India vs Australia: 4 ವಿಕೆಟ್ ಪತನ: ಭಾರತಕ್ಕೆ ಹಾರ್ದಿಕ್-ಧವನ್ ಆಸರೆ

India vs Australia Cricket : ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಕ್ರಿಕೆಟ್ ಲೋಕದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು ರೋಚಕ ಕಾದಾಟ ವೀಕ್ಷಿಸಲು ಅಭಿಮಾನಿಗಳು ಕಾದುಕುಳಿತಿದ್ದಾರೆ.

IND vs AUS Live Score Updates

IND vs AUS Live Score Updates

 • Share this:
  ಸಿಡ್ನಿ (ನ. 27): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಅವರ ಮನಮೋಹಕ ಶತಕ ಹಾಗೂ ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 374 ರನ್ ಬಾರಿಸಿದೆ.

  ಸದ್ಯ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ಜೊತೆ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಕಮಾಲ್ ಮಾಡಲಿಲ್ಲ.  18 ಎಸೆತಗಳಲ್ಲಿ ಕೇವಲ 22 ರನ್ ಬಾರಿಸಿ ಔಟ್ ಆದರು.

  ನಾಯಕ ವಿರಾಟ್ ಕೊಹ್ಲಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 21 ಎಸೆತಗಳಲ್ಲಿ 21 ರನ್ ಗಳಿಸಿ ಫಿಂಚ್​ಗೆ ಕ್ಯಾಚಿತ್ತು ನಿರ್ಗಮಿಸಿದರೆ, ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು. ಧವನ್ ಜೊತೆ ಎಚ್ಚರಿಕೆಯ ಆಟ ಪ್ರದರ್ಶಿಸಲು ಮುಂದಾದ ಕೆ. ಎಲ್ ರಾಹುಲ್ ಕೂಡ 12 ರನ್​ಗೆ ಔಟ್ ಆದರು.

  ಸದ್ಯ ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿಖರ್ ಧವನ್ ಇದ್ದು ಇಬ್ಬರೂ ಅರ್ಧಶತಕ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬೊಂಬಾಟ್ ಆಟ ಪ್ರದರ್ಶಿಸಿದರು. ಭಾರತೀಯ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು.

  ಎಷ್ಟೇ ಪ್ರಯತ್ನ ಪಟ್ಟರೂ, ನಾನಾ ಪ್ರಯೋಗ ಮಾಡಿದರು ಭಾರತಕ್ಕೆ ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. 28 ಓವರ್​ನಲ್ಲಿ ಇವರಿಬ್ಬರು ಒಟ್ಟು 156 ರನ್​ಗಳ ಕಾಣಿಕೆ ನೀಡಿದರು. ವಾರ್ನರ್ 76 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 69 ರನ್ ಗಳಿಸಿದರು.

  ಬಳಿಕ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಗಿ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಫಿಂಚ್ ಶತಕ ಸಿಡಿಸಿ ಮಿಂಚಿದರೆ, ಸ್ಮಿತ್ ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಫಿಂಚ್ 124 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 114 ರನ್ ಗಳಿಸಿದರು. ಮಾರ್ಕಸ್ ಸ್ಟಾಯಿನಿಸ್ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು.

  ಅಂತಿಮ ಹಂತದಲ್ಲಿ ಸ್ಮಿತ್ ಜೊತೆಯಾದ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ 45 ರನ್ ಬಾರಿಸಿದರು. ಕೊನೆಯ 5 ಓವರ್​ಗಳಲ್ಲಿ 44 ರನ್ ಹರಿದುಬಂತು.

  ಸ್ಮಿತ್ ಕೇವಲ 66 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಬಾರಿಸಿ 105 ರನ್ ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತು. ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.

  ಇಂದಿನ ಪಂದ್ಯಕ್ಕೆ ಉಭಯ ತಂಡಗಳು:

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.
  Published by:Vinay Bhat
  First published: