್ಸ್​ವೆಲ್ ಅಜೇಯ 63 ರನ್​ಗಳಿಸಿದರು.

news18-kannada
Updated:November 29, 2020, 5:22 PM IST
India vs Australia: ಟೀಮ್ ಇಂಡಿಯಾಗೆ ಫಿಂಚ್ ಪಡೆಯ ಪಂಚ್: ಆಸ್ಟ್ರೇಲಿಯಾ ಪಾಲಾದ ಏಕದಿನ ಸರಣಿ
Australia
  • Share this:
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 51 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 390 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 338 ರನ್​ ಗಳಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿದ ಫಿಂಚ್ ಪಡೆ ಈ ಜಯದೊಂದಿಗೆ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.

390 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 50ರ ಗಡಿದಾಟಿಸಿದ್ದರು. ಆದರೆ 8ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಮುಂದಾದ ಧವನ್ (30) ಹ್ಯಾಝಲ್​ವುಡ್​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ ಮಯಾಂಕ್ ಅಗರ್ವಾಲ್ (28) ಕೂಡ ಕಮಿನ್ಸ್ ಎಸೆತದಲ್ಲಿ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಹಂತದಲ್ಲಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ ಬೌಲರುಗಳು ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. ಆದರೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ನಾಯಕ ಕ್ರೀಸ್ ಕಚ್ಚಿ ನಿಲ್ಲುತ್ತಿದ್ದಂತೆ ಆರ್ಭಟಿಸಲು ಶುರು ಮಾಡಿದರು. ಅಲ್ಲದೆ ಅರ್ಧಶತಕ ಸಿಡಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಮತ್ತೊಂದೆಡೆ 36 ರನ್​ಗಳಿಸಿದ್ದ ಶ್ರೇಯಸ್ ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್​ಗೆ ಪೆವಿಲಿಯನ್ ಕಡೆ ಮುಖ ಮಾಡಲೇಬೇಕಾಯಿತು.

ಈ ಹಂತದಲ್ಲಿ ಕೊಹ್ಲಿ ಜೊತೆಗೂಡಿದ ಕೆಎಲ್ ರಾಹುಲ್ 71 ರನ್​ಗಳ ಜೊತೆಯಾಟವಾಡಿದರು. ಅತ್ತ ಬಿರುಸಿನ ಆಟಕ್ಕೆ ಮುಂದಾದ ಕೊಹ್ಲಿ 7 ಬೌಂಡರಿ 2 ಸಿಕ್ಸರ್​ನೊಂದಿಗೆ 87 ರನ್ ಬಾರಿಸಿದರು. ಈ ವೇಳೆ ಹ್ಯಾಝಲ್​ವುಡ್ ಎಸೆತದಲ್ಲಿ ಹೆನ್ರಿಕ್ಸ್ ಹಿಡಿದ ಸೂಪರ್ ಡೈವ್ ಕ್ಯಾಚ್​ ಕೊಹ್ಲಿಯ ಇನಿಂಗ್ಸ್​ನ್ನು ಅಂತ್ಯಗೊಳಿಸಿತು.

5ನೇ ವಿಕೆಟ್​ಗೆ ಜೊತೆಯಾದ ರಾಹುಲ್- ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. 66 ಎಸೆತಗಳಲ್ಲಿ 5 ಸಿಕ್ಸರ್​ನೊಂದಿಗೆ 76 ರನ್ ಸಿಡಿಸಿದ ರಾಹುಲ್ 44ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ 30 ಎಸೆತಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 87 ರನ್​ಗಳ ಅವಶ್ಯಕತೆಯಿತ್ತು. ಆದರೆ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಹಾರ್ದಿಕ್ ಪಾಂಡ್ಯ  28 ರನ್​ಗಳಿಸಿ ಹೊರನಡೆದರೆ, ಜಡೇಜಾ 11 ಎಸೆತಗಳಲ್ಲಿ 24 ರನ್ ಬಾರಿಸಿ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದರು.

ಇನ್ನು ಟೀಮ್ ಇಂಡಿಯಾದ 9 ವಿಕೆಟ್ ಉರುಳಿಸಿದ ಆಸ್ಟ್ರೇಲಿಯಾ ಅಂತಿಮವಾಗಿ 51 ರನ್​ಗಳ ಜಯ ಸಾಧಿಸಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಆಸೀಸ್ ಪರ ಪ್ಯಾಟ್ ಕಮಿನ್ಸ್ 3 ವಿಕೆಟ್ ಹಾಗೂ ಹ್ಯಾಝಲ್​ವುಡ್, ಝಂಪಾ ತಲಾ 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ ಫಿಂಚ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಫಿಂಚ್ ಹಾಗೂ ವಾರ್ನರ್ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಪವರ್​ ಪ್ಲೇನಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಈ ಜೋಡಿ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿತು. ಪರಿಣಾಮ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಮೂಡಿಬಂತು.ಈ ಹಂತದಲ್ಲಿ 60 ರನ್ ಗಳಿಸಿದ್ದ ಫಿಂಚ್ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಡೇವಿಡ್ ವಾರ್ನರ್ (83) ಶ್ರೇಯಸ್ ಅಯ್ಯರ್ ಮಾಡಿದ ಅದ್ಭುತ ರನೌಟ್​ಗೆ ಬಲಿಯಾಗಬೇಕಾಯಿತು. ಈ ವೇಳೆ ಜೊತೆಗೂಡಿದ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅದರಲ್ಲೂ ಸ್ಮಿತ್ ಭಾರತೀಯ ಬೌಲರುಗಳ ವಿರುದ್ಧ ಬ್ಯಾಟ್ ಝಳಪಳಿಸಿದರು. ಪರಿಣಾಮ ಕೇವಲ 64 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 2 ಸಿಕ್ಸರ್​ನೊಂದಿಗೆ ಶತಕ ಸಿಡಿಸಿದರು.ಈ ವೇಳೆ ಹಾರ್ದಿಕ್ ಪಾಂಡ್ಯಾ ಬೌಲಿಂಗ್​ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಶಮಿಗೆ ಕ್ಯಾಚ್ ನೀಡಿ ಸ್ಮಿತ್ (103) ಹೊರನಡೆದರು. ಬಳಿಕ ಲಾಬುಶೇನ್ 70 ರನ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಸ್ಟೋಟಕ ಬ್ಯಾಟಿಂಗ್ ನೆರವಿನಿಂದ ಆಸೀಸ್ 350 ರ ಗಡಿದಾಟಿಸಿದರು.

ಹಾಗೆಯೇ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಮ್ಯಾಕ್ಸ್​ವೆಲ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯರಾಗುಳಿದ ಮ್ಯಾಕ್ಸ್​ವೆಲ್ ಅಜೇಯ 63 ರನ್​ಗಳೊಂದಿಗೆ ತಂಡದ ಮೊತ್ತವನ್ನು ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ಕ್ಕೆ ತಂದು ನಿಲ್ಲಿಸಿದರು. ಭಾರತದ ಪರ ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: ರಾಹುಲ್ ಮುಂದೆ ಮ್ಯಾಕ್ಸ್​ವೆಲ್ ಆರ್ಭಟ: ಕಾಲೆಳೆದ ಕಿಂಗ್ಸ್ ಇಲೆವೆನ್ ಬ್ಯಾಟಿಂಗ್ ಕೋಚ್
Published by: zahir
First published: November 29, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading