news18-kannada Updated:December 16, 2020, 3:41 PM IST
ವಿರಾಟ್ ಕೊಹ್ಲಿ-ಟಿಮ್ ಪೇನ್.
ಸಿಡ್ನಿ (ಡಿಸೆಂಬರ್ 16); ಕಾಂಗರೂ ನೆಲದಲ್ಲಿ ಏಕದಿನ ಸರಣಿ ಸೋತರೂ ಟಿ-20 ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ವಿಜಯದ ಹಾದಿಗೆ ಮರಳಿರುವ ಭಾರತ ತಂಡ ನಾಳೆಯಿಂದ ಟೆಸ್ಟ್ ಸರಣಿಗಾಗಿ ಕಣಕ್ಕಿಳಿಯಲಿದೆ. ಆಸೀಸ್ ಎದುರು ಭಾರತ ಟೆಸ್ಟ್ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ? ಎಂಬ ಕುತೂಹಲ ಮೂಡಿತ್ತು. ಆದರೆ, ಟೀಮ್ ಇಂಡಿಯಾ ಇಂದು ಆಡುವ ಹನ್ನೊಂದು ಆಟಗಾರರ ಪಟ್ಟಿಯಲ್ಲಿ ಬಿಡುಗಡೆ ಮಾಡಿದ್ದು ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದೆ. ಅದರಂತೆ ಈ ಬಾರಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಪೃಥ್ವಿ ಶಾ ಜೊತೆಗೆ ಮಾಯಾಂಕ್ ಅಗರ್ವಾಲ್ ಕಣಕ್ಕಿಳಿದರೆ ಮಧ್ಯಮ ಕ್ರಮಾಂಕದಲ್ಲಿ ಹನುಮಾ ವಿಹಾರಿಗೆ ಸ್ಥಾನ ದೊರೆತಿದೆ. ಇನ್ನೂ ಸತತ ಕಳಪೆ ಫಾರ್ಮ್ ಅನುಭವಿಸುತ್ತಿರುವ ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಅನುಭವಿ ವೃದ್ಧಿಮಾನ್ ಸಹಾ ಅವರಿಗೆ ಸ್ಥಾನ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಈ ಹಿಂದೆಯೇ ಮಾಹಿತಿ ನೀಡಿದ್ದರು. ಈ ಕುರಿತು ಇಂದು ಮಾತನಾಡಿರುವ ಕೊಹ್ಲಿ, "ಕೆ.ಎಲ್. ರಾಹುಲ್ ನಿಸ್ಸಂಶಯವಾಗಿ ಅತ್ಯುತ್ತಮ ಆಟಗಾರ. ಆದರೆ, ಅವರನ್ನು ತಂಡದೊಳಗೆ ತೆಗೆದುಕೊಳ್ಳುವುದರಿಂದ ತಂಡದ ಸಂಯೋಜನೆ ಬದಲಾಗುತ್ತದೆ. ಸಮತೋಲನವಾದ ತಂಡವನ್ನು ಮೊದಲ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರರಿದ್ದಾರೆ. ಹನುಮ ವಿಹಾರಿ ಸಹ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿಯೇ ರಾಹುಲ್ ಬದಲಿಗೆ ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಅಲ್ಲದೆ, "ನಮ್ಮ ಮುಂದೆ ಆರಂಭಿಕರಾಗಿ ಅನೇಕ ಆಯ್ಕೆಗಳಿವೆ. ಟೆಸ್ಟ್ನಲ್ಲಿ ಕೆ.ಎಲ್. ರಾಹುಲ್ ಅವರ ಪಾತ್ರವನ್ನು ಅರ್ಥ ಮಾಡಿಕೊಳ್ಳಲಾಗುತ್ತಿದೆ. ರೋಹಿತ್ ಶರ್ಮಾ ತಂಡಕ್ಕೆ ಹಿಂದಿರುಗಿದ ನಂತರ ನಾವು ಇನ್ನೊಬ್ಬ ಸ್ಥಾಪಿತ ಓಪನರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದೇವೆ. ಆದ್ದರಿಂದ, ಕೆಎಲ್ ರಾಹುಲ್ ಎಲ್ಲಿ ಮತ್ತು ಹೇಗೆ ಹೊಂದಿಕೊಳ್ಳುತ್ತಾರೆ? ಎಂಬುದು ನಾವು ಸೂಕ್ಷ್ಮವಾಗಿ ಗಮನಿಸಬೇಕು.
ಇದನ್ನೂ ಓದಿ : ICC Test Rankings: ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಪ್ರಕಟ: ಟಾಪ್ 10ನಲ್ಲಿ ಟೀಮ್ ಇಂಡಿಯಾದ 3 ಬ್ಯಾಟ್ಸ್ಮನ್ಗಳು
ನಾವು ನಮ್ಮ ಅತ್ಯುತ್ತಮ ತಂಡವನ್ನು ಆಸ್ಟ್ರೇಲಿಯಾ ಎದುರು ಕಣಕ್ಕಿಳಿಸುವ ನಿಟ್ಟಿನಲ್ಲಿ ಈ ತಂಡವನ್ನು ಆಯ್ಕೆ ಮಾಡಿದ್ದೇವೆ. ಮುಂದಿನ ಪಂದ್ಯಗಳಲ್ಲಿ ತಂಡದ ಸಮತೋಲನಕ್ಕೆ ಅನುಗುಣವಾಗಿಯೇ ತಂಡವನ್ನು ಆಯ್ಕೆ ಮಾಡಲಾಗುವುದು" ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಗುರುವಾರದ ಪಂದ್ಯದಲ್ಲಿ ರಾಹುಲ್ ನಮ್ಮ ಮೊದಲ ಆಯ್ಕೆಯಾಗಿರಲಿಲ್ಲ. ಹೀಗಾಗಿ ಪೃಥ್ವಿ ಶಾ ಮತ್ತು ಶುಭ್ಮನ್ ಗಿಲ್ ನಡುವೆ ಪೈಪೋಟಿ ಇತ್ತು. ಆದರೆ, ನಾವು ಪೃಥ್ವಿ ಶಾ ಅವರಿಗೆ ಅವಕಾಶ ನೀಡಿದ್ದೇವೆ. ಅಲ್ಲದೆ, ಹಿರಿಯರು ಜವಾಬ್ದಾರಿಯುತವಾಗಿ ಆಡುವ ಮೂಲಕ ಯುವಕರು ಸ್ವಾತಂತ್ರ್ಯವಾಗಿ ಬ್ಯಾಟ್ ಬೀಸಲು ಅವಕಾಶ ಕಲ್ಪಿಸಬೇಕು ಎಂದು ಕೊಹ್ಲಿ ಭರವಸೆ ನೀಡಿದ್ದಾರೆ.
Published by:
MAshok Kumar
First published:
December 16, 2020, 3:38 PM IST