India vs Australia: ಬೆಟ್ಟದಂತಹ ಟಾರ್ಗೆಟ್ ಇದ್ದರೂ ಸುಲಭವಾಗಿ ಗೆಲ್ಲಬಹುದಿತ್ತು ಭಾರತ: ಕೊಹ್ಲಿ ಪಡೆ ಎಡವಿದ್ದೆಲ್ಲಿ?

ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. 5 ಓವರ್ ಆಗುವ ಹೊತ್ತಗೆ ತಂಡದ ಮೊತ್ತ 50ರ ಗಡಿ ದಾಟಿತು. ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಆದರೆ...

Team India

Team India

 • Share this:
  ಶುಕ್ರವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಕಾದಾಟದಲ್ಲಿ ಆಸ್ಟ್ರೇಲಿಯಾ 66 ರನ್​​ಗಳ ಅಮೋಘ ಜಯ ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸುಮಾರು ಒಂಬತ್ತು ತಿಂಗಳ ಬಳಿಕ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಟೀಂ ಇಂಡಿಯಾ ಸೋಲುಕಂಡಿತು. ಆದರೆ, ಭಾರತ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿಬಹುದಿತ್ತು. ಆದರೆ, ಎಡವಿದ್ದೆಲ್ಲಿ?.

  ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಪಡೆದುಕೊಂಡಿತು. ನಾಯಕ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬೊಂಬಾಟ್ ಆಟ ಪ್ರದರ್ಶಿಸಿದರು. ಈ ಜೋಡಿಯನ್ನು ಭಾರತ ಆರಂಭದಲ್ಲೇ ಕಟ್ಟಿ ಹಾಕಬಹುದಿತ್ತು. ಆದರೆ, ಫೀಲ್ಡಿಂಗ್​ನಲ್ಲಿ ಅನೇಕ ತಪ್ಪುಗಳನ್ನು ಮಾಡಿ ಕ್ಯಾಚ್ ಕೈಚೆಲ್ಲಿತು. ವಾರ್ನರ್ 69 ರನ್ ಗಳಿಸಿದರೆ, ಫಿಂಚ್(114) ಏಕದಿನ ಕ್ರಿಕೆಟ್​ನಲ್ಲಿ 16ನೇ ಶತಕ ಸಿಡಿಸಿ ನಾಯಕನ ಆಟವಾಡಿದರು.

  Yuzvendra Chahal: ತನ್ನದೇ ಹೀನಾಯ ದಾಖಲೆ ಮುರಿದು ಗಮನ ಸೆಳೆದ ಚಹಾಲ್..!

  ಆಸ್ಟ್ರೇಲಿಯಾ ಮೊತ್ತ 350ರ ಗಡಿ ದಾಟಲು ಪ್ರಮುಖ ಕಾರಣ ಸ್ಟೀವ್ ಸ್ಮಿತ್ ಆಟ. ಕೇವಲ 66 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಬಾರಿಸಿ 105 ರನ್ ಸಿಡಿಸಿದರು. ಶಿಖರ್ ಧವನ್, ಹಾರ್ದಿಕ್ ಪಾಂಡ್ಯರಂತಹ ಟಾಪ್ ಕ್ಲಾಸ್ ಫೀಲ್ಡರ್​ಗಳೇ ಇವರ ಕ್ಯಾಚ್ ಕೈಚೆಲ್ಲಿದ್ದು ದುಬಾರಿ ಆಯಿತು.

  ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ವರ್ಕೌಟ್ ಆಗಿಲ್ಲ. 10 ಓವರ್ ಬೌಲಿಂಗ್ ಮಾಡಿ ಬರೋಬ್ಬರಿ 89 ರನ್​ ನೀಡಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್ ಎಂಬ ಹೀನಾಯ ದಾಖಲೆಯನ್ನೂ ಬರೆದರು. ಮ್ಯಾಕ್ಸ್​ವೆಲ್(19 ಎಸೆತ, 45 ರನ್) ಆಟಕ್ಕೂ ಬ್ರೇಕ್ ಹಾಕಲು ಸಾಧ್ಯವಾಗದ ಕಾರಣ ಆಸ್ಟ್ರೇಲಿಯಾ 374 ರನ್ ಬಾರಿಸಿತು.

  ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. 5 ಓವರ್ ಆಗುವ ಹೊತ್ತಗೆ ತಂಡದ ಮೊತ್ತ 50ರ ಗಡಿ ದಾಟಿತು. ಥೇಟ್ ಟಿ-20 ಮಾದರಿಯಲ್ಲಿ ಬ್ಯಾಟ್ ಬೀಸಿದರು. ಆದರೆ, ರನ್ ಕಲೆಹಾಕುವ ಜೊತೆ ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆ. ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

  ಆದರೆ, ರನ್ ಗತಿಯನ್ನೂ ಎಲ್ಲೂ ಕಡಿಮೆಯಾಗದಂತೆ ಕಾಪಾಡಿಗೊಂಡ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಗೆಲುವಿಗೆ ಹೋರಾಟ ನಡೆಸಿದರು. ಈ ಜೋಡಿ ಕೊನೆ ಹಂತದ ವರೆಗೆ ಕ್ರಿಸ್​ನಲ್ಲಿ ಇದ್ದಿದ್ದರೆ ಭಾರತ ಸುಲಭ ಜಯ ಸಾಧಿಸಿಬಹುದಿತ್ತು. ಧವನ್(74) ಹಾಗೂ ಪಾಂಡ್ಯ(90) ಅನಗತ್ಯ ಹೊಡೆತಕ್ಕೆ ಮಾರುಹೋಗಿ ವಿಕೆಟ್ ಒಪ್ಪಿಸಿದರು. ಇತ್ತ ನವ್​ದೀಪ್ ಸೈನಿ ಉತ್ತಮ ಸಾತ್ ನೀಡುತ್ತಿದ್ದರಾದರೂ ರವೀಂದ್ರ ಜಡೇಜಾ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ.

  India vs Australia: ಇಂಡೋ-ಆಸೀಸ್ ಪಂದ್ಯದ ನಡುವೆ ನವ್​ದೀಪ್ ಸೈನಿ ಬಳಿ ಕ್ಷಮೆ ಕೇಳಿದ ಗಿಲ್ ಕ್ರಿಸ್ಟ್​: ಯಾಕೆ ಗೊತ್ತಾ?

  ಆದರೂ ಭಾರತದ ಮೊತ್ತ 300 ಗಡಿ ದಾಟಿತು. ಈ ಪಂದ್ಯದಲ್ಲಿ ಭಾರತ ಸೋಲಲು ಪ್ರಮುಖ ಕಾರಣ ಕಳಪೆ ಫೀಲ್ಡಿಂಗ್ ಒಂದುಕಡೆಯಾದರೆ, ಬೌಲರ್​ಗಳ ಜೊತೆ ಅನುಭವಿ ಬ್ಯಾಟ್ಸ್​ಮನ್​ಗಳು ಅನುಭವಕ್ಕೆ ತಕ್ಕಂತೆ ಬ್ಯಾಟ್ ಬೀಸದೆ ಇದ್ದಿದ್ದು ಮತ್ತೊಂದು ಕಾರಣ.

  ಎರಡನೇ ಏಕದಿನ ಪಂದ್ಯ ನಾಳೆ ಸಿಡ್ನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ ವಶಪಡಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆ ಉಳಿದಿರುವ ಎರಡೂ ಪಂದ್ಯ ಗೆಲ್ಲಲೇ ಬೇಕಿದೆ.
  Published by:Vinay Bhat
  First published: