India vs Australia 1st ODI: ಫಿಂಚ್-ಸ್ಮಿತ್ ಆರ್ಭಟಕ್ಕೆ ಸುಸ್ತಾದ ಭಾರತ: ಕೊಹ್ಲಿ ಪಡೆಗೆ 375 ರನ್ಸ್ ಟಾರ್ಗೆಟ್

ಅಂತಿಮ ಹಂತದಲ್ಲಿ ಸ್ಮಿತ್ ಜೊತೆಯಾದ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ 45 ರನ್ ಬಾರಿಸಿದರು.

Aaron finch

Aaron finch

 • Share this:
  ಸಿಡ್ನಿ (ನ. 27): ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿದೆ. ನಾಯಕ ಆ್ಯರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಅವರ ಮನಮೋಹಕ ಶತಕ ಹಾಗೂ ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 374 ರನ್ ಬಾರಿಸಿದೆ.

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬೊಂಬಾಟ್ ಆಟ ಪ್ರದರ್ಶಿಸಿದರು. ಭಾರತೀಯ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು.

  ಎಷ್ಟೇ ಪ್ರಯತ್ನ ಪಟ್ಟರೂ, ನಾನಾ ಪ್ರಯೋಗ ಮಾಡಿದರು ಭಾರತಕ್ಕೆ ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. 28 ಓವರ್​ನಲ್ಲಿ ಇವರಿಬ್ಬರು ಒಟ್ಟು 156 ರನ್​ಗಳ ಕಾಣಿಕೆ ನೀಡಿದರು. ವಾರ್ನರ್ 76 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 69 ರನ್ ಗಳಿಸಿದರು.

  ಬಳಿಕ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಗಿ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಫಿಂಚ್ ಶತಕ ಸಿಡಿಸಿ ಮಿಂಚಿದರೆ, ಸ್ಮಿತ್ ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಫಿಂಚ್ 124 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 114 ರನ್ ಗಳಿಸಿದರು. ಮಾರ್ಕಸ್ ಸ್ಟಾಯಿನಿಸ್ ಬಂದ ಬೆನ್ನಲ್ಲೆ ಶೂನ್ಯಕ್ಕೆ ನಿರ್ಗಮಿಸಿದರು.

  ಅಂತಿಮ ಹಂತದಲ್ಲಿ ಸ್ಮಿತ್ ಜೊತೆಯಾದ ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ 45 ರನ್ ಬಾರಿಸಿದರು. ಕೊನೆಯ 5 ಓವರ್​ಗಳಲ್ಲಿ 44 ರನ್ ಹರಿದುಬಂತು.

  ಸ್ಮಿತ್ ಕೇವಲ 66 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಬಾರಿಸಿ 105 ರನ್ ಸಿಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತು. ಭಾರತ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.

  ಇಂದಿನ ಪಂದ್ಯಕ್ಕೆ ಉಭಯ ತಂಡಗಳು:

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.
  Published by:Vinay Bhat
  First published: