India vs Australia: ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

IND vs AUS Live, India vs Australia Cricket: ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಕ್ರಿಕೆಟ್ ಲೋಕದಲ್ಲಿ ಉಭಯ ತಂಡಗಳೂ ಬಲಿಷ್ಠವಾಗಿದ್ದು ರೋಚಕ ಕಾದಾಟ ವೀಕ್ಷಿಸಲು ಅಭಿಮಾನಿಗಳು ಕಾದುಕುಳಿತಿದ್ದಾರೆ.

Australia vs India

Australia vs India

 • Share this:
  ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯದಲ್ಲಿ ಆರೋನ್ ಫಿಂಚ್ ಪಡೆ 66 ರನ್​ ಭರ್ಜರಿ ಜಯ ಸಾಧಿಸಿದೆ. ಆಸೀಸ್ ನೀಡಿದ 375 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 308 ರನ್​ಗಳಿಸಲಷ್ಟೇ  ಶಕ್ತರಾದರು. ಈ ಮೂಲಕ ಮೂರು ಏಕದಿನ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆ ಅನುಭವಿಸಿದೆ.  ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್​ಗೆ 53 ರನ್​ಗಳ ಜೊತೆಯಾಟವಾಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಯಾಂಕ್ 22 ರನ್​ಗಳಿಸಿ ಹ್ಯಾಝಲ್​ವುಡ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್​ಗೆ ಇಳಿದ ನಾಯಕ ವಿರಾಟ್ ಕೊಹ್ಲಿ ಕಡೆಯಿಂದ ನಿರೀಕ್ಷಿತ ಆಟ ಮೂಡಿ ಬಂದಿರಲಿಲ್ಲ.

  21 ಎಸೆತಗಳಲ್ಲಿ 21 ರನ್ ಬಾರಿಸಿದ ಕೊಹ್ಲಿ ಹ್ಯಾಝಲ್​ವುಡ್ ಎಸೆತದಲ್ಲಿ ಫಿಂಚ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (2) ಬಂದ ವೇಗದಲ್ಲೇ ಹಿಂತಿರುಗಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಕೆಎಲ್ ರಾಹುಲ್ 12 ರನ್​ಗಳಿಸಿ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

  13.3 ಓವರ್​ನಲ್ಲಿ 101 ರನ್​ಗಳಿಸಿದ್ದ ವೇಳೆ ಟೀಮ್ ಇಂಡಿಯಾ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಮತ್ತೊಂದೆಡೆ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಮಾತ್ರ ಕ್ರೀಸ್ ಕಚ್ಚಿ ನಿಂತಿದ್ದರು. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಇದರ ನಡುವೆ ಹಾರ್ದಿಕ್ ಪಾಂಡ್ಯ ಬಿರುಸಿನ ಅರ್ಧಶತಕ ಪೂರೈಸಿದರು. ಅತ್ತ ಎಚ್ಚರಿಕೆಯ ಆಟವಾಡಿದ ಧವನ್ ಕೂಡ ಹಾಫ್ ಸೆಂಚುರಿ ಬಾರಿಸಿದರು. ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 5ನೇ ವಿಕೆಟ್​ಗೆ 128 ರನ್​ಗಳನ್ನು ಕಲೆಹಾಕಿದರು.

  ಆದರೆ 34.2 ಓವರ್​ನಲ್ಲಿ ತಂಡದ ಮೊತ್ತ 229 ಆಗಿದ್ದ ವೇಳೆ ಆ್ಯಡಂ ಝಂಪ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಶಿಖರ್ ಧವನ್ ಸ್ಟಾರ್ಕ್​ಗೆ ಕ್ಯಾಚ್ ನೀಡಿದರು. 86 ಎಸೆತಗಳನ್ನು ಎದುರಿಸಿದ್ದ ಧವನ್ 10 ಬೌಂಡರಿಗಳೊಂದಿಗೆ 74 ರನ್ ಬಾರಿಸಿ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

  ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ಬೌಲರುಗಳನ್ನು ದಂಡಿಸಿದ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಸಿಡಿಸುವ ಸನಿಹದಲ್ಲಿ ಎಡವಿದರು. 75 ಎಸೆತಗಳಲ್ಲಿ 90 ರನ್ ಬಾರಿಸಿದ್ದ ವೇಳೆ ಝಂಪಾ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾಗಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು. ಈ ಅಮೋಘ ಇನಿಂಗ್ಸ್​ನಲ್ಲಿ ಪಾಂಡ್ಯ ಬ್ಯಾಟ್​ನಿಂದ 7 ಬೌಂಡರಿ ಹಾಗೂ 4 ಸಿಕ್ಸರ್​ಗಳು ಮೂಡಿಬಂದಿತ್ತು.

  ಕೊನೆಯ 9 ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 122 ರನ್​ಗಳ ಅವಶ್ಯಕತೆಯಿದೆ. ಆದರೆ ಈ ಹಂತದಲ್ಲಿ ರವೀಂದ್ರ ಜಡೇಜಾ (25) ಸಹ ವಿಕೆಟ್ ಒಪ್ಪಿಸುವ ಮೂಲಕ ಶರಣಾಗತಿಯನ್ನು ಸೂಚಿಸಿದರು. ಅಂತಿಮ ಓವರ್​ಗಳಲ್ಲಿ ನವದೀಪ್ ಸೈನಿ (29) ಹಾಗೂ ಮೊಹಮ್ಮದ್ ಶಮಿ (13) ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಇವರ ಉಪಯುಕ್ತ ಕಾಣಿಕೆಯಿಂದ ಭಾರತದ ಮೊತ್ತ 300ರ ಗಡಿದಾಟಿತು. ಅಲ್ಲದೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್ ಗಳಿಸುವಂತಾಯಿತು. ಆಸ್ಟ್ರೇಲಿಯಾ ಪರ ಆ್ಯಡಂ ಝಂಪಾ 10 ಓವರ್​ನಲ್ಲಿ 54 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

  ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 156 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿದ್ದರು. 6 ಬೌಂಡರಿ ಸಹಿತ 69 ರನ್ ಬಾರಿಸಿದ ವಾರ್ನರ್ ಶಮಿ ಎಸೆತದಲ್ಲಿ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ಮತ್ತೊಂದೆಡೆ ಕಪ್ತಾನನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಫಿಂಚ್ ಶತಕ ಬಾರಿಸಿದರು. 9 ಬೌಂಡರಿ 2 ಭರ್ಜರಿ ಸಿಕ್ಸರ್ ನೊಂದಿಗೆ 124 ಎಸೆತಗಳಲ್ಲಿ 114 ರನ್ ಸಿಡಿಸಿದರು. ಈ ಹಂತದಲ್ಲಿ ಬುಮ್ರಾ ಎಸೆತದಲ್ಲಿ ರಾಹುಲ್ ಕೈಗೆ ಕ್ಯಾಚ್ ನೀಡಿ ಫಿಂಚ್ ಪೆವಿಲಿಯನ್ ಕಡೆ ಮುಖ ಮಾಡಿದರು. ಆದರೆ ಅದಾಗಲೇ ಬಿರುಸಿನ ಆಟಕ್ಕೆ ಮುಂದಾಗಿದ್ದ ಸ್ಟೀವನ್ ಸ್ಮಿತ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಪರಿಣಾಮ ಕೇವಲ 66 ಎಸೆತಗಳಲ್ಲಿ ಅಮೋಘ 105 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

  ಅಂತಿಮ ಕೆಲ ಓವರ್​ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿದರು. ಪರಿಣಾಮ ಆಸ್ಟ್ರೇಲಿಯಾ ನಿಗದಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದ್ರೆ ,ಬುಮ್ರಾ, ಯಜುವೇಂದ್ರ ಚಹಲ್, ನವದೀಪ್ ಸೈನಿ ಕೇವಲ 1 ಪಡೆದು ದುಬಾರಿ ಎನಿಸಿಕೊಂಡರು.

  ಆಸ್ಟ್ರೇಲಿಯ ತಂಡ: ಆ್ಯರೋನ್ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಗ್ಲೆನ್‌ ಮ್ಯಾಕ್ಸ್​ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಆ್ಯಡಂ ಝಂಪ.

  ಭಾರತ ತಂಡ: ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ. ಎಲ್‌. ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್‌ ಸೈನಿ, ಯಜುವೇಂದ್ರ ಚಹಾಲ್‌, ಮೊಹಮ್ಮದ್‌ ಶಮಿ, ಜಸ್​ಪ್ರೀತ್ ಬುಮ್ರಾ.

  ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
  Published by:zahir
  First published: