ಕ್ಯಾನ್ಬೆರ (ಡಿ. 04): ಇಲ್ಲಿನ ಮನುಕಾ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸವಾಲಿನ ಮೊತ್ತ ಕಲೆಹಾಕಿದೆ. ಕೆ. ಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ ಹಾಗೂ ಜಡೇಜಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ಗಳಲ್ಲಿ 161 ರನ್ ಬಾರಿಸಿದೆ. ಕೊಹ್ಲಿ ಪಡೆ ಏಕದಿನ ಸರಣಿ ಕಳೆದಕೊಂಡ ನೋವಿನಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಇತ್ತ ಫಿಂಚ್ ಪಡೆ ಮತ್ತೊಂದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಭಾರತ ಪರ ಟಿ. ನಟರಾಜನ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ(9) ಆಟ ಕೂಡ ಹೆಚ್ಚುಹೊತ್ತು ನಡೆಯಲಿಲ್ಲ.
ಬಳಿಕ ಕೆ. ಎಲ್ ರಾಹುಲ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಹುಲ್ ಅರ್ಧಶತಕ ಬಾರಿಸಿದರೆ, 15 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಬಾರಸಿದ ಸಂಜು 23 ರನ್ ಗಳಿಸಿ ಔಟ್ ಆದರು. ಮನೀಶ್ ಪಾಂಡೆ ಆಟ ಕೇವಲ 2 ರನ್ಗೆ ಅಂತ್ಯವಾಯಿತು.
ಅರ್ಧಶತಕದ ಬೆನ್ನಲ್ಲೇ ರಾಹುಲ್ ಕೂಡ ಬ್ಯಾಟ್ ಕೆಳಗಿಟ್ಟರು. 40 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ರಾಹುಲ್ 51 ರನ್ ಗಳಿಸಿದರೆ ಹಾರ್ದಿಕ್ ಪಾಂಡ್ಯ 16 ರನ್ಗೆ ಸುಸ್ತಾದರು. ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 44 ರನ್ ಚಚ್ಚಿದರು. ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಮೊಯ್ಸೆಸ್ ಹೆನ್ರಿಕ್ಯೂಸ್ 3 ವಿಕೆಟ್, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಿತ್ತರು.
ಭಾರತ ತಂಡ: ಶಿಖರ್ ಧವನ್, ಕೆ. ಎಲ್ ರಾಹುಲ್ (ವಿ. ಕೀ), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಟಿ. ನಟರಾಜನ್.
IND vs AUS: ಧೋನಿ ದಾಖಲೆಯತ್ತ ಧವನ್ ಚಿತ್ತ: ಇತಿಹಾಸ ನಿರ್ಮಿಸಲು ತಯಾರಾದ ಕೆ. ಎಲ್ ರಾಹುಲ್
ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್ (ನಾಯಕ), ಡಾರ್ಸಿ ಶಾರ್ಟ್, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೊಯ್ಸೆಸ್ ಹೆನ್ರಿಕ್ಯೂಸ್, ಸಿಯಾನ್ ಅಬಾಟ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಜೋಶ್ ಹ್ಯಾಝಲ್ವುಡ್, ಆ್ಯಡಂ ಝಂಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ